Site icon Vistara News

Viral News: ಯೋಧನ ಮೇಲೆ ಪೊಲೀಸರ ದೌರ್ಜನ್ಯ; ನಗ್ನಗೊಳಿಸಿ ಹಿಗ್ಗಾಮುಗ್ಗಾ ಥಳಿತ

Viral News

ಜೈಪುರ: ಮಿಲಿಟರಿ ಕಮಾಂಡೋ ಒಬ್ಬರನ್ನು ಪೊಲೀಸರು ಬೆತ್ತಲೆಗೊಳಿಸಿ ಥಳಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಜಸ್ಥಾನದ ಕ್ಯಾಬಿನೆಟ್ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ (Rajyavardhan Singh Rathore) ಕೂಡ ಈ ಘಟನೆಯನ್ನು ಖಂಡಿಸಿದ್ದು, ಅವರು ಪೊಲೀಸರು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ.

ಸೇನಾ ಕಮಾಂಡೋ ವಿರುದ್ಧ ಪೊಲೀಸರು ನಡೆಸಿದ ಕ್ರೌರ್ಯದ ಬಗ್ಗೆ ಮಾಹಿತಿ ಪಡೆದ ರಾಜ್ಯವರ್ಧನ್ ಸಿಂಗ್ ರಾಥೋಡ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ ಅವರು ಪೊಲೀಸ್ ಠಾಣೆಯೊಳಗೆ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಜೈಪುರದ ಶಿಪ್ರಪಥ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಬ್ಯಾರಕ್‌ಗಳಲ್ಲಿ ಕಮಾಂಡರನ್ನು ವಿವಸ್ತ್ರಗೊಳಿಸಿ ಥಳಿಸಿದರು ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿದ್ದರು ಎಂದು ಆರೋಪಿಸಲಾಗಿದೆ. ರಾಜಸ್ಥಾನ ಸರ್ಕಾರದ ಸೈನಿಕ ಕಲ್ಯಾಣ ಸಚಿವರೂ ಆದ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪೊಲೀಸರಿಗೆ ಬೆವರಿಳಿಸಿದ ಸಚಿವ

ಶಿಪ್ರಪಥ್ ಪೊಲೀಸ್ ಠಾಣೆಯಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಪೊಲೀಸರನ್ನು ಬೆಂಡೆತ್ತುವ ಈ ವಿಡಿಯೊ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಭಾರತೀಯ ಸೇನಾ ಕಮಾಂಡೋ ಜತೆ ಪೊಲೀಸರ ದುರ್ವರ್ತನೆಯಿಂದ ಅಸಮಾಧಾನಗೊಂಡ ಅವರು ನೇರ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳ ಬೆವರಳಿಸಿದ್ದಾರೆ. “ನೀವು ಮೂಲಭೂತ ನಡವಳಿಕೆಯನ್ನು ಕಲಿತಿಲ್ಲವೇ ? ಸಮವಸ್ತ್ರವು ಧರಿಸಿದರೆ ಏನೂ ಮಾಡಬಹುದು ಎಂದು ಭಾವಿಸಿದ್ದೀರಾ? ನಿಮ್ಮ ಮನಸ್ಸಿನಲ್ಲಿ ತಾಳ್ಮೆ, ಸಾರ್ವಜನಿಕ ಸೇವೆಯ ಪ್ರಜ್ಞೆ ಇದೆಯೇ?ʼʼ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಿಯೋಜಿತರಾಗಿರುವ ಸೇನಾ ಕಮಾಂಡೋ ರಜೆಯ ಹಿನ್ನೆಲೆಯಲ್ಲಿ ತಮ್ಮೂರಾದ ಜೈಪುರಕ್ಕೆ ಆಗಮಿಸಿದ್ದರು. ಆಗಸ್ಟ್ 11ರಂದು ಅವರು ತಮ್ಮ ಸಹ ಕಮಾಂಡೋ ಒಬ್ಬರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರದ ಶಿಪ್ರಪಥ್ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ಕಮಾಂಡರನ್ನು ಬ್ಯಾರಕ್‌ನಲ್ಲಿ ಇರಿಸಿ ಥಳಿಸಿದ್ದರು ಎನ್ನಲಾಗಿದೆ.

ಪೊಲೀಸರು ಕಮಾಂಡರನ್ನು ನಗ್ನಗೊಳಿಸಿ ದೊಣ್ಣೆಗಳಿಂದ ಹೊಡೆದಿದ್ದಲ್ಲದೆ, ‘ಪೊಲೀಸರು ಭಾರತೀಯ ಸೇನೆಗಿಂತ ಶ್ರೇಷ್ಠ’ ಎನ್ನುವ ಅರ್ಥ ಬರುವಂತ ಮಾತು ಹೇಳುವಂತೆ ಬಲವಂತಪಡಿಸಿದ್ದರು. ಜತೆಗೆ ಇದನ್ನು ಚಿತ್ರೀಕರಿಸಿದ್ದಾರೆ ಎಂದು ದೂರಲಾಗಿದೆ. ಈ ವಿಡಿಯೊ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ಸ್ವತಃ ಪೊಲೀಸ್‌ ಠಾಣೆಗೆ ಧಾವಿಸಿದರು. ಇದೇ ವೇಳೆ ಪೊಲೀಸರ ಕೃತ್ಯವನ್ನು ಸಮರ್ಥಿಸಿಕೊಂಡ ಎಸಿಪಿ ಸಂಜಯ್ ಶರ್ಮ, ಮೊದಲು ಕಮಾಂಡರ್‌ ತಮ್ಮನ್ನು ನಿಂದಿಸಿದ್ದಾಗಿ ತಿಳಿಸಿದರು.

ʼʼಪೊಲೀಸರು ಭಾರತೀಯ ಸೇನೆಯ ಸೈನಿಕನನ್ನು ಬೆತ್ತಲೆಗೊಳಿಸಿ ಕೋಲುಗಳಿಂದ ಥಳಿಸಿದ್ದಾರೆ. ಇದನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ. ಇದು ಹೇಯ ಕೃತ್ಯ. ಇದು ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತದೆʼʼ ಎಂದು ರಾಜ್ಯ ವರ್ಧನ್‌ ಸಿಂಗ್‌ ಕಿಡಿಕಾರಿದ್ದಾರೆ. ಸದ್ಯ ಜೈಪುರ ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್‌ಪೆಕ್ಟರ್‌ ಬನ್ನಾ ಲಾಲ್ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.

ಇದನ್ನೂ ಓದಿ: Arshad Nadeem : ಲಷ್ಕರ್ ಉಗ್ರನ ಜತೆ ಕಾಣಿಸಿಕೊಂಡ ಪಾಕಿಸ್ತಾನದ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಅರ್ಷದ್​ ನದೀಮ್​!

Exit mobile version