Site icon Vistara News

Viral News: ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿದ ಬುದ್ಧಿವಂತ ಮಂಗ; ವಿಡಿಯೊ ನೀವೂ ನೋಡಿ

Viral News

Viral News

ಬೆಂಗಳೂರು: ಬಾಯಾರಿದ ಕಾಗೆಯೊಂದು ಬುದ್ಧಿವಂತಿಕೆಯಿಂದ ಪಾತ್ರೆಯ ತಳ ಭಾಗದಲ್ಲಿದ್ದ ನೀರು ಕುಡಿದ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಕಾಗೆ ಚಿಕ್ಕ ಚಿಕ್ಕ ಕಲ್ಲುಗಳನ್ನು ತಂದು ಹಾಕಿ ನೀರು ಪಾತ್ರೆಯಿಂದ ಮೇಲೆ ಬರುವಂತೆ ಮಾಡಿ ದಾಹ ನೀಗಿಸಿಕೊಂಡಿತ್ತು ಎನ್ನುವುದು ಕಥೆ. ಬಾಲ್ಯದಲ್ಲಿ ಶಾಲೆಯಲ್ಲಿ, ಅಜ್ಜಿಯ ಬಳಿ ಈ ಕಥೆ ಕೇಳಿ ನಾವೆಲ್ಲ ಕಾಗೆಯ ಬುದ್ಧಿವಂತಿಕೆಗೆ ತಲೆ ಆಡಿಸಿದ್ದೇವೆ. ಆದರೆ ಅದು ಕಥೆ. ನಿಜವಾಗಿಯೂ ಹೀಗೆ ನಡೆಯಬಹುದಾ? ಎಂಬ ಪ್ರಶ್ನೆಗೆ ಹೌದು ಎನ್ನುತ್ತದೆ ಈ ದೃಶ್ಯ. ಆದರೆ ಇಲ್ಲಿ ಪಾತ್ರ ಕೊಂಚ ಬದಲಾಗಿದೆ. ಕಾಗೆಯ ಬದಲು ಮಂಗವೊಂದು ಬಂದಿದೆ. ಏನಿದು ಘಟನೆ? ನಿಮ್ಮ ಪ್ರಶ್ನೆಗೆ ಈ ವೈರಲ್‌ ವಿಡಿಯೊದಲ್ಲಿದೆ (Viral News) ಉತ್ತರ. ಅದೇನು ಎನ್ನುವುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಹೇಳಿ ಕೇಳಿ ಇದು ಬಿರು ಬೇಸಗೆಯ ಕಾಲ. ವಾತಾವಣದ ತಾಪಮಾನ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಜತೆಗೆ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಯಾಕೋ ವರುಣ ದೇವ ಬೆಂಗಳೂರಿನ ಮೇಲೆ ಮುನಿದಿದ್ದಾನೆ. ಹೀಗಾಗಿ ಹನಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ನಮಗೇ ಹೀಗಾದರೆ ಪಾಪ ಪ್ರಾಣಿ-ಪಕ್ಷಿಗಳ ಮೂಕ ವೇದನೆ ಯಾರಿಗೂ ಬೇಡ. ಈ ಮಧ್ಯೆ ದಾಹದಿಂದ ಕಂಗೆಟ್ಟ ಮಂಗವೊಂದು ಪ್ರದರ್ಶಿಸಿದ ಚಾಣಾಕ್ಷ ನಡೆ ನೆಟ್ಟಿಗರ ಗಮನ ಸೆಳೆದಿದೆ. ಮನೆಯೊಂದರ ಅಡುಗೆ ಕೋಣೆಗೆ ನುಗ್ಗಿದ ಮಂಗವೊಂದು ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿಯಲು ಪ್ರಯತ್ನಿಸಿದೆ. ಸದ್ಯ ಇದರ ಸಾಹಸದ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ.

