ಜೈಪುರ: 2003ರಲ್ಲಿ ತೆರೆಕಂಡ ಬಾಲಿವುಡ್‌ನ ʼಮುನ್ನಾಭಾಯಿ ಎಂಬಿಬಿಎಸ್ʼ ಚಿತ್ರ ನಿಮಗೆಲ್ಲ ನೆನಪಿರಬಹುದು. ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ನಾಯಕ ಮುನ್ನಾ ಭಾಯಿ (ಸಂಜಯ್ ದತ್) ತನ್ನ ಪರವಾಗಿ ವೈದ್ಯನೊಬ್ಬನ ಮೂಲಕ ಪರೀಕ್ಷೆ ಬರೆಸುತ್ತಾನೆ. ಆ ವೇಳೆ ಈ ದೃಶ್ಯ ಜನಪ್ರಿಯವಾಗಿತ್ತು. ಅದೆಲ್ಲ ಸರಿ ಈಗ್ಯಾಕೆ ಈ ವಿಚಾರ ಎಂಬ ಸಂದೇಹ ನಿಮ್ಮನ್ನು ಕಾಡಬಹುದು. ಇದನ್ನೇ ಹೋಲುವ ಘಟನೆಯೊಂದು ವರದಿಯಾಗಿದೆ. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET)ಯ ಆಕಾಂಕ್ಷಿಯ ಬದಲಾಗಿ ಆತನ ಸಹೋದರ ಪರೀಕ್ಷೆ ಬರೆದಿದ್ದಾನೆ. ಸದ್ಯ ಇವರ ಈ ಮೋಸದಾಟ ಬೆಳಕಿಗೆ ಬಂದಿದೆ (Viral News).
ರಾಜಸ್ಥಾನದ ಬಾರ್ಮರ್‌ನಲ್ಲಿ ಈ ಘಟನೆ ನಡೆದಿದೆ. ಪರೀಕ್ಷೆಗೆ ಹಾಜರಾದ ನೀಟ್ ಆಕಾಂಕ್ಷಿಯ ಸಹೋದರ, ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮತ್ತು ನೀಟ್ ಆಕಾಂಕ್ಷಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್ ಚಿತ್ರ ʼಮುನ್ನಾಭಾಯಿ ಎಂಬಿಬಿಎಸ್ʼ ಸಿನಿಮಾದಿಂದ ಸ್ಫೂರ್ತಿಗೊಂಡು ಸಹೋದರರು ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾರ್ಮರ್‌ನ ಅಂತ್ರಿ ದೇವಿ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ಅನಿತಾ ಚೌಧರಿ ಭಾನುವಾರ ಗೋಪಾಲ ರಾಮ್ ಬದಲಿಗೆ ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಸಿಂಗ್ ಮೀನಾ ತಿಳಿಸಿದ್ದಾರೆ.
ಅಧಿಕಾರಿಗಳಾದ ಲೇಖ್‌ರಾಜ್ ಸಿಯಾಗ್ ಮತ್ತು ಡಿಎಸ್‌ಟಿ ಇನ್‌ಚಾರ್ಜ್ ಮಹಿಪಾಲ್ ಸಿಂಗ್ ಕೂಡಲೇ ಸ್ಥಳಕ್ಕೆ ಧಾವಿಸಿ ಕೃಷ್ಣ ರಾಮ್ ಅವರ ಪುತ್ರ ಭಗೀರಥ ರಾಮ್ ವಿಷ್ಣೋಯ್ ಮತ್ತು ಆತನ ಕಿರಿಯ ಸಹೋದರ ಗೋಪಾಲ ರಾಮ್‌ನನ್ನು ಪರೀಕ್ಷಾ ಕೇಂದ್ರದಿಂದ ಬಂಧಿಸಿದ್ದಾರೆ. ಭಗೀರಥ ರಾಮ್ ವಿಷ್ಣೋಯ್ ಜೋಧಾಪುರ ಎಸ್.ಎನ್.ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್‌ನ ಮೊದಲ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ.
ಘಟನೆ ವಿವರ
ಭಗೀರಥ ರಾಮ್ ವಿಷ್ಣೋಯ್ ಆಧಾರ್ ಕಾರ್ಡ್‌ನಲ್ಲಿರುವ ತನ್ನ ಫೋಟೊವನ್ನು ಎಡಿಟ್ ಮಾಡಿ ಅದರ ಬದಲಿಗೆ ಸಹೋದರ ಗೋಪಾಲ ರಾಮ್ ಫೋಟೊ ಎಡಿಟ್ ಮಾಡಿ ನೀಟ್ ಪರೀಕ್ಷೆ ಬರೆಯಲು ತೆರಳಿದ್ದ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಕಿಲಾಡಿ ಸಹೋದರರ ಕ್ರಿಮಿನಲ್ ಐಡಿಯಾ ಸಾಂಗವಾಗಿ ನೆರವೇರುತ್ತಿತ್ತು. ಆದರೆ ಕೊನೆ ಕ್ಷಣದಲ್ಲಿ ಇವರ ಅದೃಷ್ಟ ಕೈಕೊಟ್ಟಿತ್ತು. ಪ್ರಾಂಶುಪಾಲೆಯ ಕಣ್ಣಿಗೆ ಬಿದ್ದು ಇವರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Viral News : ನಿಜವಾದ ಪೊಲೀಸ್ಗೆ ತಪ್ಪಾಗಿ ಸೆಲ್ಯೂಟ್ ಹೊಡೆದು ಸಿಕ್ಕಿ ಬಿದ್ದ ನಕಲಿ ಪೊಲೀಸ್!
ದಾಖಲೆ ಪ್ರಮಾಣದಲ್ಲಿ ನೋಂದಣಿ
ನೀಟ್ ಯುಜಿ 2024ಕ್ಕೆ ಈ ಬಾರಿ ದಾಖಲೆ ಪ್ರಮಾಣದ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಅತ್ಯಧಿಕ 23 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದ ಇದರಲ್ಲಿ 10 ಲಕ್ಷ ಮಂದಿ ಪುರುಷರಾದರೆ 13 ಮಂದಿ ಸ್ತ್ರೀಯರು. ವಿಶೇಷ ಎಂದರೆ ಪುದುಚೇರಿ, ಜಮ್ಮು ಮತ್ತು ಕಾಶ್ಮೀರ ಮತ್ತಿತರ ಕಡೆಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.