Site icon Vistara News

Viral News: ವೈದ್ಯರ ಎಡವಟ್ಟು; ಪಿತ್ತಕೋಶದ ಶಸ್ತ್ರಚಿಕಿತ್ಸೆ ಬದಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರು !

operation

operation

ಬೆಂಗಳೂರು: ಕೆಲವೊಮ್ಮೆ ವೈದ್ಯರು ಮಾಡುವ ಸಣ್ಣದೊಂದು ಎಡವಟ್ಟು, ನಿರ್ಲಕ್ಷ್ಯ ರೋಗಿಯ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವೊಮ್ಮೆ ಪ್ರಾಣವನ್ನೇ ಕಸಿದು ಬಿಡುತ್ತದೆ. ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ದಂತ ವೈದ್ಯರ ನಿರ್ಲಕ್ಷ್ಯದಿಂದ ಯುವಕನೊಬ್ಬ ಮೃತಪಟ್ಟಿದ್ದ. ಇದೀಗ ದೂರದ ಅರ್ಜೆಂಟೀನಾದಲ್ಲಿ ವೈದ್ಯರ ಎಡವಟ್ಟಿನಿಂದ ವ್ಯಕ್ತಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ವೈದ್ಯರು ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ದಾಖಲಾದ ವ್ಯಕ್ತಿಯ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿದ್ದಾರೆ (Viral News).

ಘಟನೆಯ ವಿವರ

41 ವರ್ಷದ ಜಾರ್ಜ್ ಬೇಸೆಟೊ ತೊಂದರೆಗೆ ಸಿಲುಕಿದವರು. ಅವರು ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ಅರ್ಜೆಂಟೀನಾದ ಕಾರ್ಡೋಬಾದಲ್ಲಿರುವ ಫ್ಲೋರೆನ್ಸಿಯೊ ಡಿಯಾಜ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಫೆಬ್ರವರಿ 28ರಂದು ಶಸ್ತ್ರ ಚಿಕಿತ್ಸೆಯ ದಿನ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಫೆಬ್ರವರಿ 29ಕ್ಕೆ ಮುಂದೂಡಲಾಗಿತ್ತು. ʼʼಶಸ್ತ್ರಚಿಕಿತ್ಸೆಯ ದಿನದಂದು ಆಸ್ಪತ್ರೆಯ ಸಿಬ್ಬಂದಿ ಏನನ್ನೂ ಕೇಳದೆ ಅಥವಾ ಹೆಲ್ತ್​​​​ ಚಾರ್ಟ್ ಅನ್ನು ಕೂಡ ಪರಿಶೀಲಿಸದೆ ಆಪರೇಷನ್​​​ ಮಾಡಲು ಕರೆದುಕೊಂಡು ಹೋಗಿದ್ದರುʼʼ ಎಂದು ಜಾರ್ಜ್ ಬೇಸೆಟೊ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಎಚ್ಚರಗೊಂಡ ಜಾರ್ಜ್ ಬೇಸೆಟೊ ಬಳಿ ಸಂತಾನಶಕ್ತಿ ಹರಣ ಚಿಕಿತ್ಸೆಯ ಬಗ್ಗೆ ವೈದ್ಯರು ತಿಳಿಸಿದ್ದರು. ಇದರಿಂದ ಜಾರ್ಜ್ ಬೇಸೆಟೊ ಶಾಕ್‌ಗೆ ಒಳಗಾಗಿದ್ದರು. ನಂತರ ಪಿತ್ತಕೋಶದ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಸದ್ಯ ವೈದ್ಯರ ಈ ಎಡವಟ್ಟಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಜಾರ್ಜ್ ಅವರ ವಕೀಲ ಡಿಯಾಗೋ ಲ್ಯಾರೆ ಮಾತನಾಡಿ, ”ವೈದ್ಯರ ಈ ಮಟ್ಟದ ನಿರ್ಲಕ್ಷ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಜಾರ್ಜ್ ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದರೂ, ಕೂಡ ಅವರು ಹೊಸ ಸಂಬಂಧದಲ್ಲಿದ್ದಾರೆ ಮತ್ತು ಭವಿಷ್ಯದಲ್ಲಿ ಮತ್ತೊಂದು ಮಗು ಹೊಂದಲು ಯೋಜನೆಯನ್ನು ಹಾಕಿಕೊಂಡಿದ್ದರು” ಎಂದು ಹೇಳಿದ್ದಾರೆ. ಜಾರ್ಜ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಹಲ್ಲಿನ ಚಿಕಿತ್ಸೆಗೆಂದು ಬಂದವಳ ತುಟಿಯನ್ನೇ ಕತ್ತರಿಸಿದರು!

ಹೈದರಾಬಾದ್‌: ಹಲ್ಲಿನ ಚಿಕಿತ್ಸೆಗೆಂದು ಬಂದ ಮಹಿಳೆಯ ತುಟಿಯನ್ನೇ ವೈದ್ಯರೊಬ್ಬರು ಗಾಯಗೊಳಿಸಿದ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ದಂತ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಹಿಳೆ ‘ವಿರೂಪಗೊಂಡ’ ತುಟಿ, ಸಾಕಷ್ಟು ದೈಹಿಕ ಮತ್ತು ಮಾನಸಿಕ ನೋವನ್ನು ಅನುಭವಿಸಿದ್ದಾರೆ. ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ಡೆಂಟಲ್ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಚಾರವನ್ನು ಮಹಿಳೆಯ ಗೆಳತಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್‌ ಆಗಿದೆ.

ಇದನ್ನೂ ಓದಿ: Cosmetic Surgery: ನಗು ಹೆಚ್ಚಿಸಿಕೊಳ್ಳಲು ಸರ್ಜರಿಗೆ ಹೋದ ಭಾವಿ ವರನ ನಗುವನ್ನೇ ನಿಲ್ಲಿಸಿದರು

“ಇತ್ತೀಚೆಗಷ್ಟೇ ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ಡೆಂಟಲ್ ಕ್ಲಿನಿಕ್‌ನಲ್ಲಿ ಅನಸ್ತೇಶಿಯ ಒವರ್​​ ಡೋಸ್​​ನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಘಾತವನ್ನುಂಟು ಮಾಡಿದೆ. ಆದರೆ ಇಲ್ಲಿನ ದಂತ ವೈದ್ಯರ ನಿರ್ಲಕ್ಷ್ಯಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಇಂತದ್ದೇ ಘಟನೆ ನಡೆದಿದೆ. ತನ್ನ ಗೆಳತಿಯೊಬ್ಬಳು ಇಲ್ಲಿ ಹಲ್ಲಿನ ಚಿಕಿತ್ಸೆಗೆಂದು ಹೋದಾಗ ವೈದ್ಯರು ಡೆಂಟಲ್​​​ ಬ್ಲೆಡ್​ನಿಂದ ಆಕೆಯ ತುಟಿಗಳನ್ನೇ ಕತ್ತರಿಸಿದ್ದಾರೆ” ಎಂದು ಸೌಮ್ಯಾ ಸಂಗಮ್‌ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ತನ್ನ ಸ್ನೇಹಿತೆಯ ತುಟಿಯ ಫೋಟೊವನ್ನೂ ಲಗತ್ತಿಸಿದ್ದಾರೆ. ಇದರಲ್ಲಿ ತುಟಿಯ ಒಂದು ಭಾಗಕ್ಕೆ ಗಾಯವಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version