Site icon Vistara News

Viral News: 5 ಕೆಜಿ ಆಲೂಗಡ್ಡೆ ಲಂಚ ಕೇಳಿ ಅಮಾನತುಗೊಂಡ ಸಬ್‌ ಇನ್ಸ್‌ಪೆಕ್ಟರ್ !

Viral News

ಲಖನೌ: ಲಂಚ (Bribe) ಭಾರತಕ್ಕೆ ಅಂಟಿದ ಬಹುದೊಡ್ಡ ಕಳಂಕ. ಪ್ರತಿಯೊಂದು ಕಡೆ ಲಂಚ ನಾನಾ ರೂಪದಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತದೆ. ಸರ್ಕಾರಿ ಕಚೇರಿಗಳಲ್ಲಿನ ಕೆಲಸ ಆಗಬೇಕು ಎಂದರೆ ಅಲ್ಲಿನ ಸಿಬ್ಬಂದಿಯ ಜೇಬು ತುಂಬಿಸಬೇಕು ಎನ್ನುವ ಅನಿವಾರ್ಯತೆ ಎದುರಾಗಿದೆ. ಲಂಚ ಕೊಡದಿದ್ದರೆ ಅನೇಕ ಬಾರಿ ಸರ್ಕಾರಿ ಕಚೇರಿ ಹತ್ತಿ ಇಳಿಯಬೇಕು ಅನ್ನುವ ಕಾರಣಕ್ಕೆ ಬಹುತೇಕರು ಹಣ ಅಥವಾ ಇನ್ಯಾವುದೋ ಬೆಲೆ ಬಾಳುವ ವಸ್ತುವಿನ ರೂಪದಲ್ಲಿ ಲಂಚ ಕೊಡಲು ಮುಂದಾಗುತ್ತಾರೆ. ಈಗ ಇಷ್ಟೆಲ್ಲ ಪೀಠಿಕೆ ಹಾಕಲೂ ಕಾರಣವಿದೆ. ಉತ್ತರ ಪ್ರದೇಶದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬ ರೈತರೊಬ್ಬರಿಂದ 5 ಕೆಜಿ ʼಆಲೂಗಡ್ಡೆʼಯನ್ನು ಲಂಚವಾಗಿ ಕೇಳಿ ಅಮಾನತುಗೊಂಡಿದ್ದು, ಈ ವಿಚಾರ ಸದ್ಯ ವೈರಲ್‌ ಆಗಿದೆ. ಅರೆ! ಆಲೂಗಡ್ಡೆಗೆ ಅಷ್ಟೊಂದು ಬೇಡಿಕೆ ಇದ್ಯಾ? ಏನಿದು ಪ್ರಕರಣ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Viral News).

ಕನೌಜ್‌ನ ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್ಪುರ್ ಚಪುನ್ನಾ ಚೌಕಿಯ ಸಬ್‌ ಇನ್ಸ್‌ಪೆಕ್ಟರ್‌ ರಾಮ್ ಕೃಪಾಲ್ ಸಿಂಗ್ ಆಲೂಗಡ್ಡೆಯನ್ನು ಲಂಚವಾಗಿ ಕೇಳಿ ಅಮಾನತುಗೊಂಡವನು. ಆತ ಲಂಚ ಕೇಳುತ್ತಿದ್ದಾನೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಆಲೂಗಡ್ಡೆಗೆ ಏಕೆ ಇಷ್ಟೊಂದು ಬೇಡಿಕೆ?

ಅಲೂಗಡ್ಡೆ ಅಷ್ಟೊಂದು ದುಬಾರಿಯೇ? ನಿತ್ಯ ನಾವು ಅಡುಗೆಯಲ್ಲಿ ಬಳಸುವ ಈ ತರಕಾರಿಗೆ ಈ ಪರಿ ಬೇಡಿಕೆ ಸೃಷ್ಟಿಯಾಗಿದ್ದು ಹೇಗೆ? ಸಹಜವಾಗಿ ಈ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಮೂಲಗಳ ಪ್ರಕಾರ ಇಲ್ಲಿ ಆಲೂಗಡ್ಡೆ ಎನ್ನುವ ಪದವನ್ನು ಸಾಂಕಾತಿಕವಾಗಿ ಬಳಸಲಾಗಿದೆ. ಪ್ರಕರಣವೊಂದನ್ನು ಇತ್ಯರ್ಥಪಡಿಸಲು ರಾಮ್ ಕೃಪಾಲ್ ಸಿಂಗ್ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದರೆ ಹಣ ಎನ್ನುವ ಪದದ ಬದಲಾಗಿ ಆಲೂಗಡ್ಡೆ ಎಂದು ಕೋಡ್‌ವರ್ಡ್‌ ಬಳಸಿದ್ದಾನೆ. ಸದ್ಯ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಅವರು ರಾಮ್ ಕೃಪಾಲ್ ಸಿಂಗ್‌ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಬಗ್ಗೆ ಇಲಾಖಾ ತನಿಖೆಗೂ ಸೂಚಿಸಲಾಗಿದೆ.

ಪ್ರಕರಣದ ವಿವರ

ವೈರಲ್ ಆಡಿಯೋದಲ್ಲಿ ರಾಮ್ ಕೃಪಾಲ್ ಸಿಂಗ್‌ ರೈತರೊಬ್ಬರ ಬಳಿ 5 ಕೆಜಿ ʼಆಲೂಗಡ್ಡೆʼಗೆ ಬೇಡಿಕೆ ಇಟ್ಟಿರುವುದು ಕೇಳಿಸುತ್ತದೆ. ಬಡ ರೈತ ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ. ಬದಲಿಗೆ 2 ಕೆಜಿ ನೀಡುವುದಾಗಿ ಉತ್ತರಿಸುತ್ತಾರೆ. ನಂತರ ಅಂತಿಮವಾಗಿ ಒಪ್ಪಂದವನ್ನು 3 ಕೆಜಿಗೆ ಮಾಡಿಕೊಳ್ಳಲಾಯಿತು.

ಎಕ್ಸ್‌ ಮೂಲಕ ಮಾಹಿತಿ

ಕನೌಜ್ ಪೊಲೀಸ್‌ ಠಾಣೆಯ ಸಿಬ್ಬಂದಿ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಎಸ್ಐ ರಾಮ್‌ ಕೃಪಾಲ್‌ ಸಿಂಗ್‌ನನ್ನು ಕನೌಜ್‌ನ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ. ಈ ಸಂಬಂಧ ಇಲಾಖಾ ಪ್ರಕ್ರಿಯೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದಿದ್ದಾರೆ. ಸದ್ಯ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ವ್ಯಾಪಕ ಚರ್ಚೆ ಆರಂಭಿಸಿದ್ದಾರೆ. 5 ಲಕ್ಷ ರೂ. ಅನ್ನು 5 ಕೆಜಿ ಆಲೂಗಡ್ಡೆಗೆ ಹೋಲಿಸಲಾಗಿದೆ ಎಂದು ಹಲವರು ತಮ್ಮ ಸಂದೇಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ದಂತ ಕಸಿ ಮಾಡಲು ಮೂಳೆಗಳಿಗಾಗಿ ಸಾವಿರಾರು ಶವಗಳನ್ನು ಕದ್ದ ಚೀನಾ ಕಂಪನಿ!

Exit mobile version