Site icon Vistara News

Viral News: ಮಾನವನ ಬೆರಳಾಯ್ತು, ಇದೀಗ ಐಸ್‌ಕ್ರೀಂನಲ್ಲಿ ಹುಳ ಪತ್ತೆ; ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕಪ್ಪ ಎಂದ ನೆಟ್ಟಿಗರು

Viral News

Viral News

ಲಕ್ನೋ: ಇತ್ತೀಚೆಗೆ ಮುಂಬೈಯ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿದ ಐಸ್‌ಕ್ರೀಂನಲ್ಲಿ ಮನುಷ್ಯನ ಕೈ ಬೆರಳು ಪತ್ತೆಯಾಗಿತ್ತು. ಈ ಶಾಕ್‌ನಿಂದ ಜನರು ಇನ್ನೂ ಹೊರ ಬಂದಿಲ್ಲ. ಅದಕ್ಕಿಂತ ಮೊದಲೇ ಇನ್ನೊಂದು ಅಂತಹ ಅವಾಂತರ ಎದುರಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹಿಳೆಯೊಬ್ಬರು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ತರಿಸಿದ ಪ್ರತಿಷ್ಠಿತ ಬ್ರ್ಯಾಂಡ್‌ನ ಐಸ್‌ಕ್ರೀಂನಲ್ಲಿ ಜರಿಹುಳ (Centipede) ಕಂಡು ಬಂದಿದೆ. ಸದ್ಯ ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ (Viral News).

ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್‌ 12ರಲ್ಲಿ ವಾಸವಾಗಿರುವ ದೀಪಾ ದೇವಿ ಎನ್ನುವ ಮಹಿಳೆ ತನ್ನ 5 ವರ್ಷದ ಮಗನಿಗೆ ಮಾವಿನ ಹಣ್ಣಿನ ಮಿಲ್ಕ್‌ ಶೇಕ್‌ ಮಾಡಿಕೊಡಲು ಆನ್‌ಲೈನ್‌ ಆ್ಯಪ್‌ ಮೂಲಕ ವೆನಿಲ್ಲಾ ಪ್ಲೇವರ್‌ನ ಐಸ್‌ಕ್ರೀಂ ಆರ್ಡರ್‌ ಮಾಡಿದ್ದರು. ಕೆಲಚೇ ಹೊತ್ತಲ್ಲಿ ಪಾರ್ಸಲ್‌ ಏನೋ ಆಕೆಯ ಕೈ ಸೇರಿತು. ಆದರೆ ಬಾಕ್ಸ್‌ ಓಪನ್‌ ಮಾಡಿದಾಗ ಅವರಿಗೆ ಆಘಾತ ಎದುರಾಗಿತ್ತು. ಬಾಕ್ಸ್‌ನ ಮುಚ್ಚಳ ತೆರೆಯುತ್ತಿದ್ದಂತೆ ಐಸ್‌ಕ್ರೀಂನಲ್ಲಿ ಹುದುಗಿದ್ದ ಜರಿಹುಳ ಕಂಡು ಅವರು ಬೆಚ್ಚಿ ಬಿದ್ದಿದ್ದಾರೆ. ಐಸ್‌ಕ್ರೀಂ ಬಂದ ಖುಷಿ ಜರ್ರನೆ ಕರಗಿ ಹೋಗಿತ್ತು.

