ಮುಂಬೈ: 15 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವಿಡಿಯೊಗಳನ್ನೇ ನೋಡಿಕೊಂಡು ಮನೆಯಲ್ಲೇ ಹೆರಿಗೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಹೆರಿಗೆಯಾದ ತಕ್ಷಣವೇ ಆ ಬಾಲಕಿ ನವಜಾತ ಶಿಶುವನ್ನು ಕೊಲೆ ಮಾಡಿದ್ದು, ಮಗುವಿನ ದೇಹವನ್ನು ಮನೆಯಲ್ಲಿನ ಒಂದು ಬಾಕ್ಸ್‌ನಲ್ಲಿ ಇಟ್ಟಿದ್ದಾಗಿ (Viral News) ವರದಿಯಾಗಿದೆ.
ಇದನ್ನೂ ಓದಿ: Viral Video: ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮೂಡ್ನಲ್ಲಿ ಔಟ್ ನೀಡಿದ ಅಂಪೈರ್; ವಿಡಿಯೊ ವೈರಲ್
ಬಾಲಕಿಯು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ಅದರಲ್ಲೇ ವ್ಯಕ್ತಿಯೊಬ್ಬನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು. ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ್ದು, ಗರ್ಭಿಣಿಯಾಗಿದ್ದಳು. ಈ ವಿಚಾರವನ್ನು ಬಾಲಕಿ ಕುಟುಂಬದವರಿಗೆ ತಿಳಿಯದಂತೆ ನೋಡಿಕೊಂಡಿದ್ದಳು. ತನಗೆ ಹುಷಾರಿಲ್ಲ ಎಂದು ಹೇಳಿಕೊಂಡು ಮನೆಯಲ್ಲೇ ಇರುತ್ತಿದ್ದಳು.
ಬಾಲಕಿಯು ಮನೆಯಲ್ಲೇ ಹೆರಿಗೆ ಮಾಡಿಕೊಳ್ಳಬೇಕೆಂದು ಮೊದಲೇ ನಿಶ್ಚಯಿಸಿದ್ದು, ಅದಕ್ಕೆಂದು ಯೂಟ್ಯೂಬ್ ವಿಡಿಯೊಗಳನ್ನು ನೋಡುತ್ತಿದ್ದಳು. ಮಾರ್ಚ್ 2ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆ ಹೆರಿಗೆ ಮಾಡಿಕೊಂಡಿದ್ದಾಳೆ. ತಕ್ಷಣವೇ ಮಗುವನ್ನು ಕೊಲೆ ಮಾಡಿ, ಮನೆಯಲ್ಲಿದ್ದ ದೊಡ್ಡ ಬಾಕ್ಸ್ ಒಂದರೊಳಗೆ ಹಾಕಿಟ್ಟಿದ್ದಾಳೆ. ಮನೆಗೆ ಬಂದ ತಾಯಿ ಸುಸ್ತಾಗಿದ್ದ ಮಗಳ ಆರೋಗ್ಯದ ಬಗ್ಗೆ ಪ್ರಶ್ನಿಸಿದಾಗ ಬಾಲಕಿ ನಡೆದ ಘಟನೆಯ ಬಗ್ಗೆ ವಿವರಣೆ ನೀಡಿದ್ದಾಳೆ.
ಇದನ್ನೂ ಓದಿ: Viral News : ಭಾವನೆ ಹಂಚಿಕೊಳ್ಳುವುದಕ್ಕೆ, ಮುಚ್ಚಿಡುವುದಕ್ಕೆ ಬಳಕೆಯಾಗುತ್ತಿದೆ ಇಮೋಜಿ; ಸಮೀಕ್ಷಾ ವರದಿ
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಕ್ಸ್‌ನಲ್ಲಿದ್ದ ಶಿಶುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಲೈಂಗಿಕ ದೌರ್ಜನ್ಯ ನೀಡಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿಶುವಿನ ಹತ್ಯೆ ಬಗ್ಗೆಯೂ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಲಾಗಿದೆ.