ಯಾವತ್ತಾದರೂ ಎರಡು ರಾಜ್ಯಗಳಲ್ಲಿ ಒಟ್ಟಿಗೆ ಜೀವಿಸಿದ್ದೀರಾ? ಅಂದರೆ, ಒಂದು ರಾಜ್ಯದಲ್ಲಿ ಮಲಗಿ ರಾತ್ರಿ ಎಚ್ಚರವಾದಾಗ ಬಾತ್ರೂಮಿಗೆ ಇನ್ನೊಂದು ರಾಜ್ಯಕ್ಕೆ ಹೋಗಿದ್ದೀರಾ? ಒಂದು ರಾಜ್ಯದಲ್ಲಿ ಮಲಗಿ, ಬೆಳಗ್ಗೆದ್ದು ಇನ್ನೊಂದು ರಾಜ್ಯಕ್ಕೆ ಹೋಗಿ ಹಲ್ಲುಜ್ಜಿದ್ದೀರಾ? ಅಥವಾ ಒಂದು ರಾಜ್ಯದಲ್ಲಿ ಅಡುಗೆ ಮಾಡಿ ಇನ್ನೊಂದು ರಾಜ್ಯದಲ್ಲಿ ಕೂತು ತಿಂದಿದ್ದೀರಾ?
ಇದೆಂಥ ಅಸಂಬದ್ಧ ಪ್ರಶ್ನೆಗಳ ಸರಮಾಲೆ ಅನಿಸಿತಾ? ಹೀಗೆಲ್ಲಾ ಸಾಧ್ಯವಾ ಅಂತ ನಕ್ಕರೆ, ಒಮ್ಮೆ ತುರಿಸಿಕೊಂಡೋ, ಚಿವುಟಿಕೊಂಡೋ ನೋಡಿ. ಇದು ವಿಚಿತ್ರವೆನಿಸಿದರೂ ವಾಸ್ತವ. ಇಲ್ಲೊಂದು ಮನೆಯ ಅರ್ಧಭಾಗ ಒಂದು ರಾಜ್ಯದಲ್ಲಿದ್ದರೆ ಇನ್ನೊಂದರ್ಧ ಭಾಗ ಮತ್ತೊಂದು ರಾಜ್ಯದಲ್ಲಿದೆಯಂತೆ. ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದ ಗಡಿಯಲ್ಲಿರುವ ಸಿಮಾವತಿ ಜಿವತಿ ತಹಸಿಲ್‌ನ ಮಹಾರಾಜಗುಡ ಎಂಬ ಹಳ್ಳಿಯ ಪವಾರ್ ಕುಟುಂಬದ ಮನೆಯೊಂದು ಎರಡೂ ರಾಜ್ಯಕ್ಕೆ ಸೇರಿ ಕೆಲವೊಮ್ಮೆ ಗೊಂದಲಗಳಾಗುತ್ತವೆಯಂತೆ.
ಈ ಪವಾರ್ ಬೃಹತ್ ಕೂಡು ಕುಟುಂಬದಲ್ಲಿ ೧೩ ಮಂದಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಇದೊಂದು ವಿಚಿತ್ರ ಅನುಭವ ನೀಡುತ್ತಿದೆಯಂತೆ. ಹಲವಾರು ವಿಷಯಗಳಿಗೆ ಎರಡೂ ರಾಜ್ಯಗಳ ಕಚೇರಿಗಳಿಗೆ ಎಡತಾಕುವುದು ಈ ಮನೆಯ ಮಂದಿಗೆ ಸಾಮಾನ್ಯ ಕೆಲಸವಂತೆ. ಆದರೂ, ಇದರಿಂದ ಈವರೆಗೆ ಯಾವುದೇ ತೊಂದರೆಗಳಾಗಿಲ್ಲ ಎಂದೂ ಅವರು ಹೇಳುತ್ತಾರೆ.
