ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸಲು ಯುವ ಜನತೆ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ತಯಾರಿರುತ್ತಾರೆ. ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳಿ ಸಾಹಸ ನಡೆಸಿ ಅದನ್ನು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ಮತ್ತೊಂದು ಉದಾಹರಣೆ ಇದು. ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ಯುವಕನೊಬ್ಬ ನೇತಾಡುತ್ತಿರುವುದನ್ನು ತೋರಿಸುವ ವಿಡಿಯೊ ವೈರಲ್ (Viral News) ಆಗಿದ್ದು, ನೆಟ್ಟಿಗರು ಒಂದು ಕ್ಷಣ ದಂಗಾಗಿದ್ದಾರೆ. ಜೀವವನ್ನೇ ಅಪಾಯಕ್ಕೆ ತಳ್ಳಬಹುದಾದ ಈ ಹುಚ್ಚು ಸಾಹಸ ನೋಡಿ ಅನೇಕರು ಆ ಯುವಕನಿಗೆ ಛೀಮಾರಿ ಹಾಕುತ್ತಿದ್ದಾರೆ.
ಚಲಿಸುತ್ತಿರುವ ಕಾರಿನ ಬಾಗಿಲಿಗೆ ತೊಟ್ಟಿಲಂತೆ ಕಟ್ಟಿರುವ ಪ್ಲಾಸ್ಟಿಕ್‌ನಲ್ಲಿ ಯುವಕನೊಬ್ಬ ಮಗುವಿನಂತೆ ಮಲಗಿರುತ್ತಾನೆ. ಕಾರು ಚಲಿಸುತ್ತಿರುವಾಗ ಆತ ಅದರಲ್ಲಿ ನೇತಾಡಿಕೊಂಡು ಆನಂದಿಸುತ್ತಾನೆ. ಚಾಲಕ ನಗುತ್ತ ಆ ಯುವಕನೊಂದಿಗೆ ತಮಾಷೆ ಮಾಡುತ್ತಾನೆ. ಹಿಂದಿನ ಸೀಟಿನಲ್ಲಿರುವ ಇನ್ನೋರ್ವ ಯುವಕನೂ ಈ ಹುಚ್ಚು ಸಾಹಸಕ್ಕೆ ಸಾಕ್ಷಿಯಾಗುತ್ತಾನೆ. ಈ ಕಾರು ಹೈವೆಯಲ್ಲಿ ಸಾಗುತ್ತಿರುತ್ತದೆ. ಇದು ವೈರಲ್ ವಿಡಿಯೊದಲ್ಲಿ ಕಂಡು ಬರುವ ದೃಶ್ಯ. ಇದನ್ನು ಎಲ್ಲಿ ಚಿತ್ರೀಕರಣಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.
ಈ ಪೋಸ್ಟ್ ಅನ್ನು ವಾರದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ ಇದನ್ನು 90 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಎರಡು ದಶಲಕ್ಷಕ್ಕೂ ಹೆಚ್ಚು ಲೈಕ್ ದೊರೆತಿದೆ. ಸದ್ಯ ವಿಡಿಯೊ ನೋಡಿದ ನೆಟ್ಟಿಗರು ಈ ಯುವಕರ ಗುಂಪನ್ನು ತರಾಟೆಗೆ ತೆಗೆದುಕೊಂಡಿದೆ. ಸಾವರ್ಜನಿಕ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇಂತಹವರು ತಾವು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದ ಜತೆಗೆ ಇತರರನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ. ಅಂತಹ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕು. ಇಂತಹವರ ಚಾಲನಾ ಪರವಾನಗಿ ರದ್ದು ಪಡಿಸಬೇಕು ಎಂದು ನೆಟ್ಟಿಗರು ಅಧಿಕೃತರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Viral Video: ಮೆರವಣಿಗೆಯಲ್ಲಿ ಸಾಗಿ 200 ಕೋಟಿ ರೂ. ಜನರ ಮೇಲೆ ಸುರಿದ ಜೈನ ದಂಪತಿ; ವಿಡಿಯೊ ವೈರಲ್
ಫುಟ್‌ರೆಸ್ಟ್ ಮೇಲೆ ಮಗು ನಿಲ್ಲಿಸಿಕೊಂಡು ಬೈಕ್ ರೈಡ್!
ಕೆಲವು ದಿನಗಳ ಹಿಂದೆಯಷ್ಟೇ ಫುಟ್‌ರೆಸ್ಟ್ (Foot rest) ಮೇಲೆ ಪುಟ್ಟ ಮಗುವನ್ನು ನಿಲ್ಲಿಸಿಕೊಂಡು ಸ್ಕೂಟರ್ ಚಲಾಯಿಸುತ್ತಿರುವ (Bike riding) ದಂಪತಿಯ ವಿಡಿಯೊ ವೈರಲ್ ಆಗಿತ್ತು. ಸ್ಕೂಟರ್ ಅಥವಾ ಬೈಕ್‌ನಲ್ಲಿ ಇಬ್ಬರು ಸವಾರರ ನಡುವೆ ಮಕ್ಕಳನ್ನು ಅಪ್ಪಚ್ಚಿಯಾಗುವಂತೆ ಕೂರಿಸುವುದು ಸಾಮಾನ್ಯ. ಆದರೆ ಈ ವಿಲಕ್ಷಣ ಸಾಹಸದ ವಿಡಿಯೊ ಮಾತ್ರ ಸೋಶಿಯಲ್ ಮೀಡಿಯಾ ಬಳಕೆದಾರರಲ್ಲಿ ಆತಂಕ ಮೂಡಿಸಿದೆ. ಈ ದಂಪತಿಯ ʼಮೂರ್ಖತನ’ದ ಬಗ್ಗೆ ಆಕ್ರೋಶ ವ್ಯಕ್ತಡಿಸಿದ್ದಾರೆ.
ಬಹುಶಃ ಹಿಂದಿನ ವಾಹನದಲ್ಲಿದ್ದ ಯಾರೋ ಇದನ್ನು ವಿಡಿಯೊ ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಒಬ್ಬ ವ್ಯಕ್ತಿ ಸ್ಕೂಟರ್ ಚಲಾಯಿಸುತ್ತಿದ್ದು ಆತನ ಹಿಂದೆ ಮಹಿಳೆ ಕುಳಿತಿದ್ದಾಳೆ. ಪಕ್ಕದಲ್ಲಿರುವ ಫುಟ್‌ರೆಸ್ಟ್‌ನಲ್ಲಿ ಮಗುವನ್ನು ನಿಲ್ಲಿಸಲಾಗಿದೆ. ರಾತ್ರಿ ಬೆಂಗಳೂರಿನ ಬೀದಿಯಲ್ಲಿ ಟ್ರಾಫಿಕ್ ಮೂಲಕ ಸ್ಕೂಟರ್ ಸವಾರಿ ಮಾಡುವುದು ವಿಡಿಯೊದಲ್ಲಿದೆ. ಜನನಿಬಿಡ ರಸ್ತೆಯಲ್ಲಿ ಸಂಚರಿಸುವಾಗ ಮಹಿಳೆ ಮಗುವನ್ನು ಒಂದು ಕೈಯಿಂದ ಹಿಡಿದುಕೊಳ್ಳುತ್ತಾಳೆ. ಸದ್ಯ ಈ ವಿಡಿಯೊಗೆ ಟೀಕೆಗಳ ಸುರಿಮಳೆ ಬಂದಿದೆ.