Site icon Vistara News

Viral News: ಸೆಕೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕಾಪಾಡಲು ಶಿಕ್ಷಕರ ಸೂಪರ್‌ ಐಡಿಯಾ; ಇಲ್ಲಿದೆ ವಿಡಿಯೊ

Viral Video

Viral Video

ಲಕ್ನೋ: ʼʼಉಫ್‌! ಏನು ಸೆಕೆʼʼ ಸದ್ಯ ಎಲ್ಲೆಂದರಲ್ಲಿ ಈ ಮಾತು ಕಿವಿಗೆ ಬೀಳುತ್ತಿದೆ. ದೇಶಾದ್ಯಂತ ತಾಪಮಾನ ತೀವ್ರವಾಗಿ ಏರಿಕೆ ಕಂಡಿದೆ. ಈ ಎಲ್‌ ನಿನೊ ಪರಿಣಾಮದಿಂದ ದೇಶಾದ್ಯಂತ ಜನರು ಪರಿತಪಿಸುತ್ತಿದ್ದಾರೆ. ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿ ಮುಂದೆ ಸಾಗುತ್ತಿದೆ. ಜತೆಗೆ ಉಷ್ಣ ಅಲೆ (Heatwave)ಯು ಜನ-ಜೀವನವನ್ನು ಬಾಧಿಸಿದೆ. ಮನುಷ್ಯರು ಸೇರಿದಂತೆ ಸಕಲ ಜೀವ ರಾಶಿಯನ್ನು ಈ ಬೇಸಿಗೆ ಹೈರಾಣಾಗಿಸಿದೆ. ಮನೆಯಿಂದ ಹೊರಗೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಮಧ್ಯಾಹ್ನ ಅಘೋಷಿತ ಬಂದ್‌ ಎನಿಸುವಂತೆ ರಸ್ತೆಗಳೆಲ್ಲ ಖಾಲಿ ಹೊಡೆಯುತ್ತವೆ. ಈ ಮಧ್ಯೆ ವಿದ್ಯಾರ್ಥಿಗಳನ್ನು ಉರಿ ಸೆಕೆಯಿಂದ ಪಾರು ಮಾಡಲು ಶಾಲೆಯೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಉತ್ತರ ಪ್ರದೇಶದ ಶಾಲೆಯ ಈ ವಿಡಿಯೊ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ (Viral News).

ಶಿಕ್ಷಕರ ಐಡಿಯಾ ನೋಡಿ

ಉತ್ತರ ಪ್ರದೇಶದ ಕನೌಜ್‌ನ ಶಾಲೆಯ ತರಗತಿಯೊಂದನ್ನು ಈಜುಕೊಳವನ್ನಾಗಿ ಪರಿವರ್ತಿಸಿ ತೀವ್ರ ಶಾಖದಿಂದ ಮಕ್ಕಳನ್ನು ಪಾರು ಮಾಡಲಾಗಿದೆ. ಸುಮಾರು ಎರಡು ಅಡಿ ನೀರು ತುಂಬಿದ ಕ್ಲಾಸ್‌ ರೂಮ್‌ನಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಈಜಾಡುತ್ತಿರುವ, ಆಡುತ್ತಿರುವ ದೃಶ್ಯ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ಕಾರಣ ಏನು?

ದೇಶದ ಇತರ ಭಾಗಗಳಂತೆ ಉತ್ತರ ಪ್ರದೇಶದಲ್ಲಿಯೂ ವಿಪರೀತ ಉಷ್ಣತೆ ದಾಖಲಾಗುತ್ತಿದೆ. ಹೀಗಾಗಿ ಮಕ್ಕಳು ಶಾಲೆಗಳಿಗೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ಕಡಿಮೆ ಹಾಜರಾತಿ ಕಂಡು ಬಂದಿತ್ತು. ಇದನ್ನು ಗಮನಿಸಿದ ಕನ್ನೌಜ್ ಜಿಲ್ಲೆಯ ಮಹಾಸೌನಾಪುರ್‌ನ ಪ್ರಾಥಮಿಕ ಶಾಲೆಯ ಶಿಕ್ಷಕರು ಈ ಸಮಸ್ಯೆಯ ಪರಿಹಾರಕ್ಕೆ ಕಂಡುಕೊಂಡ ಮಾರ್ಗವೇ ಈ ಈಜುಕೊಳದ ಉಪಾಯ. ಸದ್ಯ ವಿದ್ಯಾರ್ಥಿಗಳು ಖುಷಿಯಿಂದಲೇ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಪ್ರಾಂಶುಪಾಲರು ಹೇಳೋದೇನು?

ʼʼಕೆಲವು ದಿನಗಳಿಂದ ವಾತಾವರಣದ ಉಷ್ಣಾಂಶ 38ರಿಂದ 40 ಡಿಗ್ರಿ ಸೆಲ್ಶಿಯಸ್‌ಗೆ ತಲುಪುತ್ತಿದೆ. ಹೀಗಾಗಿ ನಿರಂತರವಾಗಿ ಮಕ್ಕಳು ಶಾಲೆಗೆ ಗೈರಾಗುತ್ತಿದ್ದರು. ಇದನ್ನು ತಪ್ಪಿಸಲು ಈ ಉಪಾಯ ಕೈಗೊಂಡಿದ್ದೇವೆʼʼ ಎಂದು ಶಾಲೆಯ ಪ್ರಾಂಶುಪಾಲ ವೈಭವ್‌ ರಾಜಪೂತ್‌ ತಿಳಿಸಿದ್ದಾರೆ. ಇದೀಗ ಕ್ಲಾಸ್‌ ರೂಮಿಗೆ ನೀರನ್ನು ತುಂಬಿಸಿರುವುದರಿಂದ ಮಕ್ಕಳು ಶಾಲೆಗೆ ಉತ್ಸಾಹದಿಂದ ಬರುತ್ತಿದ್ದಾರೆ. ಇದೀಗ ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಕಲಿಯುತ್ತಿದ್ದಾರೆʼʼ ಎಂದು ಅವರು ವಿವರಿಸಿದ್ದಾರೆ. ಅವರ ಈ ಐಡಿಯಾಕ್ಕೆ ಗ್ರಾಮಸ್ಥರು ಭೇಷ್‌ ಎಂದಿದ್ದಾರೆ. ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ

ಈ ಮಧ್ಯೆ ಹವಾಮಾನ ಇಲಾಖೆ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಎಚ್ಚರಿಕೆ ನೀಡಿದೆ. ಸೋಮವಾರ ದೇಶದ ಕೆಲವೆಡೆ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಮುಂದಿನ ಐದು ದಿನಗಳಲ್ಲಿ ಇದೇ ರೀತಿಯ ಬಿಸಿಯ ವಾತಾವರಣ ಮುಂದುವರಿಯಲಿದೆ ಎಂದು ಎಚ್ಚರಿಸಿದೆ. ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಮುಂತಾದೆಡೆಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ತೆಲಂಗಾಣ, ಕರ್ನಾಟಕ, ಕೇರಳ ಮತ್ತು ಸಿಕ್ಕಿಂಗೆ ಆರಂಜ್‌ ಅಲರ್ಟ್‌ ಸೂಚಿಸಲಾಗಿದೆ.

Exit mobile version