Site icon Vistara News

Viral News: ಕೊಡಲಿಯೇಟು ತಿಂದ ಮರದೊಳಗಿನಿಂದ ಜುಳುಜುಳು ಹರಿಯಿತು ನೀರು; ಅಚ್ಚರಿಯ ವಿಡಿಯೊ ನೀವೂ ನೋಡಿ

viral news

viral news

ಹೈದರಾಬಾದ್‌: ದಿನ ಕಳೆದಂತೆ ದೇಶಾದ್ಯಂತ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಸೂರ್ಯನ ಶಾಖಕ್ಕೆ ಇಡೀ ಜೀವ ಸಂಕುಲವೇ ತತ್ತರಿಸಿ ಹೋಗಿದೆ. ಅಲ್ಲಿ ಇಲ್ಲಿ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದರೂ ಕಾವೇರಿದ ವಾತಾವರಣವನ್ನು ತಂಪಾಗಿಸಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ತಾಪಮಾನ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚೇ ದಾಖಲಾಗುತ್ತಿದೆ. ಜತೆಗೆ ಜಲಾಶಗಳು ಬರಿದಾಗುತ್ತಿದ್ದು ಎಲ್ಲೆಡೆ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಅಂತರ್ಜಲವೂ ಬರಿದಾಗುತ್ತಿದ್ದು ಹನಿ ನೀರಿಗಾಗಿ ಪರದಾಡುವಂತಾಗಿದೆ. ಈ ಮಧ್ಯೆ ಆಂಧ್ರ ಪ್ರದೇಶದ ಕಾಡೊಂದರಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು, ನಳ್ಳಿಯಲ್ಲಿ ನೀರು ಬರುವಂತೆ ಮರವೊಂದರಿಂದ ನೀರು ಜಿನುಗಿದೆ. ಸದ್ಯ ಈ ವಿಡಿಯೊ ವೈರಲ್‌ (Viral News) ಆಗಿದ್ದು, ನೆಟ್ಟಿಗರು ಅಚ್ಚರಿಯಿಂದ ಇದನ್ನು ವೀಕ್ಷಿಸಿದ್ದಾರೆ.

ಆಂಧ್ರಪ್ರದೇಶದ ಅರಣ್ಯ ಇಲಾಖೆ, ಕೊಂಡ ರೆಡ್ಡಿ ಬುಡಕಟ್ಟು ಜನಾಂಗದ ಸಹಾಯದಿಂದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪಾಪಿಕೊಂಡ ರಾಷ್ಟ್ರೀಯ ಉದ್ಯಾನವನದಲ್ಲಿನ ಮರಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕಂಡುಹಿಡಿದಿದೆ.

ಯಾವುದು ಈ ಅದ್ಭುತ ಮರ?

ಮಾರ್ಚ್ 30ರಂದು ಅರಣ್ಯ ಅಧಿಕಾರಿಯೊಬ್ಬರು ಇಂಡಿಯನ್‌ ಲಾರೆಲ್ (Indian Laurel) ಮರಕ್ಕೆ ಕತ್ತಿಯಿಂದ ಗಾಯ ಮಾಡಿದಾಗ ಅದರಿಂದ ನೀರು ಹೊರ ಬರುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಹಾಗಂತ ಇದು ನೀರಿನ ಪಸೆಯಲ್ಲ. ನಳ್ಳಿಯಲ್ಲಿ ನೀರು ಬರುವಂತೆ ಅಪಾರ ಪ್ರಮಾಣದಲ್ಲಿ ಮರದೊಳಗಿನಿಂದ ಚಿಮ್ಮಿದೆ. ಸದ್ಯ ಈ ವಿಡಿಯೊ ಅಚ್ಚರಿ ಜತೆಗೆ ಚರ್ಚೆಗೆ ಗ್ರಾಸವಾಗಿದೆ.

ಅಧಿಕಾರಿಗಳು ಹೇಳಿದ್ದೇನು?

