ಉತ್ತರಪ್ರದೇಶ: ಸೋಶಿಯಲ್ ಮೀಡಿಯಾ(Social Media)ದಲ್ಲಿ ಪ್ರೊಫೈಲ್ ಫೋಟೋ(Fake profile) ನೋಡಿ ಯಾಮಾರೋದು ಹೊಸ ವಿಚಾರವೇನಲ್ಲ. ಚಂದ ಫೋಟೋ ನೋಡಿ ಅದನ್ನೇ ನಿಜ ಎಂದು ಭಾವಿಸಿ ಚಾಟಿಂಗ್ ಮಾಡಿ ಬಳಿಕ ಹಣ ಕಳೆದುಕೊಂಡವರು ಅದೆಷ್ಟೋ ಜನರಿದ್ದಾರೆ. ಆಗಾಗ ಇಂತಹ ಘಟನೆ(Viral News)ಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದೇ ಮತ್ತೊಂದು ಘಟನೆ ಉತ್ತರಪ್ರದೇಶ(Uttar pradesh)ದ ಕಾನ್ಪುರದಲ್ಲಿ ನಡೆದಿದೆ. 20ವರ್ಷದ ಯುವಕನೋರ್ವ ಸೋಶಿಯಲ್ ಮೀಡಿಯಾದಲ್ಲಿ ಪರಿಚಯ ಆಗಿದ್ದ ಮಹಿಳೆಯನ್ನು ನಂಬಿ ಮೋಸ ಹೋಗಿದ್ದಾನೆ. ಪ್ರೊಫೈಲ್ ಫೋಟೋ ಕಂಡು ಪ್ರೀತಿಯಲ್ಲಿ ಬಿದ್ದಿದ್ದ ಆ ಯುವಕನಿಗೆ ನೇರವಾಗಿ ಆಕೆಯನ್ನು ನೋಡಿ ಶಾಕ್ ಆಗಿದೆ ಇದರಿಂದ ಕೋಪಗೊಂಡ ಆತನ ಆಕೆಯನ್ನು ಚೆನ್ನಾಗಿ ಥಳಿಸಿದ್ದಾನೆ.
ಘಟನೆ ವಿವರ
20 ವರ್ಷದ ದೀಪೇಂದ್ರ ಸಿಂಗ್ ಎಂಬ ಯುವಕನಿಗೆ ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬಳು ಪರಿಚಯ ಆಗಿದ್ದಳು. ಆಕೆ ಪ್ರೊಫೈಲ್ ಪಿಕ್ಚರ್‌ಗೆ ಮನಸೋತಿದ್ದ. ಹಲವು ದಿನಗಳಿಂದ ಆಕೆಯ ಜೊತೆ ಚಾಟಿಂಗ್ ಮಾಡುತ್ತಿದ್ದ ಆತ ಪ್ರೇಮ ನಿವೇದನೆಯನ್ನೂ ಮಾಡಿದ್ದ. ಮುಂದೆ ಮದುವೆ ಆಗಬೇಕೆಂದೂ ಇಬ್ಬರೂ ನಿರ್ಧರಿಸಿದ್ದರು. ಇಷ್ಟೆಲ್ಲಾ ಬರೀ ಚಾಟಿಂಗ್‌ನಲ್ಲೇ ನಡೆದಿತ್ತು. ಹೀಗೆ ನಡೆಯುತ್ತಿದ್ದಾಗ ಮುಖಾಮುಖಿ ಭೇಟಿಯಾಗುವಂತೆ ದೀಪೇಂದ್ರ ಸಿಂಗ್ ಆಕೆಯನ್ನು ಕೇಳಿದ್ದಾಳೆ. ಅದಕ್ಕೆ ಒಪ್ಪಿದ ಆಕೆ ದೀಪೇಂದ್ರ ಸಿಂಗ್‌ನನ್ನು ಭೇಟಿ ಆಗಲು ಬಂದಿದ್ದಳು. ಆದರೆ ಇವರಿಬ್ಬರ ಈ ಇನ್‌ಸ್ಟಾಗ್ರಾಂ ಪ್ರೇಮ ಕತೆಯಲ್ಲಿ ಒಂದು ಟ್ವಿಸ್ಟ್ ಇತ್ತು. ಬಹಳ ಖುಷಿಯಿಂದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ ದೀಪೇಂದ್ರ ಸಿಂಗ್‌ಗೆ ಶಾಕ್ ಕಾದಿತ್ತು. ಪ್ರೊಫೈಲ್ ಪೋಟೋಗೂ ಅಲ್ಲಿ ಬಂದಿದ್ದಾಕೆಗೂ ಅಜಗಜಾಂತರ ವ್ಯತ್ಯಾಸ ಇತ್ತು. ಅಲ್ಲದೇ ಆಕೆ 45ವರ್ಷದ ಮಹಿಳೆ ಆಗಿದ್ದಳು.
ಮಹಿಳೆಗೆ ಥಳಿಸಿ, ಎಸ್ಕೇಪ್
ಎದುರಿಗೆ ನಿಂತಿದ್ದ ಮಹಿಳೆಯನ್ನು ಕಂಡು ಕೋಪಗೊಂಡಿದ್ದ ದೀಪೇಂದ್ರ ಸಿಂಗ್ ಆಕೆಯನ್ನು ಮುಖಾಮೂತಿ ನೋಡದೇ ಚಚ್ಚಿದ್ದಾನೆ. ನೆಲಕ್ಕೆ ಹಾಕಿ ಆಕೆಯ ತಲೆಗೆ ಒದ್ದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಮೊಬೈಲ್ ಅನ್ನೂ ಕಸಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಅಲ್ಲಿಂದ ಹೇಗೋ ಪೊಲೀಸ್ ಠಾಣೆಗೆ ಬಂದ ಮಹಿಳೆ ದೀಪೇಂದ್ರ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರಿನಾಧಾರದಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರು ದೀಪೇಂದ್ರ ಸಿಂಗ್‌ನನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Columbia University: ಕೊಲಂಬಿಯಾ ವಿವಿ ಪ್ರವೇಶಿಸಿದ ನ್ಯೂಯಾರ್ಕ್ ಪೊಲೀಸರು; ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರ ಬಂಧನ
ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲೂ ಇಂತಹದ್ದೇ ಪ್ರಕರಣವಂದು ಬೆಳಕಿಗೆ ಬಂದಿತ್ತು. ಲೊಕ್ಯಾಂಟೋ ಆ್ಯಪ್ (Locanto App) ಬಳಸುವವರನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನದೀಂ ಪಾಷ ಹಾಗೂ ನಾಗೇಶ್ ಎಂಬ ಖದೀಮರು ಹುಡುಗಿ ಹೆಸರಲ್ಲಿ ಲೊಕ್ಯಾಂಟೋ ಆ್ಯಪ್‌ನಲ್ಲಿ ಚೆಂದದ ಫೋಟೊ ಹಾಕಿ ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡುತ್ತಿದ್ದರು. ಬಳಿಕ ಆ ಅಕೌಂಟ್‌ನಿಂದ ತಾವೇ ಮೊದಲು ಮೆಸೇಜ್ ಮಾಡುತ್ತಿದ್ದರು. ಸಲುಗೆಯಿಂದ ಮಾತಾಡುತ್ತಾ ನಂಬಿಕೆಯನ್ನು ಗಿಟ್ಟಿಸಿಕೊಂಡು ಮರುಳು ಮಾಡುತ್ತಿದ್ದರು.