ಕೋಲ್ಕತ್ತಾ: ದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗಿಳಿಯಲೂ ಮುನ್ನ ಎರಡೆರಡು ಬಾರಿ ಯೋಚಿಸುವಂತಾಗಿದೆ. ಭಾರತದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ನಿಂದ 46 ಡಿಗ್ರಿ ಸೆಲ್ಸಿಯಸ್‌ವರೆಗೆ ಇದೆ. ಈ ತೀವ್ರ ತಾಪಮಾನದ ಝಳ ಇದೀಗ ಟಿವಿ ನಿರೂಪಕಿಯೊಬ್ಬರಿಗೂ ತಟ್ಟಿದೆ. ಹವಾಮಾನ ವರದಿ ನೀಡುತ್ತಿರುವಾಗಲೇ ಡಿಡಿ ದೂರದರ್ಶನದ ವಾರ್ತಾ ವಾಚಕಿಯೊಬ್ಬರು ಲೈವ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಸೇರಿದ ಬೆಂಗಾಲಿ ದೂರದರ್ಶನದ ಲೈವ್‌ನಲ್ಲಿ ಈ ಘಟನೆ ನಡೆದಿದೆ (Viral News).
ಕೋಲ್ಕತಾ ದೂರದರ್ಶನದ ನಿರೂಪಕಿ ಲೋಪಮುದ್ರ ಸಿನ್ಹಾ ಕುಸಿದು ಬಿದ್ದವರು. ದೂರದರ್ಶನ ಚಾನೆಲ್‌ನಲ್ಲಿ ಪ್ರತಿದಿನದಂತೆ ಅಂದೂ (ಗುರುವಾರ) ರಾಜ್ಯದ ಹವಾಮಾನದ ಬಗ್ಗೆ ಅವರು ವರದಿ ಮಾಡುತ್ತಿದ್ದಾಗ ಲೈವ್‌ನಲ್ಲೇ ಪ್ರಜ್ಞಾಶೂನ್ಯರಾಗಿದ್ದಾರೆ. ತೀವ್ರ ಬಿಸಿಲಿನ ಝಳಕ್ಕೆ ಹೀಗಾಗಿದೆ ಎಂದು ಮೂಲಗಳು ತಿಳಿಸಿವೆ.
ಚೇತರಿಸಿಕೊಂಡಿದ್ದಾರೆ
ಸದ್ಯ ಲೋಪಮುದ್ರ ಸಿನ್ಹಾ ಅವರು ಚೇತರಿಸಿಕೊಂಡಿದ್ದಾರೆ. ರಕ್ತದೊತ್ತಡ ತೀವ್ರವಾಗಿ ಕುಸಿದಿದ್ದರಿಂದ ತನಗೆ ಲೈವ್‌ನಲ್ಲೇ ಪ್ರಜ್ಞೆ ತಪ್ಪಿತ್ತು ಎಂದು ಅವರು ಹೇಳಿದ್ದಾರೆ. ಆ ಘಟನೆಯನ್ನು ಅವರು ಹೀಗೆ ವಿವರಿಸುತ್ತಾರೆ: ʼʼನ್ಯೂಸ್ ಓದಲು ಆರಂಭಿಸುವುದಕ್ಕೆ ಮೊದಲೇ ನನಗೆ ಸ್ವಲ್ಪ ನಿತ್ರಾಣವಾದಂತಾಗಿತ್ತು. ಆದರೆ ಅದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆ ವೇಳೆ ನೀರು ಕುಡಿಯಲೂ ಸಮಯವಿಲ್ಲದ್ದರಿಂದ ಹಾಗೆಯೇ ಸ್ಟುಡಿಯೋಗೆ ತೆರಳಿದೆ. ಕಾಕತಾಳೀಯವಾಗಿ ಹವಾಮಾನ ವರದಿಯಲ್ಲಿ ಬಿಸಿಗಾಳಿಯ ಬಗ್ಗೆ ಸುದ್ದಿ ಓದುತ್ತಿರುವ ವೇಳೆ ಲೈವ್‌ನಲ್ಲೇ ಇದಕ್ಕಿದ್ದಂತೆ ಕುಸಿದು ಬಿದ್ದೆʼʼ ಎಂದು ಲೋಪಮುದ್ರ ಸಿನ್ಹಾ ಹೇಳಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೂಲಿಂಗ್ ಸಿಸ್ಟಮ್‌ನಲ್ಲಿನ ದೋಷದಿಂದಾಗಿ ಸ್ಟುಡಿಯೋ ಒಳಗೆ ತೀವ್ರ ಶಾಖವಿತ್ತು. ಅಸ್ವಸ್ಥತೆಗೆ ಇದೂ ಕಾರಣವಿರಬಹುದು ಎಂದು ಅವರು ತಿಳಿಸಿದ್ದಾರೆ.
