Site icon Vistara News

Viral News: ಪಿಟ್‌ಬುಲ್‌ ದಾಳಿಯಿಂದ ಬಾಲಕನ್ನು ರಕ್ಷಿಸಿದ ಬೀದಿ ನಾಯಿಗಳು; ವಿಡಿಯೊ ಇಲ್ಲಿದೆ

Viral News

Viral News

ನವದೆಹಲಿ: ನಾಯಿ ಜತೆಗಿನ ಮಾನವನ ಸಂಬಂಧಕ್ಕೆ ಶತಮಾನಗಳ ಇತಿಹಾಸ ಇದೆ. ಕೆಲವೊಂದು ನಾಯಿಗಳು ಆಕ್ರಮಣ ಮನೋಭಾವ ತೋರುವುದು ಬಿಟ್ಟರೆ ಹೆಚ್ಚಿನವು ಮಾನವನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತವೆ. ನಾಯಿಗಳ ಈ ಎರಡು ತದ್ವಿರುದ್ದ ಸ್ವಭಾವಕ್ಕೆ ಸಂಬಂಧಿಸಿದ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಬಾಲಕನೊಬ್ಬನ ಮೇಲೆ ಪಿಟ್‌ಬುಲ್‌ ತಳಿಯ ನಾಯಿಯೊಂದು ದಾಳಿ ನಡೆಸಿದರೆ ಆತನನ್ನು ರಕ್ಷಿಸಲು ಬೀದಿ ನಾಯಿಗಳು ಧಾವಿಸಿ ಬಂದಿವೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ (Viral News).

ಗಾಜಿಯಾಬಾದ್​ನಲ್ಲಿ ಮಂಗಳವಾರ (ಏಪ್ರಿಲ್‌ 9) ಅಪರಾಹ್ನ ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡಿರುವ 15 ವರ್ಷದ ಬಾಲಕ ಅಲ್ತಾಫ್‌ನನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆತನ ಮೇಲೆ ಪಿಟ್‌ಬುಲ್‌ ನಾಯಿ ಇದ್ದಕ್ಕಿದ್ದಂತೆ ದಾಳಿ ನಡೆಸಿತ್ತು. ಈ ಎಲ್ಲ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯ ವಿವರ

ನಡೆದುಕೊಂಡು ಹೋಗುತ್ತಿದ್ದ ಅಲ್ತಾಫ್‌ನ ಮೇಲೆ ಪಿಟ್‌ಬುಲ್ ದಾಳಿ ನಡೆಸುತ್ತದೆ. ಇನ್ನೇನು ತನ್ನ ಮನೆಯ ಗೇಟ್‌ ತೆರೆಯಬೇಕು ಎನ್ನುವಷ್ಟರಲ್ಲಿ ಆತನ ಮೇಲೆ ಈ ಆಕ್ರಮಣ ನಡೆದಿತ್ತು. ಅನಿರೀಕ್ಷಿತ ಆಘಾತದಿಂದ ಆತ ನಿಯಂತ್ರಣ ತಪ್ಪಿ ನೆಲದ ಮೇಲೆ ಬೀಳುತ್ತಾನೆ. ಜನರು ನೋಡುತ್ತಿದ್ದರೂ ಭಯದಿಂದಾಗಿ ಯಾರೂ ಆತನನ್ನು ರಕ್ಷಿಸಲು ಮುಂದೆ ಬರಲಿಲ್ಲ. ಮೇಲಿನ ಮನೆಯವರು ನಾಯಿ ಮೇಲೆ ನೀರು ಸುರಿದರೂ ಅದು ಶಾಂತವಾಗಲಿಲ್ಲ.

ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದ ಅಲ್ತಾಫ್‌ ಕೊನೆಗೂ ಅದರಿಂದ ತಪ್ಪಿಸಿಕೊಂಡು ಗೇಟ್‌ ಬಳಿಗೆ ಓಡುತ್ತಾನೆ. ಅವನನ್ನು ಹಿಂಬಾಲಿಸಿಕೊಂಡು ಪಿಟ್‌ಬುಲ್‌ ಕೂಡ ಬರುತ್ತದೆ. ನಾಯಿ ಮತ್ತೆ ದಾಳಿ ಮಾಡುತ್ತದೆ. ಆಗಲೇ ಅಲ್ಲಿದ್ದ ಬೀದಿ ನಾಯಿಗಳು ತಕ್ಷಣ ಧಾವಿಸಿ ಬಂದು ಪಿಟ್​ಬುಲ್‌ ಅನ್ನು ಕಚ್ಚಿ ಎಳೆದು ಹೊರ ಹಾಕುತ್ತವೆ. ಇದರಿಂದ ಬಾಲಕ ಸುಲಭವಾಗಿ ತಪ್ಪಿಸಿಕೊಂಡು ಮನೆಯ ಒಳಗೆ ತೆರಳಿತ್ತಾನೆ. ಈ ಮಧ್ಯೆ ಪಿಟ್‌ಬುಲ್‌ನನ್ನು ಓಡಿಸಲು ನೆರೆ ಮನೆಯ ಯುವಕನೊಬ್ಬ ಕೋಲು ಹಿಡಿದು ಮುಂದೆ ಬರುತ್ತಾನೆ. ಬಾಲಕ ತಪ್ಪಿಸಿಕೊಂಡ ರೋಷದಲ್ಲಿ ಅದು ಆತನ ಮೇಲೆ ಎರಗಲು ಮುಂದಾಗುತ್ತದೆ. ಅದೃಷ್ಟವಶಾತ್‌ ಆತ ತಪ್ಪಿಸಿಕೊಂಡು ಮನೆಯೊಳಗೆ ಸೇರಿ ಬಾಗಿಲು ಹಾಕಿಕೊಂಡು ಬಚವಾಗುತ್ತಾನೆ.

ಕೆಲವು ದಿನಗಳ ಹಿಂದೆಯಷ್ಟೇ ಪಿಟ್‌ಬುಲ್‌ ಹೊಂದಿದ್ದ ಕುಟುಂಬ ಗಾಜಿಯಾಬಾದ್‌ಗೆ ಆಗಮಿಸಿತ್ತು. ಸದ್ಯ ಈ ನಾಯಿಯನ್ನು ಮುನ್ಸಿಪಲ್ ಕಾರ್ಪೊರೇಷನ್ ವಶಪಡಿಸಿಕೊಂಡಿದೆ. ಈ ರೀತಿಯ ನಾಯಿಯನ್ನು ಸಾಕುವುದಕ್ಕೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೂ ಮನೆಯವರು ನಮ್ಮ ಮಾತನ್ನು ಕೇಳಿರಲಿಲ್ಲ ಎಂದು ನೆರೆಮನೆಯವರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಈ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News: ಕೆಣಕಲು ಬಂದವನಿಗೆ ಸರಿಯಾಗಿ ಪಾಠ ಕಲಿಸಿದ ಕಾಡು ಕೋಣ; ಹೇಗೆಂದು ತಿಳಿಯಲು ಈ ವಿಡಿಯೊ ನೋಡಿ

ಪಿಟ್‌ಬುಲ್ ಟೆರಿಯರ್, ಅಮೆರಿಕನ್‌ ಬುಲ್‌ಡಾಗ್ಸ್, ರೊಟ್‌ವೀಲರ್ಸ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಗಳ ಅಪಾಯಕಾರಿ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version