ನಿಮ್ಮ ಚಿರ ಯವ್ವನದ ರಹಸ್ಯ ಏನು ಎಂದು ಯಾವುದೋ ಸೆಲೆಬ್ರಿಟಿಯ ಮುಂದೆ ಮೈಕ್ ಹಿಡಿಯುವ ಅಗತ್ಯವಿಲ್ಲ. ಈತನ ಬಳಿ ಕೇಳಿದರೆ ಸಾಕು. ಯಾಕೆಂದರೆ, ಈ ೬೧ರ ಹರೆಯದ ಯುವಕನೋರ್ವ ೮೮ನೇ ಬಾರಿ ಭಾರೀ ಉತ್ಸುಕತೆಯಿಂದ ಮದುವೆಯಾಗಲು ಹೊರಟಿದ್ದಾನೆ!
ಹೌದು. ಒಂದು ಮದುವೆಯಾಗೋದು ಸಾಮಾನ್ಯ. ಕೆಲವರಿಗೆ ಎರಡನೆಯದೂ ಆಗುತ್ತದೆ. ಇನ್ನೂ ಕೆಲವರು ಎರಡೂ ವರ್ಕೌಟ್ ಆಗದಿದ್ದರೆ, ಮೂರನೆಯದು, ನಾಲ್ಕನೆಯದು ಟ್ರೈ ಮಾಡುವುದುಂಟು. ಆದರೂ ಎರಡಂಕಿಯ ಸಂಖ್ಯೆಯ ಮದುವೆಯಂತೂ ಆದವರು ಇರಲಿಕ್ಕಿಲ್ಲ. ಆ ಮಟ್ಟಿನಲ್ಲಿ ಈತನದೊಂದು ಭರ್ಜರಿ ಸಾಧನೆಯೇ.
೮೮ ಸಲ ಮದುವೆಯಾ? ಒಂದು ಮದುವೆಯನ್ನು ಉಳಿಸಿ ಬದುಕನ್ನು ಸಮತೋಲನದಲ್ಲಿರಿಸುವಷ್ಟರಲ್ಲಿ ಹೈರಾಣಾಗುತ್ತೇವೆ. ಇನ್ನು ೮೮ ಮದುವೆಯಾಗಬೇಕಾದರೆ ಆ ಮನುಷ್ಯ ಎಂಥವನಿರಬೇಕು! ಎಂಬುದು ಬಹಳಷ್ಟು ಮಂದಿಯ ಪ್ರಶ್ನೆಯಿರಬಹುದು. ಆ ಪ್ರಶ್ನೆಗೆ ಉತ್ತರ ಬೇಕಾದರೆ ಇದನ್ನು ಪೂರ್ತಿ ಓದಿ.
ಇಂಡೋನೇಷ್ಯಾದ ವೆಸ್ಟ್ ಜಾವಾದ ಮಜಲೆಂಗ್ಕಾದ ೬೧ ವರ್ಷ ವಯಸ್ಸಿನ ನಿವಾಸಿ ಕಾನಾ ಇದೀಗ ೮೮ನೇ ಬಾರಿ ಮದುವೆಯಾಗಲು ರೆಡಿಯಾಗಿದ್ದಾರಂತೆ. ತನ್ನ ೮೭ನೇ ಮದುವೆಯೂ ಮುರಿದು ಬಿದ್ದ ಮೇಲೆ ಈಗ ೮೮ನೆಯದಕ್ಕೆ ರೆಡಿಯಾಗಿದ್ದಾನೆ. ಕಾನಾ ರೈತನಾಗಿದ್ದು, ಈತನ ಮೊದಲ ಮದುವೆಯೆಂಬ ಪ್ರೀತಿ ಮದುವೆಯಾಗಿ ಒಂದೇ ತಿಂಗಳಲ್ಲಿ ಮುರಿದು ಬಿತ್ತಂತೆ. ಆತ ಹೇಳುವಂತೆ, ʻನಾವು ಬೇರೆ ಬೇರೆಯಾಗಿ ಬಹಳ ವರ್ಷಗಳಾಯ್ತು. ಬೇರೆ ಬೇರೆಯಾದ್ರೂ ಮೊದಲ ಹೆಂಡತಿಯ ಮೇಲಿರುವ ಪ್ರೀತಿ ಮಾತ್ರ ಹಾಗೆಯೇ ಇಂದಿಗೂ ಇದೆʼ ಎನ್ನುತ್ತಾನೆ. ಅರೆ, ಪ್ರೀತಿ ಇರುವುದಾದರೆ, ಬೇರೆ ಬೇರೆಯಾದದ್ದಾದರೂ ಯಾಕೆ? ಎಂದು ತಲೆ ಕೆರೆಯಬೇಡಿ. ವಿಷಯ ಆತನ ಬಾಯಿಯಿಂದಲೇ ಕೇಳಿ.
ಇದನ್ನೂ ಓದಿ | Viral post | ಮೊದಲ ಬಾರಿಗೆ ವಿಮಾನ ಹತ್ತಲು ಬಂದ ಹಳ್ಳಿ ದಂಪತಿಗಳಿಗೇನಾಯ್ತು: ಒಂದು ಹೃದಯಸ್ಪರ್ಶಿ ಪೋಸ್ಟ್!
