Site icon Vistara News

Viral News: ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ತಂದೆ; ತಮ್ಮ ಜೀಪ್‌ನಲ್ಲೇ ವಿದ್ಯಾರ್ಥಿನಿಯನ್ನು ಕೇಂದ್ರಕ್ಕೆ ಕರೆದೊಯ್ದ ಪೊಲೀಸ್

#image_title

ಗಾಂಧಿನಗರ: ಪರೀಕ್ಷೆ ಎಂದರೆ ವಿದಾರ್ಥಿಗಳಲ್ಲಿ ಒಂದು ರೀತಿಯ ಭಯವಿರುತ್ತದೆ. ಅದರಲ್ಲೂ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಹೋಗುವುದು, ಅಲ್ಲಿ ತಮ್ಮ ಸೀಟನ್ನು ಹುಡುಕಿ ಕುಳಿತುಕೊಳ್ಳುವುದು ವಿದ್ಯಾರ್ಥಿಗಳ ದೊಡ್ಡ ಜವಾಬ್ದಾರಿಯಾಗಿಬಿಟ್ಟಿರುತ್ತದೆ. ಆದರೆ ಗುಜರಾತ್‌ನಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ತಂದೆ ಮಾಡಿದ ತಪ್ಪಿನಿಂದಾಗಿ ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ತೆರಳಿ (Viral News) ಒದ್ದಾಡುವಂತಾಗಿತ್ತು. ಆದರೆ, ಪೊಲೀಸರು ಆಕೆಯ ನೆರವಿಗೆ ಧಾವಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Viral Video: ಗಾಯಕ ಸ್ನೇಹದೀಪ್​​ರ ಕೇಸರಿಯಾ ಹಾಡಿಗೆ ಪ್ರಧಾನಿ ಮೋದಿ ಫಿದಾ; ವೈವಿಧ್ಯತೆಯಲ್ಲಿ ಏಕತೆಯ ಪ್ರತಿಬಿಂಬ ಎಂದು ಟ್ವೀಟ್​

ಗುಜರಾತ್‌ನ ಭುಜ್‌ ಪ್ರದೇಶದಲ್ಲಿ ವಿದ್ಯಾರ್ಥಿನಿ ಇತ್ತೀಚೆಗೆ ಪಬ್ಲಿಕ್‌ ಪರೀಕ್ಷೆ ಬರೆಯುವುದಕ್ಕೆ ಸಿದ್ಧಳಾಗಿದ್ದಳು. ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೊರಟ ತಂದೆ ಗಡಿಬಿಡಿಯಲ್ಲಿ ತಪ್ಪಾದ ಪರೀಕ್ಷಾ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಾರೆ. ವಿದ್ಯಾರ್ಥಿನಿ ಅಲ್ಲಿ ತನ್ನ ರೋಲ್‌ ನಂಬರ್‌ಗಾಗಿ ಹುಡುಕಿದಾಗ ಅದು ಸಿಕ್ಕಿಲ್ಲ. ಇದರಿಂದಾಗಿ ಆಕೆ ಗಾಬರಿಗೊಂಡಿದ್ದಾಳೆ.

ಆಕೆಯನ್ನು ಗಮನಿಸಿದ ಅಲ್ಲಿದ್ದ ಪೊಲೀಸ್‌ ಸಿಬ್ಬಂದಿ ಏನಾಯಿತು ಎಂದು ವಿಚಾರಿಸಿದ್ದಾರೆ. ಹಾಲ್‌ ಟಿಕೆಟ್‌ನಲ್ಲಿ ನೋಡಿದಾಗ ಆಕೆಯ ಪರೀಕ್ಷಾ ಕೇಂದ್ರ 20ಕಿ.ಮೀ. ದೂರದಲ್ಲಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸ್‌ ಸಿಬ್ಬಂದಿ ಆಕೆಯನ್ನು ತನ್ನ ಜೀಪ್‌ನಲ್ಲಿ ಕೂರಿಸಿಕೊಂಡು ಸರಿಯಾದ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಹೋಗಬೇಕೆಂದು ಜೀಪಿಗೆ ಸೈರನ್‌ ಹಾಕಿಕೊಂಡೇ ಹೋಗಿದ್ದರು ಎಂದು ವರದಿಯಾಗಿದೆ.


ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ವೈರಲ್‌ ಆಗಿದೆ. ಈ ರೀತಿ ಸಹಾಯ ಮಾಡಿದ ಪೊಲೀಸ್‌ ಸಿಬ್ಬಂದಿಯನ್ನು ಜೆ.ವಿ.ಧೋಲು ಎಂದು ಗುರುತಿಸಲಾಗಿದೆ. ಅವರು ವಿದ್ಯಾರ್ಥಿನಿಯನ್ನು ಕರೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ ಫೋಟೋ ಎಲ್ಲೆಡೆ ಹರಿದಾಡಿದೆ.

Exit mobile version