Site icon Vistara News

Viral News: ಕೆಣಕಲು ಬಂದವನಿಗೆ ಸರಿಯಾಗಿ ಪಾಠ ಕಲಿಸಿದ ಕಾಡು ಕೋಣ; ಹೇಗೆಂದು ತಿಳಿಯಲು ಈ ವಿಡಿಯೊ ನೋಡಿ

Viral News

Viral News

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆಹಾರ ಅರಸಿಕೊಂಡು ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ. ಹಳ್ಳಿ ಮಾತ್ರವಲ್ಲ ನಗರ ಪ್ರದೇಶಗಳಿಗೂ ಲಗ್ಗೆ ಇಡುತ್ತಿವೆ. ಚಿರತೆ, ಆನೆ ಇತ್ಯಾದಿ ಜನ ನಿಬಿಡ ಪ್ರದೇಶಗಳಿಗೆ ದಾಳಿ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಈ ಮಧ್ಯೆ ಜನವಸತಿ ಪ್ರದೇಶವೊಂದಕ್ಕೆ ಬಂದ ಕಾಡು ಕೋಣವನ್ನು ಕೆಣಕಲು ಹೋದ ವ್ಯಕ್ತಿಯೊಬ್ಬನಿಗೆ ಸರಿಯಾಗಿ ಗೂಸಾ ಬಿದ್ದಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral News).

ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದೆ. ಅನೇಕ ಎಚ್ಚರಿಕೆಗಳ ಹೊರತಾಗಿಯೂ, ಆ ವ್ಯಕ್ತಿ ಕಾಡು ಕೋಣವನ್ನು ಕೆರಳಿಸಲ ಮುಂದಾಗಿದ್ದ. ಮುಖಾಮುಖಿಯಾಗಲು ಅದರ ಮುಂಭಾಗಕ್ಕೆ ತೆರಳಿದ್ದ. ಇದರಿಂದ ಕೋಪಗೊಂಡ ಕಾಡು ಕೋಣ ಕೊಂಬಿನಿಂದ ಎತ್ತಿ ಆತನನ್ನು ಗಾಳಿಯಲ್ಲಿ ತಿರುಗಿಸಿ ದೂರಕ್ಕೆ ಎಸೆಯಿತು. ಕೊನೆಗೆ ಬುದ್ಧಿ ಕಲಿತ ಆತ ಎದ್ದೇನೊ ಬಿದ್ದಿನೋ ಎಂದು ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಇದಿಷ್ಟು ವಿಡಿಯೊದಲ್ಲಿ ಕಂಡು ಬಂದಿದೆ.

“ಎಚ್ಚರಿಕೆಯ ನಂತರವೂ ಈ ವ್ಯಕ್ತಿಯು ಕಾಡು ಕೋಣವನ್ನು ಕೆಣಕಲು ಹೋಗಿ ಅಪಾಯವನ್ನು ಮೈಮೇಲೆ ಎಳೆದುಕೊಂಡನು. ನಮ್ಮ ತಂಡ ಅಲ್ಲಿಗೆ ತಲುಪುವ ಮೊದಲೇ ಈ ಘಟನೆ ಸಂಭವಿಸಿತ್ತು. ಕೊನೆಗೆ ನಮ್ಮ ತಂಡ ತೆರಳಿ ಬಹಳ ಕಷ್ಟಪಟ್ಟು ಕಾಡುಕೋಣವನ್ನು ರಕ್ಷಿಸಿತು. ದಯವಿಟ್ಟು ಅನಗತ್ಯವಾಗಿ ವನ್ಯಜೀವಿಗಳನ್ನು ಪ್ರಚೋದಿಸಬೇಡಿ. ಇದು ಅಪಾಯಕಾರಿʼʼ ಎಂದು ಪರ್ವೀನ್ ಕಸ್ವಾನ್ ಬರೆದುಕೊಂಡಿದ್ದಾರೆ.

ಐಎಫ್ಎಸ್ ಅಧಿಕಾರಿ ನೀಡುವ ಸಲಹೆ ಏನು?

ʼʼಪ್ರತಿ ಕಾಡು ಪ್ರಾಣಿಯಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಯಾರಾದರೂ ಇದೇ ರೀತಿ ಎಚ್ಚರಿಕೆ ಮೀರಿ ಬಳಿ ತೆರಳಿದರೆ ಅವು ಬೆದರುತ್ತವೆ, ವಿಚಿತ್ರ ನಡವಳಿಕೆ ಪ್ರದರ್ಶಿಸುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಆಕ್ರಮಣಕ್ಕೆ ಮುಂದಾಗುತ್ತವೆ. ಇದು ಎಚ್ಚರಿಕೆ ಮೀರಿ ಅವುಗಳ ಬಳಿಗೆ ತೆರಳುವ ವ್ಯಕ್ತಿಯ ಜತೆಗೆ ಇತರರಿಗೂ ಹಾನಿ ಉಂಟು ಮಾಡುತ್ತದೆ. ಹೀಗಾಗಿ ಆದಷ್ಟು ಕಾಡು ಪ್ರಾಣಿಗಳಿಂದ ದೂರವಿರಿ. ನಾಡಿನೊಳಗೆ ಪ್ರಾಣಿಗಳು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿʼʼ ಎಂದು ಪರ್ವೀನ್ ಕಸ್ವಾನ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Viral Video: ಗೂಳಿ ಜತೆ ಜಗಳಕ್ಕೆ ನಿಂತ ಕುಡುಕನ ಪಾಡು ಏನಾಯ್ತು?; ರಿಯಲ್‌ ‘ಬಾಹುಬಲಿ’ ದೃಶ್ಯ ಇಲ್ಲಿದೆ

ನೆಟ್ಟಿಗರು ಏನಂದ್ರು?

ʼʼವ್ಯಕ್ತಿ ಅನಗತ್ಯವಾಗಿ ದೈತ್ಯ ಪ್ರಾಣಿಯನ್ನು ಕೆಣಕಲು ಹೋಗಿ ಸರಿಯಾದ ಪಾಠವನ್ನೇ ಕಲಿತಿದ್ದಾನೆʼʼ ಎಂದು ಒಬ್ಬರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕಾಡು ಪ್ರಾಣಿಗಳನ್ನು ಕೆಣಕಲು ಹೋಗಬೇಡಿ. ಹೋದರೆ ಅದರ ಫಲಿತಾಂಶ ಇದೇ ರೀತಿಯಲ್ಲಿರುತ್ತದೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಅಲ್ಲೇ ಡ್ರಾ, ಅಲ್ಲೇ ಬಹುಮಾನʼʼ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿ, ʼʼಅನಗತ್ಯವಾಗಿ ಕಾಡು ಪ್ರಾಣಿಯನ್ನು ಕೆಣಕಲು ಹೋದವನು ತಕ್ಷಣವೇ ಅದರ ಪರಿಣಾಮ ಅನುಭವಿಸಿದ್ದಾನೆʼʼ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಡಿಯೊ ವೀಕ್ಷಿಸಿದ ಬಹುತೇಕರು ಆ ವ್ಯಕ್ತಿಯ ವರ್ತನೆಯನ್ನು ಖಂಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version