ವಿಡಿಯೊ ವೈರಲ್‌

ಐಸ್‌ಕ್ರೀಂ ಬಾಕ್ಸ್‌ ಮತ್ತು ಅದರಲ್ಲಿನ ಹುಳವನ್ನು ತೋರಿಸುವ ವಿಡಿಯೊ ವೈರಲ್‌ ಆಗಿದೆ. ವಿಡಿಯೊದಲ್ಲಿ ದೀಪ ದೇವಿ ಅವರು ಬಾಕ್ಸ್‌ ಮುಚ್ಚಳ ತೆರೆಯುತ್ತಿದ್ದಂತೆ ಅದರಲ್ಲಿ ಹುಳ ಇರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಸದ್ಯ ಈ ಘಟನೆ ಆಹಾರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ದೇಶಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಹುಳ ಪತ್ತೆಯಾಗಿರುವ ಕುರಿತು ದೀಪಾ ದೇವಿ ಅವರು ಡೆಲಿವರಿ ಮಾಡಿರುವ ಆ್ಯಪ್‌ಗೆ ದೂರು ನೀಡಿದ್ದು, ಕೂಡಲೇ ಅವರು ಹಣವನ್ನು ಹಿಂದಿರುಗಿಸಿದ್ದಾರೆ. ಜತೆಗೆ ಐಸ್‌ಕ್ರೀಂ ಕಂಪನಿಗೆ ಮಾಹಿತಿ ರವಾನಿಸಿದ್ದಾರೆ.

ಈ ವಿಷಯ ಹೊರ ಬೀಳುತ್ತಿದ್ದಂತೆ ಕ್ರಮಕ್ಕೆ ಮುಂದಾದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಸೆಕ್ಟರ್ -22 ರಲ್ಲಿರುವ ಆ್ಯಪ್‌ ಸ್ಟೋರ್‌ಗೆ ಭೇಟಿ ನೀಡಿ ಆ ಬ್ಯಾಚ್ ಐಸ್‌ಕ್ರೀಂ ಮಾರಾಟವನ್ನು ನಿಲ್ಲಿಸಿದೆ. ಜತೆಗೆ ಐಸ್‌ಕ್ರೀಂ ತಯಾರಿಕಾ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ಭಾನುವಾರ ಪ್ರಕರಣ ದಾಖಲಾಗಿದೆ. ಇನ್ನು ಐಸ್‌ಕ್ರೀಂನಲ್ಲಿ ಏನೇನು ಪತ್ತೆಯಾಗುತ್ತವೋ ಎಂದು ನೆಟ್ಟಿಗರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: Italian Parliament: ಇಟಲಿ ಪಾರ್ಲಿಮೆಂಟ್‌ನಲ್ಲಿ ಸಂಸದರ ಮಾರಾಮಾರಿ! ವಿಡಿಯೊ ನೋಡಿ

ಮಾನವನ ಬೆರಳು ಪತ್ತೆ

ಕೆಲವು ದಿನಗಳ ಹಿಂದೆ ಮುಂಬೈಯಲ್ಲಿ ಐಸ್‌ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು. ಮುಂಬೈಯ ಮಲಾಡ್ ಪ್ರದೇಶದ ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜತೆಗೆ ತನ್ನ ಸಹೋದರನಿಗಾಗಿ ಮೂರು ಬಟರ್ ಸ್ಕಾಚ್ ಕೋನ್ ಐಸ್‌ಕ್ರೀಂ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಮನೆಗೆ ಬಂದ ಐಸ್‌ಕ್ರೀಂ ಅನ್ನು ಸಹೋದರ ಬಿಚ್ಚಿ ತಿನ್ನುವಾಗ ನಾಲಿಗೆಗೆ ಏನೋ ತಗುಲಿದ ಹಾಗೆ ಆಗಿತ್ತು. ಆಗ ಆತ ಸೂಕ್ಷ್ಮವಾಗಿ ನೋಡಿದಾಗ ಮನುಷ್ಯನ ಕೈ ಬೆರಳು ಕಂಡು ಬಂದಿತ್ತು. ಅದು ಸುಮಾರು 2 ಸೆಂಟಿಮೀಟರ್ ಉದ್ದವಿತ್ತು. ಮಹಿಳೆಯ ಸಹೋದರ ವೈದ್ಯನಾಗಿದ್ದ ಕಾರಣ ಆತ ಅದು ಮನುಷ್ಯನ ಕೈ ಬೆರಳು ಎಂದು ಕೂಡಲೇ ಪತ್ತೆ ಹಚ್ಚಿದ್ದ. ಈ ಸುದ್ದಿ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

Exit mobile version