Site icon Vistara News

Viral News: ಲಾರಿಗೆ ಡಿಕ್ಕಿ ಹೊಡೆಯಿತು ಕಂತೆ ಕಂತೆ ನಗದು ಸಾಗಿಸುತ್ತಿದ್ದ ವ್ಯಾನ್‌; ನೋಟಿನ ರಾಶಿ ಹೇಗಿದೆ ನೋಡಿ

Viral News

Viral News

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಜತೆಗೆ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಈ ಮಧ್ಯೆ ಲೆಕ್ಕವಿಲ್ಲದ ಸುಮಾರು 7 ಕೋಟಿ ರೂ. ನಗದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸರು ಈ ಬೃಹತ್‌ ಮೊತ್ತದ ನಗದನ್ನು ವಶ ಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಈ ನಗದನ್ನು ಸಾಗಿಸುತ್ತಿದ್ದ ವ್ಯಾನ್‌ ಅಪಘಾತಕ್ಕೀಡಾದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕಂತೆ ಕಂತೆ ನೋಟನ್ನು ತೋರಿಸುವ ವಿಡಿಯೊ ವೈರಲ್‌ ಆಗಿದೆ (Viral News).

ಪತ್ತೆಯಾಗಿದ್ದು ಹೇಗೆ?

ವಿಶೇಷ ಎಂದರೆ ಈ ವ್ಯಾನ್‌ ಅಪಘಾತಕ್ಕೀಡಾಗದಿದ್ದರೆ ಈ ಕೃತ್ಯ ಬೆಳಕಿಗೆ ಬರುತ್ತಿರಲಿಲ್ಲ. ಲೆಕ್ಕವಿಲ್ಲದ ರಾಶಿ ರಾಶಿ ಹಣವನ್ನು ಒಳಗೊಂಡಿದ್ದ ವ್ಯಾನ್‌ ವಿಜಯವಾಡದಿಂದ ವಿಶಾಖಪಟ್ಟಣಂಗೆ ತೆರಳುತ್ತಿತ್ತು. ಅಲ್ಲಿಯವರೆಗೆ ಕ್ರಿಮಿನಲ್‌ಗಳು ಅಂದುಕೊಂಡಂತೆಯೇ ಎಲ್ಲವೂ ನಡೆದಿತ್ತು. ಕಾನೂನು ಕಣ್ತಪ್ಪಿಸಿ ಬಚಾವಾಗಬಹುದು ಎಂದುಕೊಳ್ಳುವಷ್ಟರಲ್ಲಿ ಅದೃಷ್ಟ ಕೈಕೊಟ್ಟಿತ್ತು.

ಅನಂತಪಲ್ಲಿ ಟೋಲ್‌ ಪ್ಲಾಜಾದ ಬಳಿ ವ್ಯಾನ್‌ ಲಾರಿಯೊಂದಕ್ಕೆ ಡಿಕ್ಕಿ ಹೊಡೆಯುವ ಮೂಲಕ ಇವರ ಬಂಡವಾಳ ಬಯಲಾಗಿತ್ತು, ಕೃತ್ಯ ಬೆಳಕಿಗೆ ಬಂದಿತ್ತು. ಗಾಯಗೊಂಡ ಚಾಲಕನನ್ನು ಚಿಕಿತ್ಸೆಗಾಗಿ ಗೋಪಾಲಪುರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದ್ದ ಹಣದ ಕಂತೆ

ವಿಶೇಷ ಎಂದರೆ ವ್ಯಾನ್‌ನಲ್ಲಿದ್ದ ಈ ಅಕ್ರಮ ದುಡ್ಡನ್ನು ಮೊದಲು ಗಮನಿಸಿದ್ದು ಸಾರ್ವಜನಿಕರು. ಲಾರಿ ಮತ್ತು ವ್ಯಾನ್‌ ಪರಸ್ಪರ ಡಿಕ್ಕಿ ಹೊಡೆದಾಗ ಸ್ಥಳೀಯರು ನೆರವಿಗೆ ಧಾವಿಸಿದ್ದರು. ಈ ವೇಳೆ ವ್ಯಾನ್‌ನ ಏಳು ಕಾಟನ್‌ ಬಾಕ್ಸ್‌ನಲ್ಲಿ ತುಂಬಿಸಿಟ್ಟಿದ್ದ ನೋಟಿನ ಕಂತೆ ಕಂಡು ಬಂದಿದೆ. ಇದುವರೆಗೆ ಒಂದೇ ಬಾರಿ ಅಷ್ಟೊಂದು ನೋಟನ್ನು ನೋಡಿರದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದರು. 500 ರೂ., 200 ರೂ., 100 ರೂ.ಗಳ ರಾಶಿಯೇ ಅಲ್ಲಿತ್ತು. ಕೂಡಲೇ ಅವರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರು.

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಈ ನಗದನ್ನು ವಶಪಡಿಸಿಕೊಂಡಿದ್ದು, ಇದರ ಮೂಲವನ್ನು ಶೋಧಿಸಲು ತನಿಖೆ ನಡೆಸುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಾಳೆ (ಮೇ 13) ಮತದಾನ ನಡೆಯಲಿರುವುದರಿಂದ ಆ ನಿಟ್ಟಿನಲ್ಲಿಯೂ ತನಿಖೆ ಆರಂಭಿಸಲಾಗಿದೆ. ಸದ್ಯ ವ್ಯಾನ್‌ನಲ್ಲಿ ಪೇರಿಸಿಟ್ಟ ನೋಟುಗಳ ಕಂತೆಯನ್ನು ತೋರಿಸುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Viral News: ಕುಡಿದ ಮತ್ತಿನಲ್ಲಿ ಪೊಲೀಸ್‌ ಪೇದೆಯ ಕೈ ಕಚ್ಚಿ, ಬಟ್ಟೆ ಹರಿದು ಹಲ್ಲೆ ಮಾಡಿದ ಮಹಿಳೆಯರು

ಕೆಲವು ದಿನಗಳ ಹಿಂದೆಯಷ್ಟೇ ಆಂಧ್ರ ಪ್ರದೇಶದ ಎನ್‌ಟಿಆರ್‌ ಜಿಲ್ಲೆಯ ಚೆಕ್‌ಪೋಸ್ಟ್‌ ಒಂದರ ಬಳಿ ಸುಮಾರು 8 ಕೋಟಿ ರೂ. ನಗದನ್ನು ಒಳಗೊಂಡ ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಪೈಪ್‌ ತುಂಬಿದ್ದ ಲಾರಿಯೊಂದರಲ್ಲಿ ಈ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಅದಾಗಿ ಕೆಲವೇ ದಿನಗಳ ಅಂತರದಲ್ಲಿ ಈ ಘಟನೆ ನಡೆದಿರುವುದು ಕಳವಳ ಹುಟ್ಟು ಹಾಕಿದೆ.

ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ (ಮೇ 6) ಜಾರ್ಖಂಡ್‌ನ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಸರಣಿ ದಾಳಿ ನಡೆಸಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್‌ ಮುಖಂಡ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮನೆಯಲ್ಲಿ ಲೆಕ್ಕವಿಲ್ಲದ 25 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು.

Exit mobile version