ಲಕ್ನೋ: ಅದು 2009ರ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ. ಆ ದಿನ ಪೂರ್ತಿ ಭಾರತವೇ ಖುಷಿಯಿಂದ ಕುಣಿದಿತ್ತು. ಏಕೆಂದರೆ ʼಸ್ಲಂ ಡಾಗ್ ಮಿಲಿಯನಿಯರ್ʼ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆಲ್ಲುವುದರ ಜತೆ ಉತ್ತರ ಪ್ರದೇಶದ ಬಾಲಕಿ ಪಿಂಕಿ ಕುರಿತಾಗಿ ಮಾಡಲಾದ ಡಾಕ್ಯುಮೆಂಟರಿ ಸಿನಿಮಾ ʼಸ್ಮೈಲ್ ಪಿಂಕಿʼ ಅತ್ಯುತ್ತಮ ಡಾಕ್ಯುಮೆಂಟರಿ ಸಿನಿಮಾ ಪ್ರಶಸ್ತಿಯನ್ನು (Viral News) ಗೆದ್ದುಕೊಂಡಿತ್ತು.
ಮೇಗನ್ ಮೈಲಾನ್ ನಿರ್ದೇಶಿಸಿದ್ದ ಸಿನಿಮಾದಲ್ಲಿ ಸೀಳು ತುಟಿ ಹೊಂದಿದ್ದ ಆರು ವರ್ಷದ ಪಿಂಕಿ ಕಥೆಯನ್ನು ತೋರಿಸಿಕೊಡಲಾಗಿತ್ತು. ಆಕೆಗೆ ವಾರಾಣಸಿಯಲ್ಲಿ ಸುಬೋಧ್ ಕುಮಾರ್ ಸಿಂಗ್ ಹೆಸರಿನ ಸರ್ಜನ್ ಶಸ್ತ್ರಚಿಕಿತ್ಸೆ ಮಾಡಿ ಸೀಳುತುಟಿ ಸರಿಮಾಡಿಕೊಟ್ಟಿದ್ದರು. ಈ ಕಥೆ 2009ರಲ್ಲಿ ಅಮೆರಿಕದಲ್ಲಿ ಆಸ್ಕರ್ ಗೆದ್ದಿದ್ದಷ್ಟೇ ಅಲ್ಲದೆ ನಾಲ್ಕು ವರ್ಷಗಳ ನಂತರ ಲಂಡನ್‌ನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಪಿಂಕಿ ಮತ್ತು ಆಕೆಯ ತಂದೆ ಸೊಂಕರ್ ಅವರು ಅಮೆರಿಕಕ್ಕೆ ತೆರಳಿ ಅಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಂಡು ಬಂದಿದ್ದರು.
ಇದನ್ನೂ ಓದಿ: Viral Video : ಇದು ಹುಡುಗಿಯಲ್ಲ ಸ್ವಾಮಿ! ಈ ಬೈಕ್‌ನಲ್ಲಿರುವವರು ತುಂಬಾನೇ ವಿಶೇಷ, ಯಾರಿವರು?
ಇದೀಗ ಆ ಪಿಂಕಿಗೆ 20 ವರ್ಷ ವಯಸ್ಸು. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಅಹಿರೌರಾ ಬಳಿಯ ಸಣ್ಣ ಹಳ್ಳಿಯೊಂದರಲ್ಲಿ ಈ ಕುಟುಂಬವಿದೆ. ಪಿಂಕಿ ಅಹಿರೌರಾದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದಾಳೆ. ಆಕೆಯ ತಂದೆ ಪಿಂಕಿ ಚಿಕ್ಕವಳಿದ್ದಾಗ ಹಣ್ಣು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದರು. ಈಗಲೂ ಅದೇ ಕೆಲಸ ಅವರಿಗೆ ಹೊತ್ತಿನ ಊಟಕ್ಕೆ ಹಣ ತಂದುಕೊಡುತ್ತಿದೆ.
ಪಿಂಕಿ ಮತ್ತು ಆಕೆಯ ಕುಟುಂಬ ಈಗಲೂ ನೀರಿಗೋಸ್ಕರ ನೂರು ಮೀಟರ್ ದೂರಕ್ಕೆ ತೆರಳಿ ಹೊತ್ತು ತರಬೇಕು. ಎರಡು ರೂಮುಗಳಿರುವ ಮನೆಯಲ್ಲಿ ಈಗಲೂ ಒಂದು ರೂಮಿಗೆ ಬಾಗಿಲು ಇಲ್ಲ. ಪಿಂಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಕೇಳಿಬರುವಂತೆ ಮಾಡಿದಳಾದರೂ ಇಂದಿಗೂ ಆಕೆ ಬಡತನದ ಬೇಗೆಯಲ್ಲೇ ಬೇಯುತ್ತಿದ್ದಾಳೆ.
ಇದನ್ನೂ ಓದಿ: Viral Photo : ನಾಯಿಗಳ ಗ್ರೂಪ್ ಫೋಟೋ! ಇದು ಮತ್ತಾರಿಂದಲೂ ಸಾಧ್ಯವಾಗದ ಕೆಲಸ
ಅಂದ ಹಾಗೆ ಪಿಂಕಿಯ ತಂದೆಗೆ ಮನೆಯ ಖರ್ಚನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಹೀಗಿರುವಾಗ ಪಿಂಕಿಯ ವಿದ್ಯಾಭ್ಯಾಸ ಅವರಿಂದ ಅಸಾಧ್ಯವಾದದ್ದು. ಆಕೆಯ ಸೀಳು ತುಟಿ ಸರಿಮಾಡಲು ಸಹಾಯ ಮಾಡಿದ್ದ ಸ್ಮೈಲ್ ಟ್ರೈನ್ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಮಮತಾ ಕರ್ರೋಲ್ ಅವರೇ ಪಿಂಕಿಯ ಸಹಾಯಕ್ಕೆ ಈಗಲೂ ನಿಂತಿದ್ದಾರೆ. ಪ್ರತಿ ತಿಂಗಳು ಪಿಂಕಿಯ ವಿದ್ಯಾಭ್ಯಾಸಕ್ಕೆಂದು ಮಮತಾ ಅವರು ಹಣ ಕಳುಹಿಸುತ್ತಿದ್ದು, ಅದರಿಂದಾಗಿಯೇ ವಿದ್ಯಾಭ್ಯಾಸ ನಡೆಯುತ್ತಿರುವುದಾಗಿ ಹೇಳಿದ್ದಾರೆ ಪಿಂಕಿ.