Site icon Vistara News

Viral News: ರೈಲಿನಲ್ಲಿ ಅಶ್ಲೀಲವಾಗಿ ಮೈ ಕುಣಿಸಿದ ಮಹಿಳೆ; ರೀಲ್ಸ್ ಮಾಡುವವರ ಕಾಟವಿಲ್ಲದ ಪ್ರಯಾಣ ಅಸಾಧ್ಯ ಎಂದ ನೆಟ್ಟಿಗರು

Viral News

Viral News

ಮುಂಬೈ: ಇತ್ತೀಚೆಗೆ ಯುವ ಜನತೆಯಲ್ಲಿ ರೀಲ್ಸ್‌ ಮಾಡುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ಯಾವ ಮಟ್ಟಿಗೆ ಅತಿರೇಕಕ್ಕೆ ಹೋಗಿದೆ ಎಂದರೆ ಸಾರ್ವಜನಿಕ ಸ್ಥಳಗಳಲ್ಲಿಯೂ ವಿಡಿಯೊ ಮಾಡಲು ಮುಂದಾಗುತ್ತಿದ್ದಾರೆ. ಇತರರಿಗೆ ತೊಂದರೆಯಾಗುತ್ತದೆ, ಕಿರಿಕಿರಿ ಅನುಭವಿಸುತ್ತಾರೆ ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದೆ ರೀಲ್ಸ್‌ಗೆ ಹೆಜ್ಜೆ ಹಾಕುತ್ತಿರುವ ಪ್ರವೃತ್ತಿಗೆ ಬ್ರೇಕ್‌ ಬೀಳುತ್ತಿಲ್ಲ. ರೈಲು, ಮೆಟ್ರೋ, ವಿಮಾನ ಹೀಗೆ ಎಲ್ಲೆಂದರಲ್ಲಿ ಮೈ ಕುಣಿಸಿ ಜನಪ್ರಿಯತೆ ಪಡೆದುಕೊಳ್ಳಲು ಮುಂದಾಗುವವರು ಅಧಿಕ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಮೈ ಚಳಿ ಬಿಟ್ಟು ಅಶ್ಲೀಲವಾಗಿ ಕುಣಿಯುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಇದೀಗ ಅಂತಹದ್ದೇ ಘಟನೆ ವರದಿಯಾಗಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮುಂಬೈಯ ಲೋಕಲ್‌ ರೈಲಿನಲ್ಲಿ ಮಹಿಳೆಯೊಬ್ಬಳು ಪ್ರಯಾಣಿಕರ ಮಧ್ಯೆ ಅಶ್ಲೀಲವಾಗಿ ಹೆಜ್ಜೆ ಹಾಕಿ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾಳೆ (Viral News).

ಅಧಿಕಾರಿಗಳು ಎಷ್ಟೇ ಎಚ್ಚರಿಸಿದರೂ, ಕ್ರಮ ಕೈಗೊಂಡರೂ ಚಲಿಸುತ್ತಿರುವ ರೈಲು, ಫ್ಲಾಟ್‌ಫಾರ್ಮ್‌ನಲ್ಲಿ ಡ್ಯಾನ್ಸ್‌ ಮಾಡುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಈ ವಿಡಿಯೊದಲ್ಲಿ ಚಲಿಸುತ್ತಿರುವ ಮುಂಬೈ ಲೋಕಲ್‌ ರೈಲು ಮತ್ತು ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ (CSMT)ನಲ್ಲಿ ಮಹಿಳೆಯೊಬ್ಬಳು ತುಂಡು ಬಟ್ಟೆ ತೊಟ್ಟು ಭೋಜ್‌ಪುರಿ ಹಾಡಿಗೆ ಅಶ್ಲೀಲವಾಗಿ ನರ್ತಿಸುತ್ತಿರುವುದು ಕಂಡು ಬಂದಿದೆ. ನೆಟ್ಟಿಗರು ಈ ವಿಡಿಯೊ ನೋಡಿ ಮಹಿಳೆಗೆ ಛೀಮಾರಿ ಹಾಕುತ್ತಿದ್ದಾರೆ.

