Site icon Vistara News

61ನೇ ಹುಟ್ಟುಹಬ್ಬಕ್ಕೆ ಸಿಹಿಗುಂಬಳದ ಮೇಲೆ ಕೂತು 61 ಕಿಮೀ ಹುಟ್ಟುಹಾಕಿ ದಾಖಲೆ ಬರೆದ!

pumpkin boat

ಮನಸ್ಸಿದ್ದರೆ ಮಾರ್ಗ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ಆಗಾಗ ಈ ಗಾದೆಗೆ ನೂರಾರು ಉದಾಹರಣೆಗಳು ಸಿಕ್ಕಿ ಕಳೆಗುಂದಿದ ಜೀವನಕ್ಕೆ ಹೊಸ ಮಿಂಚಿನ ಸಂಚಾರವನ್ನು ಮಾಡಿಸುತ್ತವೆ. ಇಲ್ಲಿ ೬೦ರ ಇಳಿವಯಸ್ಸಿನಲ್ಲೊಬ್ಬ ದಾಖಲೆ ಬರೆಯಲು ೬೧ ಕಿಮೀ ದೂರವನ್ನು ಸಿಹಿಗುಂಬಳವನ್ನೇ ದೋಣಿ ಮಾಡಿ ಅದರ ಮೇಲೆ ಕೂತು ನದಿಯಲ್ಲಿ ಸಾಗಿದ್ದಾನೆ!

ಯುಎಸ್‌ನ ನೆಬ್ರಾಸ್ಕಾದ ಡ್ಯೂನ್‌ ಹಾನ್ಸೇನ್‌ ಎಂಬಾತ ತನ್ನ ೬೦ನೇ ಜನ್ಮದಿನದ ಪ್ರಯುಕ್ತ ದೈತ್ಯಗಾತ್ರದ ಸಿಹಿಗುಂಬಳಕ್ಕೆ ತಾನು ಕೂರಬಹುದಾದಷ್ಟು ದೊಡ್ಡದೊಂದು ತೂತು ಕೊರೆದು ಅದನ್ನೇ ಸೀಟಾಗಿಸಿ ಕೂತು ತನ್ನೂರಿನ ಮಝೂರಿ ನದಿಯಲ್ಲಿ ಹುಟ್ಟು ಹಾಕುತ್ತಾ ೬೧ ಕಿಮೀ ಪ್ರಯಾಣ ಮಾಡಿದ್ದಾನೆ. ಇದು ಸಿಟಿ ಆಫ್‌ ಬೆಲ್ಲೇವ್‌ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಸಾರವೂ ಕಂಡಿದ್ದು, ಜನರು ಈತನ ಉತ್ಸಾಹಕ್ಕೆ ಹಾಗೂ ಜೀವನ ಪ್ರೀತಿಗೆ ಫಿದಾ ಆಗಿದ್ದಾರೆ.

ಈ ಸಿಹಿಗುಂಬಳಕಾಯಿ ಎಷ್ಟು ದೊಡ್ಡದಿತ್ತೆಂದರೆ, ೩೮೪ ಕೆಜಿ ಇದರ ತೂಕವಂತೆ! ಇಂಥದ್ದೊಂದು ಬೃಹತ್‌ ಸಿಹಿಗುಂಬಳವನ್ನು ತನ್ನ ಪ್ರಯಾಣಕ್ಕೆ ಯೋಗ್ಯವಾಗುವಂತೆ ಕೊರೆದು ದೋಣಿಯಂತೆ ಅದರಲ್ಲೇ ಕೂತು ನದಿಯಲ್ಲಿ ಸಾಗುವುದೆಂದರೆ ತಮಾಷೆಯ ಮಾತಾ ಹೇಳಿ!

ಡ್ಯೂನ್‌ ಹಾನ್ಸೇನ್‌ಗೆ ಸಿಹಿಗುಂಬಳವನ್ನು ಬೆಳೆಯುವುದೇ ಒಂದು ಹವ್ಯಾಸವಂತೆ. ಈತ ತನ್ನ ತೋಟದಲ್ಲಿ ಬೃಹತ್‌ ಗಾತ್ರದ ಸಿಹಿಗುಂಬಳಗಳನ್ನು ಬೆಳೆದು ಖುಷಿ ಪಡುತ್ತಾನಂತೆ. ಇತ್ತೀಚೆಗೆ ೩೦ ಕಿಮೀ ಇಂತಹ ಸಿಹಿಗುಂಬಳದ ಮೇಲೆ ನದಿಯಲ್ಲಿ ಸಾಗಿ ಗಿನ್ನಿಸ್‌ ದಾಖಲೆ ಬರೆದಾತನೊಬ್ಬನ ಬಗ್ಗೆ ಕೇಳಿ ತಿಳಿದುಕೊಂಡಾಗ ತಾನೂ ಯಾಕೆ ಈ ಪ್ರಯತ್ನ ಮಾಡಬಾರದು ಎಂದು ಆತನಿಗೆ ಅನಿಸಿತಂತೆ. ಅಷ್ಟರವರೆಗೆ ಇಂಥದ್ದೊಂದು ಯೋಚನೆಯನ್ನೂ ಮಾಡಿರದ, ಈ ಬಗ್ಗೆ ಪ್ರಯತ್ನವನ್ನೂ ಮಾಡದ ಡ್ಯೂನ್‌ ಹಾನ್ಸೇನ್‌ ಸೀದಾ ತನ್ನ ೬೦ನೇ ಹುಟ್ಟುಹಬ್ಬದ ದಿನದಂದೇ ಸಾಂಕೇತಿಕವಾಗಿ ೬೧ ಕಿಮೀ ಹುಟ್ಟು ಹಾಕಿಯೇ ತೀರುತ್ತೇನೆ ಎಂಬ ಯೋಚನೆ ಬಂದಿದ್ದೇ ತಡ ಈ ಪ್ರಯತ್ನಕ್ಕೆ ಮುಂದಾಗಿದ್ದಾನೆ.

