ನವದೆಹಲಿ: ಕೈಯಲ್ಲಿ ಪತ್ರ ಬರೆಯುವವರೇ ಕಡಿಮೆಯಾಗಿರುವ ಈ ಕಾಲದಲ್ಲಿ ಕಂಪೆನಿಯೊಂದರ ಸಿಎಫ್ಒ (Chief Financial Officer) ಕೈ ಬರಹದಲ್ಲಿ ಬರೆದಿರುವ ರಾಜೀನಾಮೆ ಪತ್ರ ವೈರಲ್ ಆಗಿದೆ (Viral News). ಷೇರು ಮಾರುಕಟ್ಟೆಯ ಮುಖ್ಯ ಕಂಪೆನಿಯೊಂದರ ಸಿಇಒ ಕೈಯಲ್ಲೇ ಬರೆದ ಎರಡು ಪ್ಯಾರಾದ ರಾಜೀನಾಮೆ ಪತ್ರವು ಇದೀಗ ಅನೇಕರ ಗಮನ ಸೆಳೆಯುತ್ತಿದೆ. ಪೇಂಟ್ ತಯಾರಕ ಕಂಪೆನಿ ಮಿಟ್ಶಿ ಇಂಡಿಯಾ(Mitshi India)ದಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ರಿಂಕು ಪಟೇಲ್ ನವೆಂಬರ್ 15ರಂದು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
ಈ ಪತ್ರವನ್ನು ರೂಲ್ಡ್ ಶೀಟ್ ಮೇಲೆ ಬರೆಯಲಾಗಿದೆ. ಇದು ಮಗುವಿನ ನೋಟ್‌ಬುಕ್‌ನ ಪುಟದಂತೆ ಕಾಣಿಸುತ್ತಿದೆ. ಇ-ಮೇಲ್ ಯುಗದಲ್ಲಿಯೂ ಕೈ ಬರಹದಲ್ಲಿ ಬರೆದ ಪತ್ರ ಅಚ್ಚರಿ ಹುಟ್ಟು ಹಾಕಿದೆ. “ವೈಯಕ್ತಿಕ ಕಾರಣಗಳಿಂದಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನಾನು ಸಿಎಫ್ಒ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಾನು ನಿಮಗೆ ಈ ಮೂಲಕ ತಿಳಿಸುತ್ತೇನೆ. ನಿಮ್ಮ ಸಂಸ್ಥೆಗಾಗಿ ಕೆಲಸ ಮಾಡಿರುವುದು ತುಂಬಾ ಸಂತಸ ತಂದಿದೆ ಮತ್ತು ಇಲ್ಲಿ ಅತ್ಯುತ್ತಮ ಅನುಭವವನ್ನು ಹೊಂದಿದ್ದೇನೆ” ಎಂದು ಪತ್ರದಲ್ಲಿ ಬರೆಯಲಾಗಿದೆ.
#Mitshi #India CFO #RinkuPatel #resigns on #notebook paper in #handwritten letter
— Sushil (@SushilDInvestor) December 22, 2023
Mitshi India told exchanges it has accepted the resignation of Rinku Patel with immediate effect and is in a process of finding a replacement.#mitshiindia #CFO#bse #nse #sebi #StockMarketNews pic.twitter.com/56oyaLOiih
ಈ ಕೈಬರಹದ ಪತ್ರವನ್ನು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್(ಬಿಎಸ್ಇ) ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. “ರಿಂಕು ನಿಕೇತ್ ಪಟೇಲ್ ವೈಯಕ್ತಿಕ ಕಾರಣಗಳಿಂದಾಗಿ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ” ಎಂದು ಮಿಟ್ಶಿ ಇಂಡಿಯಾ ಲಿಮಿಟೆಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಂಪೆನಿಗೆ ಹೊಸ ಸಿಎಫ್ಒ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಸಿಎಫ್ಒ ಸ್ಥಾನವನ್ನು ಭರ್ತಿ ಮಾಡಿದ ನಂತರ ಸ್ಟಾಕ್ ಎಕ್ಸ್‌ಚೇಂಜ್‌ಗೆ ತಿಳಿಸಲಾಗುವುದು ಎಂದು ಕಂಪೆನಿ ಹೇಳಿದೆ.
ನೆಟ್ಟಿಗರು ಏನಂದ್ರು?
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್ ಅನ್ನು ಇದುವರೆಗೆ 1 ಲಕ್ಷಕ್ಕಿಂತ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. “ಈ ಸಿಎಫ್ಒ ತನ್ನ ಮಗುವಿನ ರಫ್ ನೋಟ್ ಪುಸ್ತಕದಿಂದ ಒಂದು ಪುಟವನ್ನು ಹರಿದು ಅದರಲ್ಲಿ ರಾಜೀನಾಮೆ ಪತ್ರವನ್ನು ಬರೆದು ಬಿಎಸ್ಇಯಲ್ಲಿ ಅಪ್‌ಲೋಡ್ ಮಾಡಿದ್ದಾರೆʼʼ ಎನ್ನುವ ಕ್ಯಾಪ್ಶನ್‌ನೊಂದಿಗೆ ನೆಟ್ಟಿರೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ʼʼಉತ್ತಮ ಕೈಬರಹ. ಬಹುಶಃ ಸಿಎಫ್ಒ ಅವರ ಮಗು ಈ ಟಿಪ್ಪಣಿಯನ್ನು ಬರೆದಿರಬೇಕುʼʼ ಒಬ್ಬರು ಹೇಳಿದ್ದಾರೆ. ʼʼಇದೊಂದು ಅಪರೂಪದ ರಾಜೀನಾಮೆ ಪತ್ರʼʼ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪೋಸ್ಟ್ ವೈರಲ್ ಆಗಿ ಗಮನ ಸೆಳೆಯುತ್ತಿದೆ.
ಮೂಲತಃ ಡೇರಾ ಪೇಂಟ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ ಎಂದು ಕರೆಯಲ್ಪಡುವ ಮಿಟ್ಶಿ ಇಂಡಿಯಾ ಲಿಮಿಟೆಡ್ ಅನ್ನು 1976ರಲ್ಲಿ ಸ್ಥಾಪಿಸಲಾಯಿತು. 1992ರಲ್ಲಿ ಐಪಿಒ ಕಂಪೆನಿ ಪ್ರಕಟಿಸಿತು. ಕಾರ್ಪೊರೇಟ್ ವೆಬ್‌ಸೈಟ್ ಪ್ರಕಾರ ಈ ಕಂಪೆನಿಯನ್ನು 28 ವರ್ಷಗಳಿಂದ ಬಿಎಸ್ಇಯಲ್ಲಿ ಪಟ್ಟಿ ಮಾಡಲಾಗಿದೆ. ಮಿಟ್ಶಿ ಇಂಡಿಯಾ ಪೇಂಟ್ ತಯಾರಿಕೆಯೊಂದಿಗೆ ಲೋಹ, ಕಾಗದ, ಪ್ಲಾಸ್ಟಿಕ್, ಹಾರ್ಡ್‌ವೇರ್ ಉತ್ಪನ್ನಗಳನ್ನೂ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದೆ.
ಇದನ್ನೂ ಓದಿ: Viral Video: ಡ್ಯಾನ್ಸ್ ಆಯ್ತು, ರೊಮ್ಯಾನ್ಸ್ ಆಯ್ತು; ಇದೀಗ ಮೆಟ್ರೋದಲ್ಲಿ ಫೈಟ್ ಸೀನ್!