ನವದೆಹಲಿ: ಮಾಂಸಾಹಾರಿ ಪ್ರಾಣಿ ಚಿರತೆ ಆಗಾಗ ಹಳ್ಳಿಗಳಿಗೆ ದಾಳಿ ಮಾಡಿ ಕೊಟ್ಟಿಗೆಯಲ್ಲಿರುವ ಜಾನುವಾರು, ನಾಯಿ ಮುಂತಾದ ಸಾಕು ಪ್ರಾಣಿಗಳನ್ನು ಬೇಟೆಯಾಡುವ ಸಂಗತಿ ಕೇಳಿದ್ದೇವೆ. ಅದರಲ್ಲೂ ಇತ್ತೀಚೆಗೆ ಅರಣ್ಯ ಪ್ರದೇಶಗಳ ನಾಶದಿಂದಾಗಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಚಿರತೆಯೊಂದು ಎಮ್ಮೆಯ ಕೊಟ್ಟಿಗೆಯಲ್ಲಿ ಇದ್ದರೂ ಯಾವುದೇ ಆಕ್ರಮಣ ನಡೆಸಿಲ್ಲ. ಎಮ್ಮೆಗಳು ತರಚು ಗಾಯಗಳೂ ಇಲ್ಲದೆ ಪವಾಡ ಸದೃಶವಾಗಿ ಪಾರಾಗಿವೆ. ಸದ್ಯ ಈ ವಿಚಾರ ವೈರಲ್ ಆಗಿದೆ (Viral News). ಈ ಕುರಿತಾದ ವಿವರ ಇಲ್ಲಿದೆ.
ಎಲ್ಲಿ?
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಮೋಟಾ ಸಮಧಿಯಾಲಾ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ರೈತರೊಬ್ಬರ ದನದ ಕೊಟ್ಟಿಗೆ ಗುರುವಾರ (ಜನವರಿ 4) ಈ ಅಪರೂಪದ ಘಳಿಗೆಗೆ ಸಾಕ್ಷಿಯಾಗಿದೆ. ಎಂದಿನಂತೆ ಅಂದೂ ರೈತ ಕಾಂತಿ ಕೊರಟ್ ಎಮ್ಮೆಗಳ ಹಾಲು ಕರೆಯಲು ಕೊಟ್ಟಿಗೆಗೆ ಬಂದಾಗ ಅಲ್ಲಿದ್ದ ಚಿರತೆ ಅವರ ಕಣ್ಣಿಗೆ ಬಿದ್ದಿತ್ತು. ಚಿರತೆ ವಸತಿ ಪ್ರದೇಶಕ್ಕೆ ನುಗ್ಗುವುದನ್ನು ತಡೆಯಲು ಅವರು ಕೂಡಲೆ ಕೊಟ್ಟಿಗೆಯ ಬಾಗಿಲು ಭದ್ರ ಪಡಿಸಿ ಹೊರಗಿನಿಂದ ಬೀಗ ಜಡಿದರು.
ನಂತರ ಕೊರಟ್ ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದರು. ಈ ಮಧ್ಯೆ ಗಾಬರಿ ಬಿದ್ದ ಚಿರತೆ ಬಾಗಿಲು ಮುರಿದು ಕೊಟ್ಟಿಗೆಯಿಂದ ಹೊರ ಬರಲು ಶತ ಪ್ರಯತ್ನ ಪಟ್ಟಿತು. ತನ್ನ ಶ್ರಮವೆಲ್ಲ ವ್ಯರ್ಥವಾದ ಬಳಿಕ ಅದು ಸುಮ್ಮನಾಯಿತು. ಈ ಸಮಯದಲ್ಲಿ ಚಿರತೆ ಒಮ್ಮೆಯೂ ದಾಳಿ ನಡೆಸಲಿಲ್ಲ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಕೊಟ್ಟಿಗೆಯ ಬಾಗಿಲು ತೆಗೆದು ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಸಾಗಿಸಿದರು. ಚಿರತೆಯನ್ನು ನೋಡಲು ಇಡೀ ಊರೇ ಕೊರಟ್ ಅವರ ಮನೆ ಬಳಿ ನೆರೆದಿತ್ತು. ʼʼಸಿಕ್ಕಿಬೀಳುವ ಭಯದಿಂದಾಗಿ ಚಿರತೆ ಎಮ್ಮೆಗಳ ಮೇಲೆ ದಾಳಿ ನಡೆಸಿಲ್ಲ. ಕೆಲವೊಮ್ಮೆ ಅತಿಯಾದ ಗಾಬರಿಯಲ್ಲಿರುವ ಆಕ್ರಮಣಕಾರಿ ಪ್ರಾಣಿಗಳು ಕಣ್ಣೆದುರು ಬೇಟೆ ಇದ್ದರೂ ಸುಮ್ಮನಾಗುತ್ತವೆʼʼ ತಜ್ಞರು ಹೇಳಿದ್ದಾರೆ.