ಬೆಂಗಳೂರಿನ ಅಕ್ಷತ್ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಅಪರೂಪದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಮಂಗಗಳನ್ನು ಬುದ್ಧಿವಂತ ಪ್ರಾಣಿ ಎಂದೇ ಕರೆಯಲಾಗುತ್ತದೆ. ಪ್ರವಾಸಿ ತಾಣ, ದೇವಸ್ಥಾನದ ಪರಿಸರ ಮುಂತಾದೆಡೆ ಇರುವ ಕೋತಿಗಳು ಪ್ರವಾಸಿಗರ ಬಾಟಲಿ ಕಸಿದು ಮುಚ್ಚಳ ತೆರೆದು ನೀರು, ಜ್ಯೂಸ್‌ ಕುಡಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಅದಕ್ಕಿಂತ ಭಿನ್ನವಾಗಿ ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.

ವಿಡಿಯೊದಲ್ಲಿ ಏನಿದೆ?

ನೀರು ಹುಡುಕಿಕೊಂಡು ಕಿಟಕಿ ಮೂಲಕ ಅಡುಗೆ ಕೋಣೆಗೆ ಮಂಗವೊಂದು ಬಂದಿತ್ತು. ಬಳಿಕ ಅದು ನೇರ ವಾಟರ್‌ ಪ್ಯೂರಿಫೈಯರ್‌ ಬಳಿಗೆ ತೆರಳಿತು. ಅದರ ಕೆಳಗೆ ಕುಳಿತು ನಳ‍್ಳಿಗೆ ಬಾಯಿ ಇಟ್ಟಿತು. ನೀರು ಬರದೆ ಇದ್ದಾಗ ಆನ್‌ ಮಾಡಲು ಪ್ರಯತ್ನಿಸಿತು. ಈ ದೃಶ್ಯವನ್ನು ಮನೆಯವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ತನ್ನ ಸರದಿಗಾಗಿ ನಿರೀಕ್ಷೆಯಿಂದ ಕಿಟಕಿಯಲ್ಲಿ ಕಾಯುತ್ತ ಕುಳಿತ ಇನ್ನೊಂದು ಮಂಗವನ್ನೂ ವಿಡಿಯೊದಲ್ಲಿ ಕಾಣಬಹುದು. ಸದ್ಯ ಈ ವಿಡಿಯೊ ನೋಡಿದವರ ಹೃದಯ ತುಂಬಿ ಬಂದಿದೆ. ನೀರಿಗಾಗಿ ಮಂಗ ಪಡುತ್ತಿರುವ ಕಷ್ಟ ನೋಡಿ ಅನೇಕರು ಮರುಗಿದ್ದಾರೆ.

ಇದನ್ನೂ ಓದಿ: Viral Video: ವಿಷ ಸೇವಿಸಿ ವಿಡಿಯೊ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ; ಸಾವಿಗೆ ಕಾರಣವೇನು?

ʼʼಕೋತಿಗಳಿಗೆ ಬಾಯಾರಿಕೆ: ನೀರಿಗಾಗಿ ಅಡುಗೆ ಮನೆಯ ಕಿಟಕಿಗಳ ಮೂಲಕ ಮಂಗಗಳು ಲಗ್ಗೆ ಇಡುತ್ತಿವೆ. ಬೆಂಗಳೂರು ನೀರಿನ ಬಿಕ್ಕಟ್ಟು ಮನುಷ್ಯರಿಗಿಂತ ಪ್ರಾಣಿಗಳಿಗೆ ಹೆಚ್ಚು ಹೊಡೆತ ನೀಡಿದೆ. ಪ್ರಾಣಿ-ಪಕ್ಷಿಗಳಿಗೆ ಸಹಾಯ ಮಾಡಲು ನೀರನ್ನು ಸಂರಕ್ಷಿಸೋಣ” ಎಂಬ ಕ್ಯಾಪ್ಶನ್‌ ನೀಡಿ ವಿಡಿಯೊ ಶೇರ್‌ ಮಾಡಲಾಗಿದೆ. ಸದ್ಯ ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

Exit mobile version