Site icon Vistara News

Viral News: ಕೊಳದಲ್ಲಿ ತೇಲುತ್ತಿದ್ದ ದೇಹ ಮೇಲೆತ್ತಲು ಹೋದ ಪೊಲೀಸರು! ಹೆಣ ನಡೆಯತೊಡಗಿತು!

Viral News

ತೆಲಂಗಾಣ: ಕೊಳದಲ್ಲಿ, ನದಿಯಲ್ಲಿ ಹೆಣಗಳು ತೇಲುತ್ತಿರುವ ಘಟನೆಯನ್ನು ನಾವು ಹಲವು ಬಾರಿ ನೋಡಿರುತ್ತೇವೆ ಹಾಗೂ ಈ ತರಹದ ಘಟನೆಯ ಬಗ್ಗೆ ಕೇಳಿರುತ್ತೇವೆ. ವ್ಯಕ್ತಿಯನ್ನು ಯಾರಾದರೂ ಕೊಂದು ನದಿಗೆ ಎಸೆದಿರುತ್ತಾರೆ ಅಥವಾ ವ್ಯಕ್ತಿಯೇ ಜೀವನದ ಕಷ್ಟಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಆಗ ಅವರ ಹೆಣ ನೀರಿನ ಮೇಲೆ ಬಂದು ತೇಲುತ್ತಿರುತ್ತದೆ. ಇಂತಹದ್ದೇ ಒಂದು ಘಟನೆ ಹನಮಕೊಂಡನಗರದಲ್ಲಿ ನಡೆದಿದೆ. ಹೆಣ ತೇಲುತ್ತಿದೆ ಎಂದು ಎತ್ತಲು ಹೋದ ಪೊಲೀಸ್‌ ತಂಡ ಬೇಸ್ತು ಬಿದ್ದಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ವ್ಯಕ್ತಿಯ ದೇಹವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ತಂಡ ವ್ಯಕ್ತಿಯ ದೇಹವನ್ನು ಎತ್ತಲು ಹೋದಾಗ ಆ ವ್ಯಕ್ತಿ ಎದ್ದು ನಿಂತಿದ್ದಾನೆ. ಸತ್ತಿದ್ದಾನೆ ಎಂದುಕೊಂಡ ವ್ಯಕ್ತಿ ಎದ್ದು ನಿಂತು ಮಾತನಾಡಿದರೆ ಯಾರಿಗೆ ತಾನೆ ಭಯವಾಗುವುದಿಲ್ಲ? ಅದೇ ರೀತಿ ಪೊಲೀಸರು ಈ ಘಟನೆಯಿಂದ ದಿಗ್ಭ್ರಮೆಗೊಂಡಿದ್ದಾರೆ.

ಹೆಣ ಎತ್ತಲು ಹೋದಾಗ ಎದ್ದು ನಿಂತ ವ್ಯಕ್ತಿ!

ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ವ್ಯಕ್ತಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ನಿವಾಸಿಯಾಗಿದ್ದು, ಕಾಜಿಪೇಟೆಯ ಡೀಸೆಲ್ ಕಾಲೋನಿಯಲ್ಲಿ ವಾಸವಾಗಿದ್ದ. ಅವನು ಗ್ರಾನೈಟ್ ಗಣಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಸಿಲಿನ ತಾಪದಲ್ಲಿ ಸುಮಾರು ಹನ್ನೆರಡು ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿ ಸುಸ್ತಾದ ಕಾರಣ ಸ್ವಲ್ಪ ವಿಶ್ರಾಂತಿ ಪಡೆಯಲು ಕೊಳಕ್ಕೆ ಇಳಿದಿರುವುದಾಗಿ ತಿಳಿಸಿದ್ದಾನೆ. ಹಾಗೇ ವಿಶ್ರಾಂತಿ ಪಡೆಯುತ್ತಿದ್ದ ಆತ ಅಲ್ಲೇ ನಿದ್ರೆಗೆ ಜಾರಿದ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆತನ ದೇಹ ಕೊಳದಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಬಂದು ವ್ಯಕ್ತಿಯ ದೇಹವನ್ನು ಎತ್ತಲು ಹೋದಾಗ ಆತ ಎದ್ದು ನಿಂತಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ ಜನರು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಿಸಿಲಿನ ತಾಪವನ್ನು ಸಹಿಸಲಾಗದೆ ಹೆಚ್ಚಿನ ಜನರು ನದಿ, ಕೊಳದಲ್ಲೇ ಮುಳುಗಿಕೊಂಡು ಹೆಚ್ಚು ಸಮಯ ಕಳೆಯುತ್ತಿದ್ದರು. ಇದಕ್ಕೆ ಈಗ ಈ ಘಟನೆಯು ಒಂದು ಸಾಕ್ಷಿಯಾಗಿದೆ.

ಇದನ್ನೂ ಓದಿ: salaries of prime minister: ರಾಷ್ಟ್ರಪತಿ, ಪ್ರಧಾನಿಗೆ ಸಂಬಳ, ಸೌಲಭ್ಯ ಎಷ್ಟಿರುತ್ತವೆ ಗೊತ್ತೆ?

ಅಲ್ಲದೇ ಕಳೆದವಾರ ರಾಜ್ಯದ ನಲ್ಗೊಂಡ ನಗರದ ನೀರಿನ ತೊಟ್ಟಿಯಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿತ್ತು. ಈ ವಿಚಾರ ತಿಳಿಯದೇ ಜನರು ಅದೇ ನೀರನ್ನು ಸೇವಿಸುತ್ತಿದ್ದರು. ಈ ಬಗ್ಗೆ ಪೊಲೀಸ್ ತನಿಖೆ ನಡೆದಿದ್ದು, ಸತ್ತ ವ್ಯಕ್ತಿ ಅವುಲಾ ವಂಶಿ ಎಂದು ತಿಳಿದುಬಂದಿದ್ದು, ಮೇ 24ರಿಂದ ಕಾಣೆಯಾಗಿದ್ದ. ನಂತರ ಕುಟುಂಬದವರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

Exit mobile version