ಎರಡು ರಾಜ್ಯಗಳ ಗಡಿರೇಖೆ ಒಂದೇ ಆಸ್ತಿಯೊಳಗಿಂದ ಹಾದುಹೋಗುವುದು ಕೇಳಿದ್ದೇವೆ, ಆದರೆ, ಮನೆಯೊಳಗಿಂದ ಹಾದುಹೋದರೆ? ಇವರದ್ದೂ ಅದೇ ಕಥೆ. ಇವರ ೧೦ ಕೋಣೆಗಳಿರುವ ಮನೆಯಲ್ಲಿ ನಾಲ್ಕು ರೂಮುಗಳು ತೆಲಂಗಾಣ ರಾಜ್ಯಕ್ಕೂ, ಇನ್ನು ಆರು ಕೋಣೆಗಳು ಮಹಾರಾಷ್ಟ್ರಕ್ಕೂ ಬರುತ್ತದಂತೆ. ಮನೆಯ ಅಡುಗೆ ಕೋಣೆ ತೆಲಂಗಾಣ ರಾಜ್ಯದಲ್ಲಿದ್ದು ವರಾಂಡ ಹಾಗೂ ಮಲಗುವ ಕೋಣೆಗಳು ಮಹಾರಾಷ್ಟ್ರಕ್ಕೆ ಸೇರುತ್ತದೆ. ಈ ಕೂಡು ಕುಟುಂಬ ಹಲವಾರು ವರ್ಷಗಳಿಂದ ಇದೇ ಮನೆಯಲ್ಲಿ ಜೀವಿಸುತ್ತಿದ್ದಾರೆ.
ಮನೆಯ ಮಂದಿ ಎರಡೂ ರಾಜ್ಯಗಳ ಸವಲತ್ತುಗಳನ್ನು ನ್ಯಾಯವಾಗಿಯೇ ಪಡೆಯುತ್ತಿದ್ದಾರೆ. ಅವರ ಬಳಿ ಎರಡೂ ರಾಜ್ಯದ ನೋಂದಣಿಯಾಗಿರುವ ವಾಹನಗಳಿವೆ. ಎರಡೂ ರಾಜ್ಯಗಳಿಗೆ ಸಂಬಂಧಪಟ್ಟ ಎಲ್ಲ ತೆರಿಗೆಗಳನ್ನೂ ಕಟ್ಟುತ್ತಾರೆ.
ಈ ಮನೆಯ ಒಡೆಯ ಉತ್ತಮ್ ಪವಾರ್ ಅವರು ಇತ್ತೀಚೆಗೆ ಖಾಸಗಿ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡುತ್ತಾ, ನಮ್ಮ ಮನೆ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳೆರಡರ ನಡುವೆ ಇಬ್ಭಾಗವಾಗಿದ್ದು, ಈವರೆಗೆ ಇದರಿಂದ ನಮಗೇನೂ ತೊಂದರೆಗಳಾಗಿಲ್ಲ. ಆಸ್ತಿ ತೆರಿಗೆಯನ್ನು ನಾವು ಎರಡೂ ರಾಜ್ಯಗಳಿಗೆ ಪಾವತಿಸುತ್ತಿದ್ದು, ಸರ್ಕಾರಿ ಯೋಜನೆಗಳ ಉಪಯೋಗಗಳನ್ನು ಎರಡೂ ರಾಜ್ಯದಿಂದ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
೧೯೬೯ರಲ್ಲಿ ಗಡಿ ವಿವಾದ ಒಂದು ಹಂತಕ್ಕೆ ಬಂದು ನಿಂತಾಗ ಪವಾರ್ ಅವರ ಮನೆ ಎರಡೂ ರಾಜ್ಯಗಳ ನಡುವೆ ನಿಂತಿತ್ತು. ಕಾನೂನುರೀತ್ಯಾ ಈ ಜಾಗ ಮಹಾರಾಷ್ಟ್ರಕ್ಕೆ ಸೇರುತ್ತದೆಯೆಂದು ಹೇಳಲಾದರೂ, ಗಡಿಯಲ್ಲಿರುವ ತೆಲಂಗಾಣ ಇಲ್ಲಿನ ಕೆಲವು ಹಳ್ಳಿಗಳನ್ನು ತನ್ನ ಆಕರ್ಷಕ ಯೋಜನೆಗಳ ಮೂಲಕ ನಿರಂತರವಾಗಿ ತನ್ನೆಡೆಗೆ ಸೆಳೆಯಲು ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಈಗ ಹೇಳಿ, ರಾತ್ರಿ ನಿದ್ದೆಯಿಂದೆಚ್ಚರವಾದಾಗ ಬಾತ್ರೂಮಿಗೆ ಇನ್ನೊಂದು ರಾಜ್ಯಕ್ಕೆ ಹೋಗಿ ಮತ್ತೆ ಬಂದು ಯಥಾ ಪ್ರಕಾರ ಬೇರೆ ರಾಜ್ಯದ ಮಲಗುವ ಕೋಣೆಯಲ್ಲಿ ಮಲಗುವುದು ಸಾಧ್ಯ ಇದೆಯೋ ಇಲ್ಲವೋ?!