ಪ್ರಾಮಾಣಿಕತೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಸಿಗಲಿಕ್ಕಿಲ್ಲವೇನೋ. ಇಲ್ಲೊಬ್ಬ ಮೊಮ್ಮಗ ತನ್ನ ಅಜ್ಜ ಗ್ರಂಥಾಲಯದಿಂದ ಓದಲು ತಂದಿದ್ದ ಪುಸ್ತಕವೊಂದನ್ನು ಬರೋಬ್ಬರಿ ೮೪ ವರ್ಷಗಳ ನಂತರ ಮರಳಿ ಗ್ರಂಥಾಲಯಕ್ಕೆ ನೀಡಿದ್ದಾರೆ!
ಕ್ಯಾಪ್ಟನ್ ವಿಲಿಯಂ ಹಂಪ್ರೀಸ್ ಎಂಬವರು ೧೯೩೮ರಲ್ಲಿ ಕೋವೆಂಟ್ರಿಯ ಅರ್ಲ್ಸ್‌ಡನ್ ಗ್ರಂಥಾಲಯದಿಂದ ಓದಲೆಂದು ರಿಚರ್ಡ್ ಜೆಫ್ರೀ ಅವರು ಬರೆದ ರೆಡ್ ಡೀರ್ ಎಂಬ ಪುಸ್ತಕವನ್ನು ಪಡೆದು ತಂದಿದ್ದರು. ಆದರೆ ಅದನ್ನು ಮರಳಿಸಿರಲಿಲ್ಲ. ತನ್ನ ತಾಯಿಯ ಮನೆಯನ್ನು ಶುಚಿಗೊಳಿಸುತ್ತಿದ್ದ ಸಂದರ್ಭ ಈ ಪುಸ್ತಕ ಆತನ ಮೊಮ್ಮಗ ಪ್ಯಾಡಿ ರಿಯೋರ್ಡನ್ ಎಂಬವರಿಗೆ ಅಜ್ಜನ ಕಲೆಕ್ಷನ್‌ನ ಪುಸ್ತಕಗಳ ಜೊತೆ ಇದು ಅಚಾನಕ್ಕಾಗಿ ಸಿಕ್ಕಿದೆ. ಪುಸ್ತಕವನ್ನು ತಿರುವಿ ಹಾಕಿದಾಗ ೧೯೩೮ರಲ್ಲಿ ತನ್ನ ಅಜ್ಜ ಗ್ರಂಥಾಲಯದಿಂದ ಇದನ್ನು ಓದಲು ತಂದಿದ್ದರು ಎಂಬುದು ಹಿಂಬದಿಯಲ್ಲಿ ಬರೆಯಲಾದ ದಿನಾಂಕದಿಂದ ಗೊತ್ತಾಗಿದೆ. ೧೯೩೮ರ ಅಕ್ಟೋಬರ್ ೧೧ರಂದು ಹಿಂತಿರುಗಿಸಬೇಕೆಂದು ಬರೆಯಲಾದ ಒಕ್ಕಣೆಯಿದ್ದ ಆ ಪುಸ್ತಕವನ್ನು ನೋಡಿ ಮೊಮ್ಮಗನಿಗೆ ಅದನ್ನು ಹಿಂತಿರುಗಿಸಬೇಕೆಂದು ಮನಸ್ಸಾಗಿದೆ. ಹಾಗಾಗಿ, ತನ್ನ ಅಜ್ಜ ತಂದಿದ್ದ ಪುಸ್ತಕವನ್ನು ಮೊಮ್ಮಗ ಗ್ರಂಥಾಲಯಕ್ಕೆ ಮರಳಿಸಿದ್ದಾರೆ!