ಕಾನ್ ಹೇಳುವಂತೆ, ಆತನಿಗೆ ಮದುವೆಯದಾಗ ೧೪ರ ವಯಸ್ಸು. ಆತನ ಮೊದಲ ಹೆಂಡತಿಯ ಜೊತೆ ತೊಂದರೆ ಒಂದೇ ತಿಂಗಳಲ್ಲಿ ಆರಂಭವಾದರೂ, ಎರಡೇ ವರ್ಷದಲ್ಲಿ ವಿಚ್ಛೇದನವಾಯ್ತಂತೆ. ʻಆಕೆ ನನಗಿಂತ ಎರಡು ವರ್ಷ ದೊಡ್ಡವಳಿದ್ದಳು. ನನ್ನದೇ ಸಣ್ಣ ಬುದ್ಧಿಯಿಂದಾಗಿ ಆಕೆ ಮದುವೆಯಾಗಿ ಎರಡೇ ವರ್ಷದಲ್ಲಿ ವಿಚ್ಛೇದನ ಕೇಳಿದಳು. ಇದರಿಂದ ಇಬ್ಬರೂ ಪ್ರತ್ಯೇಕವಾದೆವು. ಈ ಘಟನೆಯ ನಂತರ ನನಗೆ ಅತೀವ ಕೋಪ ಬಂತು. ಆ ಕೋಪದ ಕಾರಣದಿಂದಾಗಿಯೇ, ಹಠಕ್ಕೆ ಬಿದ್ದಂತೆ ಒಂದಾದ ಮೇಲೊಂದರಂತೆ ಹಲವಾರು ಮಂದಿಯನ್ನು ಪ್ರೀತಿಸಿದೆ ಎನ್ನುತ್ತಾನೆ.
ಹುಡುಗಿಯರು ತನ್ನೆಡೆ ಆಕರ್ಷಿತರಾಗೋದು ದೈವೇಚ್ಛೆಯೇ ಇರಬೇಕೆಂದು ದೇವರ ಮೇಲೆ ಭಾರ ಹಾಕಿ ಒಬ್ಬರಾದ ಮೇಲೆ ಒಬ್ಬರಂತೆ ಮದುವೆಯಾಗಿದ್ದಾನಂತೆ. ಸುಮ್ಮನೆ ಹೆಣ್ಣು ಮಕ್ಕಳೊಂದಿಗೆ, ಅವರ ಭಾವನೆಗಳೊಂದಿಗೆ ಆಟವಾಡುವುದು ಇಷ್ಟವಾಗಲಿಲ್ಲ. ಅದಕ್ಕಾಗಿ ಇಷ್ಟವಾದ ತಕ್ಷಣ ಮದುವೆಯಾಗಿ ಬಿಡುತ್ತಿದ್ದೆ. ಸುಮ್ಮನೆ ತೆರೆಮರೆಯಲ್ಲಿ ನಡೆಸುವ ತಪ್ಪುಗಳಿಗಿಂತ ಮದುವೆಯಾಗುವುದೇ ಯೋಗ್ಯ ಅನಿಸಿತು. ಹೀಗಾಗಿ ಮದುವೆಯಾದೆ ಎನ್ನುತ್ತಾನೆ.
ಇಷ್ಟರವರೆಗೆ ೮೭ ಮದುವೆಯಾಗಿ ಇದೀಗ ೮೮ನೇ ಮದುವೆಯಾಗಲು ಹಸೆಮಣೆಯೇರಲು ಕೂತ ಈತನಿಗೆ ಮಕ್ಕಳೆಷ್ಟಿವೆ ಎಂಬ ಬಗ್ಗೆ ಮಾತ್ರ ಯಾರಿಗೂ ಮಾಹಿತಿಗಳಿಲ್ಲ. ಬಹುಶಃ ಆತನಿಗೇ ಇದೆಯೋ ಗೊತ್ತಿಲ್ಲ!
ಹಾಂ, ಅಂದಹಾಗೆ ಈಗ ನೀವು, ೬೧ ವಯಸ್ಸಿನ ವ್ಯಕ್ತಿ ೮೮ನೇ ಬಾರಿ ಮದುವೆಯಾಗುವುದು ಎಂದರೆ ವರ್ಷದಲ್ಲಿ ಎಷ್ಟು ಸಾರಿ ಈತ ಮದುವೆಯಾಗಿದ್ದಾನೆ ಸರಾಸರಿ ಲೆಕ್ಕ ತೆಗೆಯಲು ಎಂದು ಕ್ಯಾಲ್ಕುಲೇಟರ್ ಮೊರೆ ಮಾತ್ರ ಹೋಗಬೇಡಿ!
ಇದನ್ನೂ ಓದಿ | Viral post | ವಿಮಾನದಲ್ಲಿ ಆತ ಆಕೆಯ ಚಿತ್ರ ಬಿಡಿಸಿದ, ಮುಂದೆ ನಡೆದದ್ದೇನು!