ನವದೆಹಲಿ: ಪ್ರಾಣಿಗಳ ಪ್ರಪಂಚ ಸದಾ ಕುತೂಹಲಕಾರಿಯಾಗಿರುತ್ತದೆ. ಕೌತುಕ ಕಣ್ಣುಗಳಿಂದ ನೋಡುವಂತೆ ಮಾಡುತ್ತದೆ. ಪ್ರಾಣಿಗಳ ಚಲನವಲನ, ಬುದ್ಧಿವಂತಿಕೆ, ಬೇಟೆಯಾಡುವ ರೀತಿ ಇತ್ಯಾದಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಡುಕೋಣಗಳ ಹಿಂಡೊಂದು ದಾಳಿ ನಡೆಸಲು ಬರುವ ಸಿಂಹಗಳ ಗುಂಪನ್ನು ಬೆದರಿಸಿ ಓಡಿಸುವ ವಿಡಿಯೊ ಇದಾಗಿದ್ದು, ನೆಟ್ಟಿಗರು ನೋಡಿ ರೋಮಾಂಚನಗೊಂಡಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಗಾದೆಯನ್ನು ಉದ್ಘರಿಸಿದ್ದಾರೆ (Viral News).
ಕೀನ್ಯಾದ ಮಸೈ ಮಾರ ರಾಷ್ಟ್ರೀಯ ಉದ್ಯಾನ (Masai mara national park)ದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವಿಡಿಯೊವನ್ನು ಸದ್ಯ ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಕಾಡುಕೋಣಗಳ ಧೈರ್ಯ, ಒಗ್ಗಟ್ಟನ್ನು ಹೊಗಳಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಹುಲ್ಲುಗಾವಲಿನಲ್ಲಿ ಕಾಡುಕೋಣವೊಂದು ಮೇಯುತ್ತಿರುತ್ತದೆ. ಆಗ ಅಲ್ಲಿಗೆ ಏಳೆಂಟು ಸಿಂಹಗಳ ಗುಂಪು ಲಗ್ಗೆ ಇಡುತ್ತದೆ. ಇಂದು ಭರ್ಜರಿ ಬೇಟೆ ಎಂದು ಲೆಕ್ಕ ಹಾಕುವ ಸಿಂಹಗಳ ಗುಂಪು ಕಾಡುಕೋಣವನ್ನು ಸುತ್ತುವರಿಯುತ್ತದೆ. ಕಾಡುಕೋಣ ಕಡಿಮೆ ಆಸಾಮಿಯೇನಲ್ಲ. ತನ್ನ ಬಳಿಗೆ ಬರುವ ಸಿಂಹಗಳನ್ನು ಬೆದರಿಸುತ್ತದೆ. ಅಲ್ಲಿಂದ ಓಡಿಸಲು ಯತ್ನಿಸುತ್ತದೆ.
ದೈತ್ಯದೇಹಿ ಕಾಡುಕೋಣವನ್ನು ಸುಲಭದಲ್ಲಿ ಸಿಂಹಗಳಿಗೆ ಮಣಿಸಲು ಸಾಧ್ಯವಾಗುವುದಿಲ್ಲ. ಅದು ಗುಟುರು ಹಾಕಿ ಒಂದು ಹೆಜ್ಜೆ ಮುಂದಿಟ್ಟಾಗ ಸಿಂಹಗಳು ಭಯದಿಂದ ಎರಡು ಹೆಜ್ಜೆ ಹಿಂದಿಡುತ್ತವೆ. ಕೊನೆ ಹೊಂಚು ಹಾಕಿ ಸಿಂಹವೊಂದು ಹಿಂದಿನಿಂದ ದಾಳಿ ನಡೆಸುತ್ತದೆ. ತನ್ನ ಮೇಲೆ ಎರಗಿದ ಶತ್ರುವನ್ನು ಕಾಡುಕೋಣ ಕೆಡವಲು ಯತ್ನಿಸುತ್ತದೆ. ಬಳಿಕ ಮೂರು ನಾಲ್ಕು ಸಿಂಹಗಳು ಒಮ್ಮೆಲೆ ದಾಳಿ ನಡೆಸಿದಾಗ ಕಾಡುಕೋಣ ತನ್ನ ಹಿಂಡಿನತ್ತ ಓಡುತ್ತದೆ. ಅಲ್ಲಿ ನೂರಾರು ಸಂಖ್ಯೆಯ ಕಾಡುಕೋಣಗಳು ಮೇಯುತ್ತಿರುತ್ತವೆ. ತಮ್ಮವನೊಬ್ಬ ಸಂಕಷ್ಟಕ್ಕೆ ಸಿಲುಕಿರುವುದನ್ನು ನೋಡಿ ಅವು ಓಡೋಡಿ ಬರುತ್ತವೆ.
