Site icon Vistara News

Viral News: ‘ಭಾರತದಲ್ಲಿ ಏನು ತಪ್ಪಾಗಿದೆ?’ ಅಭಿಯಾನಕ್ಕೆ ತಿರುಗೇಟು ನೀಡಿದ ನೆಟ್ಟಿಗರು; ಇಲ್ಲಿದೆ ವೈರಲ್‌ ಪೋಸ್ಟ್‌

viral news

viral news

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ‘ಭಾರತದಲ್ಲಿ ಏನು ತಪ್ಪಾಗಿದೆ?’ (What’s wrong with India) ಎಂಬ ಪೋಸ್ಟ್‌ ವೈರಲ್‌ ಆಗಿದೆ. ಇದು ಬುಧವಾರ ಮೂರು ಲಕ್ಷಕ್ಕೂ ಹೆಚ್ಚು ಪೋಸ್ಟ್‌ಗಳೊಂದಿಗೆ ಭಾರತದಲ್ಲಿ ಟ್ರೆಂಡ್ ಆಗಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆದ ಘಟನೆಗಳ ಬಗ್ಗೆ ಕೆಲವು ಬಳಕೆದಾರರು ನೆಗೆಟಿವ್‌ ಪೋಸ್ಟ್ ಹಂಚಿಕೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಕೆ ಕಂಡು ಬಂದಿದೆ. ಇದು ಭಾರತ ಮತ್ತು ಭಾರತೀಯರನ್ನು ನಕಾರಾತ್ಮಕವಾಗಿ ಚಿತ್ರಿಸುವ ಪೋಸ್ಟ್‌ಗಳಿಗೆ ಒಲವು ತೋರುವ ʼಪಕ್ಷಪಾತದ ಧೋರಣೆʼ ಎಂದು ಹಲವರು ಟೀಕಿಸಿದ್ದಾರೆ. ಅಲ್ಲದೆ ಭಾರತ ಸರ್ಕಾರದ ಸಿಟಿಜನ್ ಎಂಗೇಜ್‌ಮೆಂಟ್‌ ಫ್ಲಾಟ್‌ಫಾರ್ಮ್‌ನ ಅಧಿಕೃತ ಹ್ಯಾಂಡಲ್ MyGovIndia ಸಹ ಇದರಲ್ಲಿ ಭಾಗವಹಿಸಿದೆ (Viral News).

ಏನಿದು ಘಟನೆ?

10 ದಿನಗಳ ಹಿಂದೆ  ಜಾರ್ಖಂಡ್‌ನ ದುಮ್ಕಾದಲ್ಲಿ ಸ್ಪೇನ್‌ ಮೂಲದ ಮಹಿಳೆಯೊಬ್ಬರ ಮೇಲೆ ಎಂಟರಿಂದ ಹತ್ತು ಮಂದಿ ಪಾತಕಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಈ ಬೆಳವಣಿಗೆಗೆ ನಾಂದಿ ಹಾಡಿತ್ತು. ಇದಾದ ಬಳಿಕ ‘ಭಾರತದಲ್ಲಿ ಏನು ತಪ್ಪಾಗಿದೆ’ ಎಂಬ ಪ್ರಶ್ನೆಯೊಂದಿಗೆ ವಿದೇಶಿಯರು ವಿವಿಧ ಪೋಸ್ಟ್‌ಗಳನ್ನು ಶೇರ್‌ ಮಾಡಲು ಆರಂಭಿಸಿದರು. ಸಾರ್ವಜನಿಕ ಸ್ಥಳದಲ್ಲಿನ ಅಶುಚಿತ್ವ, ಬಡತನ, ಅಪರಾಧ ಚಟುವಟಿಕೆಗಳು ಮುಂತಾದ ಮುಂತಾದ ವಿಚಾರವೇ ಸಾಕು ‘ಭಾರತದಲ್ಲಿ ಏನು ತಪ್ಪಾಗಿದೆ’ ಅಭಿಯಾನದ ಮೂಲಕ ಭಾರತದ ಸಮಸ್ಯೆಗಳ ಬಗ್ಗೆಯೇ ಗಮನ ಕೇಂದ್ರೀಕರಿಸಿ ವಿಡಿಯೊ, ಫೋಟೊಗಳನ್ನು ಹಂಚಿಕೊಳ್ಳತೊಡಗಿದರು. ಈ ಅವಕಾಶವನ್ನು ಬಳಸಿಕೊಂಡ ಪಟ್ಟಭದ್ರ ಹಿತಾಸಕ್ತಿಯ ಕೆಲವರು ಭಾರತದ ಚಿತ್ರಣವನ್ನು ಹಾಳು ಮಾಡಲು ಯತ್ನಿಸಿದರು. ದೇಶದ ಬಗ್ಗೆ ನಕಾರಾತ್ಮಕ ಸಂದೇಶ ಸಾರುವ ಪೋಸ್ಟ್‌ಗಳನ್ನು ಶೇರ್‌ ಮಾಡತೊಡಗಿದ್ದರು.

