ಗಾಂಧಿನಗರ: ಬಾಲ್ಯದ ನೆನಪುಗಳೇ ಸುಂದರ. ಅಪ್ಪ-ಅಮ್ಮ, ಅಜ್ಜ-ಅಜ್ಜಿ ಜತೆ ಸಮಯ ಕಳೆದ ನೆನಪು ಸದಾ ಕಾಡುವಂತಹದ್ದು. ಹೀಗಾಗಿ ಈ ಸುಂದರ ದಿನಗಳನ್ನು ಸ್ಮರಣೀಯವಾಗಿಸಲು ಅನೇಕರು ತಮ್ಮ ಬಾಲ್ಯದ ಫೋಟೊಗಳನ್ನು ಜೋಪಾನವಾಗಿ ತೆಗೆದಿರಿಸುತ್ತಾರೆ. ಇದೀಗ ಅಂತಹ ಬಾಲ್ಯದ ಫೋಟೊವನ್ನು ಗೂಗಲ್ ಡ್ರೈವ್‌ಗೆ ಸೇರಿಸಿದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ ಸಂಕಷ್ಟ ಎದುರಾಗಿದೆ. ಈ ಫೋಟೊವನ್ನು ʼಮಕ್ಕಳ ಮೇಲಿನ ದೌರ್ಜನ್ಯʼ ಎಂದು ಕರೆದಿರುವ ಗೂಗಲ್ ಅವರ ಜಿಮೇಲ್ ಅನ್ನು ತಡೆ ಹಿಡಿದಿದೆ. ಹೀಗಾಗಿ ಅವರು ಇದೀಗ ತಮ್ಮ ಜಿಮೇಲ್ ಖಾತೆಯನ್ನು ಮರಳಿ ಒದಗಿಸಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿಚಾರ ವೈರಲ್ ಆಗಿದೆ (Viral News).
ಘಟನೆಯ ವಿವರ
ಗುಜರಾತ್‌ನ ನೀಲ್ ಶುಕ್ಲಾ ಎನ್ನುವ ಯುವಕ ತನ್ನ ಬಾಲ್ಯದ ಬೆತ್ತಲೆ ಫೋಟೊವನ್ನು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿದ್ದರು. ಹೇಳಿ ಕೇಳಿ ಅದು ಶುಕ್ಲಾ ಹಸುಳೆಯಾಗಿದ್ದಾಗಿನ ಫೋಟೊ. ಅವರಿಗೆ ಅಂದಾಜು ಎರಡು ವರ್ಷ ಇದ್ದಾಗ ಅಜ್ಜಿ ಸ್ನಾನ ಮಾಡಿಸುವ ಫೋಟೊ ಅದು. ಸವಿ ನೆನಪಿನ ಉದ್ದೇಶದಿಂದ ಶುಕ್ಲಾ ಅದನ್ನು ಗೂಗಲ್ ಡ್ರೈವ್‌ಗೆ ಸೇರಿಸಿದ್ದರು.
ಇದು ಗೂಗಲ್ ಕಂಪೆನಿಯ ಕಣ್ಣು ಕುಕ್ಕಿದೆ. ʼಮಕ್ಕಳ ಮೇಲಿನ ದೌರ್ಜನ್ಯʼದ ಫೋಟೊವನ್ನು ಡ್ರೈವ್‌ನಲ್ಲಿ ಸೇವ್ ಮಾಡಿದ್ದಾರೆಂದು ಗೂಗಲ್ ಶುಕ್ಲಾ ಅವರ ಜಿಮೇಲ್ ಖಾತೆಯನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ತಡೆ ಹಿಡಿದಿದೆ.