ರಾಂಪಚೋಡಾವರಂ ವಿಭಾಗೀಯ ಅರಣ್ಯ ಅಧಿಕಾರಿ ಜಿ.ಜಿ.ನರಂತರನ್ ಅವರು ಈ ಬಗ್ಗೆ ಮಾತನಾಡಿ, ʼʼಕೊಂಡಾ ರೆಡ್ಡಿ ಬುಡಕಟ್ಟು ಜನಾಂಗದವರು ತಮ್ಮ ಈ ಅಮೂಲ್ಯ ಜ್ಞಾನವನ್ನು ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ. ನಮಗೂ ಈ ವಿಚಾರ ತಿಳಿದು ಬಹಳ ಅಚ್ಚರಿ ಎನಿಸಿತುʼʼ ಎಂದು ತಿಳಿಸಿದ್ದಾರೆ. “ಬೇಸಿಗೆಯ ದಿನಗಳಲ್ಲಿ ಇಂಡಿಯನ್‌ ಲಾರೆಲ್ ಎಂದು ಕರೆಯಲ್ಪಡುವ ಈ ಮರವು ಬಲವಾದ ವಾಸನೆ ಮತ್ತು ಹುಳಿ ರುಚಿಯನ್ನು ಹೊಂದಿರುವ ನೀರನ್ನು ಸಂಗ್ರಹಿಸುತ್ತದೆ. ಇದು ಭಾರತೀಯ ಕಾಡುಗಳ ಕಂಡುಬರುವ ಅದ್ಭುತ ಮರ” ಎಂದು ಅವರು ಹೇಳಿದ್ದಾರೆ.

ʼʼಕೊಂಡಾ ರೆಡ್ಡಿ ಬುಡಕಟ್ಟು ಜನಾಂಗವನ್ನು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು (PVTG) ಎಂದು ಗುರುತಿಸಲಾಗುತ್ತದೆ. ಇವರು ಸಾಮಾನ್ಯವಾಗಿ ಭಾರತದ ಪೂರ್ವ ಕರಾವಳಿಗೆ ಸಮಾನಾಂತರವಾದ ಪರ್ವತ ಶ್ರೇಣಿಯಲ್ಲಿ ವಾಸಿಸುತ್ತಾರೆ. ಅವರು ತಮ್ಮ ಪರಿಸರವನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದಾರೆ. ಜತೆಗೆ ತಲೆಮಾರುಗಳಿಂದ ಕಾಡುಗಳೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆʼʼ ಎಂದು ನರಂತರನ್ ತಿಳಿಸಿದ್ದಾರೆ.

ಇದನ್ನೂ ಓದಿ: Muhammad Shiraz: ಪ್ರಧಾನಿ ಕುರ್ಚಿ ಮೇಲೆ ಕುಳಿತ 1ನೇ ತರಗತಿ ಪೋರ; ಯಾರಿವನು ವ್ಲಾಗರ್?

ಇಂಡಿಯನ್‌ ಲಾರೆಲ್ ಮರದ ವೈಶಿಷ್ಟ್ಯ

ಇಂಡಿಯನ್ ಸಿಲ್ವರ್ ಓಕ್, ಚೀನೀ ಆಲದ ಮರ ಅಥವಾ ಮಲಯನ್ ಆಲದ ಮರ ಎಂದೂ ಕರೆಯಲ್ಪಡುವ ಇಂಡಿಯನ್‌ ಲಾರೆಲ್ ಮರವು ಅಂಜೂರದ ಮೊರೇಸಿ ಕುಟುಂಬಕ್ಕೆ ಸೇರಿದೆ ಮತ್ತು ಹೆಚ್ಚಾಗಿ ಆಗ್ನೇಯ ಏಷ್ಯಾ ಮತ್ತು ಚೀನಾದಲ್ಲಿ ಕಂಡು ಬರುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ, ಬೆಳೆಗಳಿಗೆ ನೆರಳು ನೀಡುತ್ತದೆ. ಜತೆಗೆ ಗೋದಾವರಿ ಪ್ರದೇಶದ ಪಾಪಿಕೊಂಡ ಬೆಟ್ಟ ಶ್ರೇಣಿಯಲ್ಲಿ ಕಂಡುಬರುವ ಕೊಂಡ ರೆಡ್ಡಿ ಬುಡಕಟ್ಟು ಜನಾಂಗ ಇದನ್ನು ಅತ್ಯಮೂಲ್ಯ ಸಂಪತ್ತು ಎಂದೇ ಪರಿಗಣಿಸುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version