ತಿರುಗೇಟು

ಅನೇಕರು ಈ ಪ್ರವೃತ್ತಿಯನ್ನು ಖಂಡಿಸಿದ್ದಾರೆ ಮತ್ತು ಭಾರತ ಯಾಕೆ ಶ್ರೇಷ್ಠ ಎನ್ನುವುದನ್ನು ಸಾರುವ ವಿವಿಧ ಪೋಸ್ಟ್‌ಗಳನ್ನು ಹಂಚಿಕೊಂಡು ತಿರುಗೇಟು ನೀಡಿದ್ದಾರೆ. ಜತೆಗೆ ಇತರ ಪಾಶ್ಚಿಮಾತ್ಯ ಅಥವಾ ಅಭಿವೃದ್ಧಿ ಹೊಂದಿದ ದೇಶಗಳು ಎದುರಿಸುತ್ತಿರುವ ಇದೇ ರೀತಿಯ ಸಮಸ್ಯೆಗಳನ್ನು ಎತ್ತಿ ತೋರಿಸುವ ವಿಡಿಯೊ, ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ತೋರಿಸುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಮೀಮ್‌ಗಳನ್ನೂ ಶೇರ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿದ MyGovIndia

ಈ ಮಧ್ಯೆ ಭಾರತ ಸರ್ಕಾರದ ಸಿಟಿಜನ್ ಎಂಗೇಜ್‌ಮೆಂಟ್‌ ಫ್ಲಾಟ್‌ಫಾರ್ಮ್‌ನ ಅಧಿಕೃತ ಹ್ಯಾಂಡಲ್ MyGovIndia ಕೂಡ ಪ್ರತಿಕ್ರಿಯಿಸಿ ದೇಶ ವಿರೋಧಿಗಳಿಗೆ ಸರಿಯಾದ ಉತ್ತರ ನೀಡಿದೆ. ಎರಡು ವರ್ಷಗಳಲ್ಲಿನ ದೇಶದ ಸಾಧನೆಗಳನ್ನು ಎತ್ತಿ ತೋರಿಸುವ ನಾಲ್ಕು ಸುದ್ದಿ ತುಣುಕುಗಳ ಫೋಟೊವನ್ನು ಹಂಚಿಕೊಂಡಿದೆ. ʼಭಾರತವು ತೀವ್ರ ಬಡತನವನ್ನು ಅಳಿಸಿಹಾಕಿದೆʼ, ʼಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ದೇಶ ಭಾರತʼ, ʼವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಭಾರತವನ್ನು ಐಎಂಎಫ್ ಮುಖ್ಯಸ್ಥರು ಶ್ಲಾಘಿಸಿದರುʼ ಮತ್ತು ʼಇತರ ದೇಶಗಳು ಡಿಜಿಟಲ್ ಮೂಲಸೌಕರ್ಯದಲ್ಲಿ ಭಾರತದ ಪ್ರಗತಿಯನ್ನು ಅನುಕರಿಸಿದವುʼ ಎಂದು ಸುದ್ದಿಯ ತುಣಕುಗಳನ್ನು ಪ್ರದರ್ಶಿಸಿದೆ. ಈ ಮೂಲಕ ವಿರೋಧಿಗಳು ಸರಿಯಾದ ಪಾಠ ಕಲಿಸಿದೆ.

ಮಹಿಳೆಯರ ಸುರಕ್ಷತೆ, ಅಪರಾಧ, ಆಹಾರ ನೈರ್ಮಲ್ಯ ಮತ್ತು ದೇಶದಲ್ಲಿನ ಭ್ರಷ್ಟಾಚಾರದಂತಹ ವಿಷಯಗಳನ್ನು ಒಳಗೊಂಡ ಪೋಸ್ಟ್‌ಗಳ ಹಿನ್ನೆಲೆಯಲ್ಲಿ ಭಾರತದ ಬಗ್ಗೆ ಮೂಡಬಹುದಾದ ತಪ್ಪು ಕಲ್ಪನೆಯನ್ನು ಹೊಡೆದೋಡಿಸಿ ಸಕಾರಾತ್ಮಕತೆ ತುಂಬಲು ಹಲವರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Nita Ambani: ವಾಹ್‌ ತಾಜ್!‌ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನೀತಾ ಅಂಬಾನಿ ಧರಿಸಿದ ಆಭರಣ ಯಾರದು, ಬೆಲೆ ಎಷ್ಟು ಗೊತ್ತೆ?

ಭಾರತದ ಜಿಡಿಪಿ ಮುಂದಿನ ನಾಲ್ಕು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆಯಿದೆ ಮತ್ತು 2027ರ ವೇಳೆಗೆ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹಣಕಾಸು ಸೇವೆಗಳ ಕಂಪನಿ ಜೆಫ್ರೀಸ್ ಕಳೆದ ತಿಂಗಳು ಹೇಳಿದೆ. ಅಲ್ಲದೆ 2030ರ ವೇಳೆಗೆ ಭಾರತವು ಸುಮಾರು 10 ಟ್ರಿಲಿಯನ್ ಡಾಲರ್ ಮಾರುಕಟ್ಟೆಯಾಗಲಿದೆ ಮತ್ತು ದೊಡ್ಡ ಜಾಗತಿಕ ಹೂಡಿಕೆದಾರರ ಗಮನವನ್ನು ದೇಶ ಸೆಳೆಯಲಿದೆ ಎಂದು ಈಗಾಗಲೇ ವದರಿಗಳು ತಿಳಿಸಿವೆ. ಹೀಗಾಗಿ ಭಾರತದ ಏಳಿಗೆಯನ್ನು ಸಹಿಸದವರು ‘ಭಾರತದಲ್ಲಿ ಏನು ತಪ್ಪಾಗಿದೆ’ ಅಭಿಯಾನದ ಮೂಲಕ ದೇಶದ ಮಾನ ಕಳೆಯಲು ಯತ್ನಿಸುತ್ತಿದ್ದಾರೆ ಎಂದು ಹಲವರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version