This photo was taken from outside through a gap in the window. It is a leopard and a dog stuck together since this morning inside the toilet of a house in Kadaba, Dakshina Kannada district. I am told the leopard escaped at 2 pm and the dog is alive! pic.twitter.com/hgjJhaXW03
— Prajwal (@prajwalmanipal) February 3, 2021
ಹಿಂದೆಯೂ ನಡೆದಿತ್ತು
ಇದೇ ರೀತಿಯ ಘಟನೆ ಹಿಂದೆಯೂ ನಡೆದಿತ್ತು. ಅದೂ ನಮ್ಮದೇ ರಾಜ್ಯದಲ್ಲಿ ಎನ್ನುವುದು ವಿಶೇಷ. 2021ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಇಂತಹ ಅಪರೂಪದ ಪ್ರಕರಣ ಕಂಡು ಬಂದಿತ್ತು. 2021ರ ಫೆಬ್ರವರಿಯಲ್ಲಿ ಬಿಳಿನೆಲೆ ಗ್ರಾಮದಲ ಮನೆಯೊಂದರ ಶೌಚಾಲಯದಲ್ಲಿ ನಾಯಿ ಮತ್ತು ಚಿರತೆ ಆರು ಗಂಟೆಗಳ ಕಾಲ ಸಿಕ್ಕಿಬಿದ್ದಿದ್ದವು. ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಶೌಚಾಲಯದೊಳಕ್ಕೆ ಪ್ರವೇಶಿಸಿದಾಗ ಮನೆ ಮಾಲಕರು ಹೊರಗಿನಿಂದ ಬಾಗಿಲು ಲಾಕ್ ಮಾಡಿದ್ದರು. ಹೀಗಾಗಿ ಚಿರತೆ ಮತ್ತು ನಾಯಿ ಒಳಗೆ ಬಾಕಿಯಾಗಿದ್ದವು. ನಂತರ ಅರಣ್ಯ ಇಲಾಖೆ ಸ್ಥಳಕ್ಕೆ ಆಗಮಿಸಿ ಚಿರತೆ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದರು. ನಾಯಿ ಕೂಡ ʼಬದುಕಿದೆಯಾ ಬಡ ಜೀವʼ ಎಂದು ಜಾಗ ಖಾಲಿ ಮಾಡಿತ್ತು.
ಚಿರತೆಯು ಸ್ಪಷ್ಟವಾದ, ತಪ್ಪಿಸಿಕೊಳ್ಳುವ ಮಾರ್ಗವಿಲ್ಲದ ಸಣ್ಣ ಜಾಗದಲ್ಲಿ ಸಿಕ್ಕಿಹಾಕಿಕೊಳ್ಳುವ ಮೂಲಕ ಆತಂಕಕ್ಕೊಳಗಾಗಿತ್ತು. ಮಾತ್ರವಲ್ಲ ನಾಯಿ ಪ್ರತಿ ದಾಳಿ ನಡೆಸಬಹುದು ಎನ್ನುವ ಕಾರಣಕ್ಕೂ ಚಿರತೆ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಲು ಮುಂದಾಗಿಲ್ಲ ಎಂದು ಅರಣ್ಯಾಧಿಕಾರಿಗಳು ವಿವರಿಸಿದ್ದರು. ಒಟ್ಟಿನಲ್ಲಿ ಗುಜರಾತ್‌ನ ಚಿರತೆ ಪ್ರಕರಣ ಮತ್ತೊಮ್ಮೆ ಈ ಘಟನೆಯನ್ನು ಮೆಲುಕು ಹಾಕುವಂತೆ ಮಾಡಿದೆ.
ಇದನ್ನೂ ಓದಿ: Viral Video: ಕಣ್ಣೆದುರಿದ್ದರೂ ಬೆಕ್ಕನ್ನು ಬೇಟೆಯಾಡದ ಗಿಡುಗ; ಈ ಕಾರಣಕ್ಕಾಗಿ ವಿಡಿಯೊ ನೋಡಿ