Site icon Vistara News

Viral News: ಹೊಲಕ್ಕೆ ಬಂದ ಚಿರತೆ ಬಳಿ ತೆರಳಿ ಸೆಲ್ಫಿ ತೆಗೆದುಕೊಂಡ ವ್ಯಕ್ತಿ; ಮುಂದೇನಾಯ್ತು? ಭಯಾನಕ ವಿಡಿಯೊ ಇಲ್ಲಿದೆ

Viral News

Viral News

ನವದೆಹಲಿ: ದೇಶಾದ್ಯಂತ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡಿನಿಂದ ನಾಡಿಗೆ ದಾಳಿ ಇಡುವ ಇವು ಕೃಷಿಯನ್ನು ನಾಶಪಡಿಸುವ ಜತೆಗೆ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿವೆ. ಜತೆಗೆ ಮನುಷ್ಯರ ಮೇಲೂ ದಾಳಿ ನಡೆಸಿ ಸಾವು-ನೋವಿಗೆ ಕಾರಣವಾಗುತ್ತಿವೆ. ಆನೆ, ಚಿರತೆ, ಹಂದಿ, ಕರಡಿ ಮುಂತಾದ ಪ್ರಾಣಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಹಳ್ಳಿ ಬಿಡಿ ಈಗೀಗ ಬೆಂಗಳೂರಿನಂತಹ ನಗರ ಪ್ರದೇಶಗಳಿಗೂ ಚಿರತೆಯಂತಹ ಪ್ರಾಣಿಗಳು ದಾಳಿ ನಡೆಸುತ್ತಿವೆ. ಇದೀಗ ತನ್ನ ಹೊಲವೊಂದಕ್ಕೆ ಆಗಮಿಸಿದ ಚಿರತೆ ಜತೆಗೆ ರೈತನೊಬ್ಬ ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಡಿಯೊ ವೈರಲ್‌ ಆಗಿದೆ (Viral Video). ನೆಟ್ಟಿಗರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ಈ ವಿಡಿಯೊವನ್ನು ವೀಕ್ಷಿಸುತ್ತಿದ್ದಾರೆ (Viral News).

ಚಿರತೆ ಎಂದರೆ ಸಾಕು ಮಾರು ದೂರ ಓಡುವವರೇ ಅಧಿಕ. ಆಕ್ರಮಣ ಮನೋಭಾವ ಹೊಂದಿರುವ ಚಿರತೆ ಎಂದರೆ ಜನ ಸಾಮಾನ್ಯರೂ ಬೆಚ್ಚಿ ಬೀಳುತ್ತಾರೆ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ ಬೇರೆಯದೇ ಸನ್ನಿವೇಶವಿದೆ. ಹೊಲವೊಂದರಲ್ಲಿ ಚಿರತೆ ಕುಳಿತಿದೆ. ಚಿರತೆ ಬಳಿಗೆ ಸ್ವಲ್ಪವೂ ಅಳುಕು, ಭಯವಿಲ್ಲದೆ ವ್ಯಕ್ತಿಯೊಬ್ಬ ತೆರಳುತ್ತಾನೆ. ಚಿರತೆ ಕೂಡ ಯಾವುದೇ ದ್ವೇಷ ಪ್ರಕಟಿಸದೆ ಶಾಂತ ಮನೋಭಾವದಿಂದ ಕುಳಿತಿರುತ್ತದೆ. ಇನ್ನಷ್ಟು ಸಮೀಪಕ್ಕೆ ಬಂದ ವ್ಯಕ್ತಿ ಮೊಬೈಲ್‌ ತೆಗೆದು ಚಿರತೆ ಜತೆ ಸೆಲ್ಫಿ ಕ್ಲಿಕ್‌ ಮಾಡುತ್ತಾನೆ. ಚಿರತೆ ಕೂಡ ಬಾಲ ಅಲ್ಲಾಡಿಸಿಕೊಂಡು ʼಖುಷಿಯಿಂದʼ ಪೋಸ್‌ ಕೊಡುತ್ತದೆ.

ನೆಟ್ಟಿಗರಿಗೆ ಅಚ್ಚರಿ

ಸದ್ಯ ಈ ವಿಡಿಯೊವನ್ನು 4 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೊವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎನ್ನುವ ವಿವರ ತಿಳಿದು ಬಂದಿಲ್ಲ. ಆದರೂ ನೆಟ್ಟಿಗರು ಕಣ್ಣು ಅಗಲ ಮಾಡಿಕೊಂಡು ವೀಕ್ಷಿಸಿದ್ದಾರೆ. ಜತೆಗೆ ಆತನ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆಟ್ಟಿಗರು ಏನಂದ್ರು?

ಸದ್ಯ ಈ ಪೋಸ್ಟ್‌ಗೆ ನೂರಾರು ಕಮೆಂಟ್‌ಗಳು ಬಂದಿವೆ. ʼʼಚಿರತೆ ಬಾಲ ಅಲ್ಲಾಡಿಸುತ್ತಿದೆ. ಅಂದರೆ ಅದು ಯಾವುದೇ ಚಿಂತೆ, ಭಯ ಇಲ್ಲದೆ ಆರಾಮವಾಗಿದೆ ಎಂದರ್ಥʼʼ ಎಂದು ಒಬ್ಬರು ಊಹಿಸಿದ್ದಾರೆ. “ಈ ರೀತಿ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯʼʼ ಎಂಬರ್ಥದಲ್ಲಿ ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼನಾನು ದಾಳಿ ನಡೆಸುವ ವ್ಯಾಪ್ತಿ ಕೊನೆಗೊಂಡಿದೆ. ಇದು ನನ್ನ ಸಾಮ್ರಾಜ್ಯ ಅಲ್ಲ ಎಂದು ಚಿರತೆ ಯೋಚಿಸಿರಬೇಕುʼʼ ಎಂದು ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ʼʼಚಿರತೆಗೆ ತೊಂದರೆ ನೀಡದ ಕಾರಣಕ್ಕೆ ಆ ವ್ಯಕ್ತಿಗೆ ಮೆಚ್ಚುಗೆ ಅರ್ಹʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ʼʼಕೊನೆಯ ಸೆಲ್ಫಿʼʼ ಎಂದು ವಿಡಿಯೊ ವೀಕ್ಷಿಸಿದವರೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಈ ʼವಿಶಿಷ್ಟ ಸೆಲ್ಫಿʼ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ.

ಇದನ್ನೂ ಓದಿ: MS Dhoni: ‘ಬೋಲೆ ಜೋ ಕೋಯಲ್’ ಹಾಡು ಹಾಡುತ್ತಾ ಬೈಸಿಕಲ್ ತುಳಿದ ಧೋನಿ; ವಿಡಿಯೊ ವೈರಲ್​

ತಜ್ಞರ ಎಚ್ಚರಿಕೆ

ʼʼಇದೊಂದು ಅಪರೂಪದ ಪ್ರಸಂಗ. ಆದರೆ ಕಾಡು ಪ್ರಾಣಿಗಳ ಸಮೀಪಕ್ಕೆ ತೆರಳುವುದು ಎಂದಿಗೂ ಅಪಾಯಕಾರಿ. ಅವು ಯಾವಾಗ ದಾಳಿ ಮಾಡುತ್ತವೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಯಾರೂ ಕಾಡು ಪ್ರಾಣಿಗಳ ಸಮೀಪಕ್ಕೆ ತೆರಳಿ ಸೆಲ್ಫಿ ತೆಗೆಯುವ, ವೀಡಿಯೊ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿʼʼ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version