ಕೋರ್ಟ್ ಮೆಟ್ಟಿಲೇರಿದರು
ಬಳಿಕ ತಮ್ಮ ಇಮೇಲ್ ಖಾತೆಯನ್ನು ಪರಿಶೀಲಿಸಲಾಗದೆ ಶುಕ್ಲಾ ಸಾಕಷ್ಟು ತೊಂದರೆ ಅನುಭವಿಸಿದ್ದರು. ಕೊನೆಗೆ ನಿರ್ವಾಹವಿಲ್ಲದೆ ಅವರು ಕಾನೂನು ಸಮರಕ್ಕೆ ನಿರ್ಧರಿಸಿದ್ದರು. ಮೊದಲು ಗುಜರಾತ್ ಪೊಲೀಸರು ಮತ್ತು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ಇಲಾಖೆಗೆ ಮನವಿ ಸಲ್ಲಿಸಿದ್ದರು. ತಮ್ಮ ಇಮೇಲ್ ಖಾತೆಯನ್ನು ಸಕ್ರಿಯಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಸಮಸ್ಯೆ ಬಗೆಹರಿದಿರಲಿಲ್ಲ.
ಕೊನೆಗೆ ಗುಜರಾತ್ ಹೈಕೋರ್ಟ್‌ನ ಕದ ತಟ್ಟಿದರು. ಸಾಮಾನ್ಯವಾಗಿ ಇಮೇಲ್ ಅಕೌಂಟ್ ಅನ್ನು ತಡೆ ಹಿಡಿದ ಒಂದು ವರ್ಷದ ನಂತರ ಆ ಖಾತೆಯಲ್ಲಿನ ಎಲ್ಲ ಮಾಹಿತಿಗಳನ್ನು ಡಿಲೀಟ್ ಮಾಡಲಾಗುತ್ತದೆ. ʼʼಇದರಲ್ಲಿ ಬಹು ಮುಖ್ಯ ಮಾಹಿತಿಗಳಿದ್ದು, ಅವನ್ನು ಡಿಲೀಟ್ ಮಾಡಿದರೆ ಬಹಳಷ್ಟು ತೊಂದರೆಯಾಗಲಿದೆ. ಹೀಗಾಗಿ ಶೀಘ್ರ ವಿಚಾರಣೆ ಕೈಗೆತ್ತಿಕೊಳ್ಳಬೇಕುʼʼ ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದರು. ಅದರಂತೆ ಇದೀಗ ನ್ಯಾಯಮೂರ್ತಿ ವೈಭವಿ ಡಿ. ನಾನಾವತಿ ಅವರು, ಗೂಗಲ್ ಇಂಡಿಯಾ ಪ್ರವೇಟ್ ಲಿಮಿಟೆಡ್ ಕಂಪೆನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೂ ನೋಟಿಸ್ ಕಳುಹಿಸಿದ್ದಾರೆ. ಮಾರ್ಚ್ 26ರ ಒಳಗೆ ಖಾತೆಯನ್ನು ಸಕ್ರಿಯಗೊಳಿಸಬೇಕು ಎಂದು ಆದೇಶಿಸಿದ್ದಾರೆ.
“ಈ ಫೋಟೊವನ್ನು ‘ಮಕ್ಕಳ ಮೇಲಿನ ದೌರ್ಜನ್ಯ’ ಎಂದು ಗೂಗಲ್ ಹೇಳುತ್ತದೆ. ಇದೇ ಕಾರಣಕ್ಕೆ ಇಮೇಲ್ ಖಾತೆ ನಿರ್ಬಂಧಿಸಿದೆ. ಇದು ವ್ಯವಹಾರದ ಮೇಲೆ ಪರಿಣಾಮ ಬೀರಿದೆ. ಸಾಕಷ್ಟು ನಷ್ಟ ಉಂಟಾಗಿದೆʼʼ ಎಂದು ಶುಕ್ಲಾ ಪರ ವಕೀಲರು ತಿಳಿಸಿದ್ದಾರೆ. ಈ ಪ್ರಸಂಗದಿಂದ ಇನ್ನು ಮುಂದೆ ಬಹುತೇಕರು ಗೂಗಲ್ ಡ್ರೈವ್‌ಗೆ ಫೋಟೊ ಸೇರಿಸುವ ಮುನ್ನ ಸಾಕಷ್ಟು ಬಾರಿ ಯೋಚಿಸಲಿದ್ದಾರೆ ಎನ್ನುವುದಂತು ಸತ್ಯ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.