ಇದನ್ನೂ ಓದಿ | ಎಂಟು ತಿಂಗಳ ಊಟಕ್ಕೆ 426 ಬಗೆಯ ತಿನಿಸು ಮಾಡಿ ಶೇಖರಿಸಿಟ್ಟ ಸೂಪರ್‌ ಅಮ್ಮ!

ಹೀಗೆ ಬೆಳಗ್ಗೆ ಸುಮಾರು ೭.೩೦ರ ಹೊತ್ತಿಗೆ ತನ್ನದೇ ತೋಟದಲ್ಲಿ ಬೆಳೆದ ಬೃಹತ್‌ ಗಾತ್ರದ ಸಿಹಿಗುಂಬಳ ಹಿಡಿದು ಮಝೂರಿ ನದಿಯ ತೀರಕ್ಕೆ ಬಂದ ಆತ ತನ್ನ ೩೮೪ ಕೆಜಿ ತೂಕದ ಸಿಹಿಗುಂಬಳದ ಮೇಲೆ ಕೂತು ಪ್ರಯಾಣ ಆರಂಭಿಸಿದ್ದಾನೆ. ಈತನ ಈ ಕ್ರೇಜಿ ಐಡಿಯಾಕ್ಕೆ ಈತನ ಹೆಂಡತಿ ಹಾಗೂ ಬಂಧುಮಿತ್ರರೂ ಸಾಥ್‌ ನೀಡಿದ್ದು, ಅವರೂ ಈತನ ಸಿಹಿಗುಂಬಳದ ದೋಣಿಯ ಹಿಂದೆಯೇ ಬಂದು ವಿಡಿಯೋ ಮಾಡುವುದಕ್ಕೂ ಹಾಗೂ, ಯಾವುದೇ ದುರ್ಘಟನೆ ನಡೆಯದಿರುವಂತೆ ನೋಡಿಕೊಳ್ಳಲು ಸಹಾಯ ಮಾಡಿದ್ದಾರೆ. ಸಂಜೆ ಸುಮಾರು ೬.೩೦ಕ್ಕೆ ಈತನ ಪಯಣ ಅಂತ್ಯಗೊಂಡಿದೆ. ಸುಮಾರು ೩೮ ಮೈಲಿ ಅಂದರೆ ೬೧ ಕಿಮೀ ಕ್ರಮಿಸಿರುವ ಇವರು ನೆಬ್ರಾಸ್ಕಾ ನಗರಕ್ಕೆ ಬಂದು ಸೇರುವ ಮೂಲಕ ತನ್ನ ಇಡೀ ದಿನದ ಪಯಣಕ್ಕೆ ಮಂಗಳ ಹಾಡಿದ್ದಾರೆ.

ಹಾನ್ಸೇನ್‌ ಇದೀಗ ಈವರೆಗೆ ಇದ್ದ ವಿಶ್ವದಾಖಲೆ ಮುರಿದು ತಾನು ದಾಖಲೆ ಬರೆದಿದ್ದಾರೆ. ಸಿಹಿಗುಂಬಳದ ಮೇಲೆ ಅತೀ ಹೆಚ್ಚು ದೂರ ಕ್ರಮಿಸಿದ ವ್ಯಕ್ತಿ ಎಂಬ ಹೆಸರಿನಡಿ ಈ ಹಿಂದೆ ರಿಕ್‌ ಸ್ವೆನ್ಸನ್‌ ಅವರ ಹೆಸರಿತ್ತು. ಅವರು ೪೧.೦೩೮ ಕಿಮೀ ದೂರವನ್ನು ೨೦೧೮ರಲ್ಲಿ ಉತ್ತರ ಡಕೋಟಾದಲ್ಲಿ ಸಿಹಿಗುಂಬಳದ ದೋಣಿಯಲ್ಲಿ ಕ್ರಮಿಸಿದ್ದರು. ಇದೀಗ ಆ ಹೆಸರಿನ ದಾಖಲೆ ಹಾನ್ಸೇನ್‌ ಮುಡಿಗೇರಿದೆ. ಹಲವರು ಈ ಇಳಿ ವಯಸ್ಸಿನಲ್ಲಿ ಈತನ ಸಾಧನೆ ಕಂಡು, ʻಕೇಳಲು ಮಜವಾಗಿದೆ. ಆದರೆ, ಆತ ಮಾಡಿದ್ದು ನೋಡಿ ಖುಷಿಯಾಯಿತು. ಇದು ಏನನ್ನೂ ಯಾವ ವಯಸ್ಸಿನಲ್ಲೂ ಮಾಡಬಹುದು ಎಂಬುದಕ್ಕೆ ಸಾಕ್ಷಿ ಹಾಗೆಯೇ ಸ್ಪೂರ್ತಿ ಕೂಡಾʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | viral news | ದಿನಕ್ಕೆ 10 ಬಾರಿ ಮೂರ್ಛೆ ಹೋಗುವ ಈ ಲೇಡಿಗೆ ಗುರುತ್ವಾಕರ್ಷಣೆಯೇ ಅಲರ್ಜಿ!

Exit mobile version