ತಮಾಷೆಯೆಂದರೆ, ನನ್ನಜ್ಜ ಮಾಡಿದ ಪಾಪಕ್ಕೆ ನಾನೀಗ ಪ್ರಾಯಶ್ಚಿತ್ತ ಮಾಡಿಕೊಂಡಿದ್ದೇನೆ ಎಂದು ತಿಳಿಹಾಸ್ಯದಲ್ಲಿ ಹೇಳಿರುವ ಮೊಮ್ಮಗ ಪ್ಯಾಡಿ ರಿಯೋರ್ಡನ್ ಪುಸ್ತಕದೊಂದಿಗಿರುವ ಫೋಟೋ ಈಗ ಸುದ್ದಿ ಮಾಡುತ್ತಿದೆ.
ಮೊಮ್ಮಗ ಪ್ಯಾಡಿ ರಿಯೋರ್ಡನ್ ಪುಸ್ತಕ ಕಂಡು, ತನ್ನಜ್ಜ ಇಹಲೋಕ ಬಿಟ್ಟು ಹೋಗುವಾಗ ಈ ಪುಸ್ತಕ ವಾಪಸ್ ಕೊಡದೆ ತಪ್ಪು ಮಾಡಿ ಬಿಟ್ಟರಲ್ಲಾ, ಅದನ್ನು ಹಿಂತಿರಿಗಿಸುವ ಜವಾಬ್ದಾರಿ ತನ್ನದು ಎಂದು ಹೊರಟದ್ದೇನೋ ಸರಿ, ಆದರೆ, ೧೯೩೮ರ ಅಕ್ಟೋಬರ್ ೧೧ರಂದು ಮರಳಿಸಬೇಕಾಗಿದ್ದ ಆ ಪುಸ್ತಕಕ್ಕೆ, ಮರಳಿಸದಿದ್ದರೆ ದಂಡವೂ ಇತ್ತಲ್ಲ! ಅಂದರೆ ೮೪ ವರ್ಷಗಳಿಗೆ ಪ್ರತಿದಿನದ ಲೆಕ್ಕದಲ್ಲಿ ಆತ ದಂಡವನ್ನೂ ನೀಡಬೇಕಾಗಿತ್ತು. ಸುಮ್ಮನೆ ಮರಳಿಸಿ ಬರುವುದಾಗಿದ್ದರೆ ಯಾರು ಬೇಕಾದರೂ ಮಾಡುತ್ತಿದ್ದರು, ಆದರೆ, ಪ್ರಾಮಾಣಿಕತೆಯಿಂದ ಮರಳಿಸಲು ಹೊರಟ ರಿಯೋರ್ಡನ್ ದಂಡ ಕಟ್ಟುವ ಯೋಚನೆಯನ್ನೂ ಮಾಡಿಯೇ ಮರಳಿಸಲು ಹೊರಟಿದ್ದರು.
ಇದನ್ನೂ ಓದಿ | Viral Video | ಲ್ಯಾಪ್ಟಾಪ್ನಲ್ಲಿ ಜಂಕ್ಸ್ ಇದೆ ಎಂದ ಅಪ್ಪ; ಕೇಳಿಸಿಕೊಂಡ 2 ವರ್ಷದ ಮಗಳು ಅದನ್ನು ನೆನೆಹಾಕಿ, ತೊಳೆದಳು !
ಎಲ್ಲ ಲೆಕ್ಕಾಚಾರಗಳ ನಂತರ, ೧೮.೨೭ ಯೂರೋ ಅಂದರೆ ಭಾರತೀಯ ಹಣದಲ್ಲಿ ೧,೭೪೦ ರೂಪಾಯಿಗಳನ್ನು ರಿಯೋರ್ಡನ್ ತನ್ನಜ್ಜ ಮಾಡಿದ ತಪ್ಪಿಗೆ ದಂಡವೆಂಬಂತೆ ನೀಡಿ ಪುಸ್ತಕ ಮರಳಿಸಿದ್ದಾರೆ. ಮಾಡಿದ ತಪ್ಪಿಗೆ ಒಂದು ಮೊತ್ತವನ್ನೂ ಗ್ರಂಥಾಲಯಕ್ಕೆ ನೀಡಿ, ಜೊತೆಗೆ ಪುಸ್ತಕವನ್ನೂ ಪ್ರಾಮಾಣಿಕವಾಗಿ ಹಿಂತಿರುಗಿಸಿ ಬಂದ ಖುಷಿಯೀಗ ಮೊಮ್ಮಗನದ್ದು. ಹಾಗೆ ನೋಡಿದರೆ, ಗ್ರಂಥಾಲಯ ತನ್ನ ಈಗಿನ ದಂಡದ ಪ್ರಕಾರ ದರವನ್ನು ಈತನಿಗೆ ನಿಗದಿ ಪಡಿಸಿದ್ದರೆ, ಈತ ೭,೬೭೩ ಯೂರೋವನ್ನು ಗ್ರಂಥಾಲಯಕ್ಕೆ ನೀಡಬೇಕಾಗಿತ್ತು.