ಕಾಡುಕೋಣಗಳ ಹಿಂಡನ್ನು ನೋಡಿ ಸಿಂಹದಂತಹ ಸಿಂಹಗಳಿಗೆ ನಡುಕ ಶುರುವಾಗುತ್ತದೆ. ಭರ್ಜರಿ ಬೇಟೆಯ ನಿರೀಕ್ಷೆಯಲ್ಲಿದ್ದ ಅವುಗಳು ಈಗ ಕಾಡುಕೋಣಗಳ ಸೈನ್ಯವನ್ನು ಕಂಡು ಭಯದಿಂದ ಒಂದೊಂದೆ ಹೆಜ್ಜೆ ಹಿಂದಿಡಲು ಆರಂಭಿಸುತ್ತವೆ. ಬಳಿಕ ಕಾಡುಕೋಣಗಳ ಗುಂಪು ಸಿಂಹಗಳನ್ನು ಅಟ್ಟಿಸಿಕೊಂಡು ಬರುತ್ತವೆ. ಬದುಕಿದ್ದರೆ ಬೇಡಿಯಾದರೂ ತಿನ್ನಬಹುದು ಎನ್ನುವಂತೆ ಜೀವ ಉಳಿಸಿಕೊಳ್ಳಲು ಸಿಂಹಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ.
ನೆಟ್ಟಿಗರಿಂದ ಶಷಬ್ಬಾಸ್‌ಗಿರಿ
ವಿಡಿಯೊ ನೋಡಿದವರೆಲ್ಲ ಕಾಡುಕೋಣಗಳ ಒಗ್ಗಟ್ಟನ್ನು ಕೊಂಡಾಡುತ್ತಿದ್ದಾರೆ. ಈ ಮೂಕ ಪ್ರಾಣಿಗಳಿಂದ ನಾವು ನೋಡಿ ಕಲಿಯಬೇಕಾದದ್ದು ಬೇಕಾದಷ್ಟಿದೆ ಎಂದು ಕಮೆಂಟ್ ಮಾಡಿದ್ದಾರೆ. ʼʼಇಂತಹ ಒಗ್ಗಟ್ಟು ಮನುಷ್ಯರಲ್ಲಿ ಯಾಕಿಲ್ಲ?ʼʼ ಎಂದು ಒಬ್ಬರು ಕೇಳಿದ್ದಾರೆ.
ʼʼಅದೃಷ್ಟವಶಾತ್ ದಾಳಿಗೊಳಗಾದ ಈ ಎಳೆಯ ಕೋಣ ಹಿಂಡಿನಿಂದ ತುಂಬ ದೂರ ಹೋಗಿರಲಿಲ್ಲ. ಇಲ್ಲದಿದ್ದರೆ ಅದು ಸಿಂಹಗಳಿಗೆ ಆಹಾರವಾಗುತ್ತಿತ್ತುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. “ಸಾವು ಬದುಕಿನ ನಿರ್ಧರಿಸುವ ಈ ನಿರ್ಣಾಯಕ ಘಟ್ಟದಲ್ಲಿ ಕಾಡುಕೋಣ ಉತ್ತಮ ನಡೆ ತೋರಿದೆ. ತನ್ನವರ ಬಳಿಗೆ ಸಾರಿ ಜೀವ ಉಳಿಸಿಕೊಂಡಿದೆʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಮೂಕ ಪ್ರಾಣಿಗಳ ಸಹಬಾಳ್ವೆ ಹಲವರಲ್ಲಿ ಸಕಾರಾತ್ಮಕ ಭಾವನೆ ಹುಟ್ಟುಹಾಕಿದ್ದಂತೂ ನಿಜ.
ಇದನ್ನೂ ಓದಿ: Viral Video: ಹುಲಿ ಬೆಕ್ಕಿನ ಹಿರಿಯಣ್ಣ ಎನ್ನುವುದು ಇದಕ್ಕೆ; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