ಮಹಿಳೆ ರೈಲಿನ ಬೋಗಿಯ ಒಳಗೆ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಚೋದನಕಾರಿಯಾಗಿ ನೃತ್ಯ ಮಾಡಿ ಪ್ರಯಾಣಿಕರಿಗೆ ಮುಜುಗರ ಉಂಟು ಮಾಡುತ್ತಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ʼ’ಮುಂಬೈ ರೈಲಿನಲ್ಲಿ ಭಿಕ್ಷುಕರು ಮತ್ತು ರೀಲ್ಸ್ ಮಾಡುವವರ ಕಾಟವಿಲ್ಲದೆ ಶಾಂತಿಯುತವಾಗಿ ಪ್ರಯಾಣಿಸಲು ಸಾಧ್ಯವಿಲ್ಲʼʼ ಎಂದು ಕ್ಯಾಪ್ಶನ್‌ ನೀಡಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಜತೆಗೆ ಮುಂಬೈ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್‌ ಮಾಡಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಲಾಗಿದೆ.

ನೆಟ್ಟಿಗರು ಏನಂದ್ರು?

ʼʼಈ ಮಹಿಳೆ ಎಲ್ಲ ಕಡೆ ಡ್ಯಾನ್ಸ್‌ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದಾಳೆ. ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆಕೆಯನ್ನು ಬಂಧಿಸಿ ಮುಂಬೈಯಿಂದ ಗಡಿಪಾರು ಮಾಡಬೇಕುʼʼ ಎಂದು ಒಬ್ಬರು ಆಗ್ರಹಿಸಿದ್ದಾರೆ. ʼʼಇಂತಹ ಪ್ರವೃತ್ತಿಗೆ ಕೂಡಲೇ ಕಡಿವಾಣ ಹಾಕಬೇಕುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಕಾನೂನಿನ ಭಯವಿಲ್ಲದಿದ್ದರೆ ಹೀಗೆಲ್ಲ ಸಂಭವಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲವಾಗಿ ನೃತ್ಯ ಪ್ರದರ್ಶಿಸುವುದು ತಪ್ಪು. ರೈಲ್ವೆ ಅಧಿಕಾರಿಗಳು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪ್ರಯಾಣಿಕರು ಜವಾಬ್ದಾರಿಯುತ ನಾಗರಿಕರಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು’ʼ ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಿರಿಕಿರಿ ಉಂಟು ಮಾಡುವವರನ್ನು ಬಂಧಿಸಬೇಕು ಎಂದು ಬಹುತೇಕರು ಅಧಿಕಾರಿಗಳನ್ನು ಟ್ಯಾಗ್‌ ಮಾಡಿ ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು?

ಸದ್ಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮುಂಬೈ ಸೆಂಟ್ರಲ್ ಡಿಆರ್‌ಎಂನ ಅಧಿಕೃತ ಎಕ್ಸ್ ಹ್ಯಾಂಡಲ್, ಘಟನೆಯ ತನಿಖೆ ನಡೆಸಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಮುಂಬೈ ವಿಭಾಗದ ಭದ್ರತಾ ಇಲಾಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ. ʼʼಮಾಹಿತಿಗಾಗಿ ಧನ್ಯವಾದಗಳು. ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ’ʼ ಎಂದು ಹೇಳಿದೆ.

ಇದನ್ನೂ ಓದಿ: Viral Video: ಅರೆಬರೆ ಬಟ್ಟೆಯಲ್ಲೇ ರೈಲಿನಲ್ಲಿ ಡ್ಯಾನ್ಸ್‌ ಮಾಡಿದ ಯುವತಿ; ಛೀಮಾರಿ ಹಾಕಿದ ಜನ

Exit mobile version