ಅರ್ಲ್ಸ್‌ಡನ್ ಗ್ರಂಥಾಲಯ ಕೂಡಾ ಈ ಬಗೆಗೆ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ʻಇದು ನಿಮಗೆ ಯಾವಾಗಲೂ ಕಾಣಸಿಗುವಂಥದ್ದಲ್ಲ. ೮೪ ವರ್ಷಗಳ ಬಳಿಕ ರಿಚರ್ಡ್ ಜೆಫ್ರೀ ಅವರು ಬರೆದ ರೆಡ್ ಡೀರ್ ಪುಸ್ತಕ ತನ್ನ ಮನೆಗೆ ಮರಳಿದೆ. ತನ್ನಜ್ಜನ ಕಲೆಕ್ಷನ್‌ನಲ್ಲಿ ಇದ್ದ ಈ ಪುಸ್ತಕವನ್ನು ಅವರ ಮೊಮ್ಮಗ ಮರಳಿಸಿದ್ದಾರೆ. ಜೊತೆಗೆ ದಂಡವನ್ನೂ ಪಾವತಿಸಿದ್ದಾರೆ. ಅಂದಿನ ದಂಡದ ಆಧಾರದಲ್ಲಿ ಈ ದಂಡವನ್ನು ಪರಿಗಣಿಸಿ ಅವರಿಂದ ಪಡೆಯಲಾಗಿದೆ. ಕೊನೆಗೂ ಈ ಪುಸ್ತಕ ತನ್ನ ಸ್ವಸ್ಥಾನಕ್ಕೆ ಮರಳಿದ್ದು ಎಂಥ ಅದ್ಭುತ ವಿಷಯ” ಎಂದು ಗ್ರಂಥಾಲಯ ಬರೆದುಕೊಂಡಿದೆ.
ʻರಿಯೋರ್ಡನ್ ಅವರು ಎಷ್ಟು ಪ್ರಾಮಾಣಿಕತೆಯಿಂದ ತಂದು ಈ ಪುಸ್ತಕ ಹಿಂತಿರುಗಿಸಿದ್ದಾರೆ ಎಂದರೆ, ಇದನ್ನು ನೋಡಿ ನಮಗೆ ಅತೀವ ಸಂತಸವಾಗಿದೆ. ಈಗ ಈ ಪುಸ್ತಕ ಗ್ರಂಥಾಲಯ ಐತಿಹಾಸಿಕ ಪುಸ್ತಕಗಳಲ್ಲಿ ಒಂದಾಗಿರುವುದು ಖುಷಿಯಲ್ಲದೆ ಇನ್ನೇನುʼ ಎಂದು ಗ್ರಂಥಾಲಯ ಹೇಳಿಕೊಂಡಿದೆ.
ಇದನ್ನೂ ಓದಿ | Urfi Javed | ಉರ್ಫಿ ಜಾವೇದ್ ವಿರುದ್ಧ ದೂರು ದಾಖಲು: ಮಾದಕ ಡ್ಯಾನ್ಸ್ ವಿಡಿಯೊ ವೈರಲ್!