“ನಾನು ಎಂದಿಗೂ ವಾರ್ತೆ ಓದುವಾಗ ನೀರಿನ ಬಾಟಲಿಯನ್ನು ಇಟ್ಟುಕೊಳ್ಳುವುದಿಲ್ಲ. ಅದು ಹದಿನೈದು ನಿಮಿಷ ಅಥವಾ ಅರ್ಧ ಗಂಟೆಯ ಪ್ರಸಾರವಾಗಿರಲಿ, ನನ್ನ 21 ವರ್ಷಗಳ ವೃತ್ತಿ ಜೀವನದಲ್ಲಿ ಪ್ರಸಾರದ ಸಮಯದಲ್ಲಿ ಎಂದಿಗೂ ನೀರು ಕುಡಿದಿರಲಿಲ್ಲ. ಆದರೆ ಮೊನ್ನೆ ವಾರ್ತಾ ಪ್ರಸಾರ ಕೊನೆಗೊಳ್ಳಲು 15 ನಿಮಿಷಗಳು ಉಳಿದಿರುವಂತೆ ತೀವ್ರ ಬಾಯಾರಿಕೆಯಾಗತೊಡಗಿತು. ಟಿವಿಯಲ್ಲಿ ನನ್ನ ಮುಖವನ್ನು ತೋರಿಸದೆ ಇದ್ದಾಗ ನಾನು ಫ್ಲೋರ್ ಮ್ಯಾನೇಜರ್ ಕಡೆಗೆ ತಿರುಗಿ ನೀರಿನ ಬಾಟಲಿಯನ್ನು ಕೇಳಿದ್ದೆ” ಎಂದು ಅವರು ವಿವರಿಸಿದ್ದಾರೆ.
ಲೋಪಮುದ್ರ ಸಿನ್ಹಾ ಕುಸಿದು ಬೀಳುತ್ತಿದ್ದಂತೆ ಅಲ್ಲಿದ್ದವರು ಅವರ ಸಹಾಯಕ್ಕೆ ಧಾವಿಸಿ ಬಂದು ಮುಖಕ್ಕೆ ನೀರು ಚಿಮುಕಿಸಿ ಎಚ್ಚರಗೊಳಿಸಿದ್ದಾರೆ. ಪ್ರಸ್ತುತ ತಾನು ಆರೋಗ್ಯವಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅವರ ಸ್ನೇಹಿತರು, ಆತ್ಮೀಯರು ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಇದನ್ನೂ ಓದಿ: Viral News: ಫೋಟೊ ನೋಡಿ ಮದುವೆಯಾಗಲು ಒಪ್ಪಿದಳು, ವರ ಎದುರು ಬಂದಾಗ ಒಲ್ಲೆ ಎಂದಳು!
ತೀವ್ರ ತಾಪಮಾನದಿಂದ ರಕ್ಷಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು. ಮನೆಯೊಳಗಿದ್ದರೂ ಸಾಕಷ್ಟು ದ್ರವಾಹಾರ ಸೇವಿಸುತ್ತಿರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಶನಿವಾರ ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಏಳರಿಂದ ಎಂಟು ಡಿಗ್ರಿ ಹೆಚ್ಚಾಗಿತ್ತು. ಪಶ್ಚಿಮ ಬಂಗಾಳದ ಮಿಡ್ನಾಪುರ ಮತ್ತು ಬಂಕುರಾದಲ್ಲಿ ಕ್ರಮವಾಗಿ 44.5 ಡಿಗ್ರಿ ಸೆಲ್ಸಿಯಸ್ ಮತ್ತು 44.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.