ಚೆನ್ನೈ: ಚಲಿಸುತ್ತಿದ್ದ ಸರ್ಕಾರಿ ಬಸ್‌ನ ಸೀಟ್ ಕೆಳಗಿನ ತಳ ಕುಸಿದು ಮಹಿಳೆಯೊಬ್ಬರು ರಸ್ತೆಗೆ ಬಿದ್ದಿರುವ ಘಟನೆ ನಡೆದಿದೆ. ತಮಿಳುನಾಡಿನ ಚೆನ್ನೈಯಲ್ಲಿ ಈ ಆಫಾತಕಾರಿ ಘಟನೆ ಸಂಭವಿಸಿದ್ದು, ಮಹಿಳೆ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ (Viral News).
ಏನಿದು ಘಟನೆ?
ಮಂಗಳವಾರ (ಫೆಬ್ರವರಿ 6) ಸಾಯಂಕಾಲ ಚೆನ್ನೈ ತಿರುವಕ್ಕಾಡಿನಿಂದ ವಲ್ಲೂರ್ ನಗರಕ್ಕೆ ಸಾಗುವ ರೂಟ್ ನಂ. 59 ಸಿಟಿ ಬಸ್‌ನಲ್ಲಿ ಈ ಘಟನೆ ನಡೆದಿದೆ. 27 ವರ್ಷ ಮಹಿಳೆ ಈ ಬಸ್‌ನ ಕೊನೆಯ ಸೀಟ್‌ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಬಸ್ ಅಮಿಜಿಕರೈಗೆ ತಲುಪಿದಾಗ ಇದ್ದಕ್ಕಿದ್ದಂತೆ ಆ ಮಹಿಳೆ ಕುಳಿತಿದ್ದ ಸೀಟ್‌ನ ತಳಬಾಗ ಕುಸಿದು ದೊಡ್ಡದಾದ ರಂಧ್ರ ಉಂಟಾಗಿತ್ತು. ಈ ರಂಧ್ರದ ಮೂಲಕ ಮಹಿಳೆ ರಸ್ತೆಗೆ ಬಿದ್ದು ಬಿಟ್ಟರು. ಕೂಡಲೆ ಸಹ ಪ್ರಯಾಣಿಕರು ಎಚ್ಚೆತ್ತು ಬಸ್ ಚಾಲಕ ಮತ್ತು ನಿರ್ವಾಹಕರಿಗೆ ವಿಷಯ ತಿಳಿಸಿದರು. ಹೀಗಾಗಿ ಬಸ್ ನಿಲ್ಲಿಸಲಾಯಿತು. ಸಣ್ಣ ಪುಟ್ಟ ಗಾಯಕೊಂಡಿದ್ದ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ʼʼಬಸ್ ಚಾಲಕ ಶೀಘ್ರ ಕಾರ್ಯ ಪ್ರವೃತ್ತನಾಗಿ ಬಸ್ ನಿಲ್ಲಿಸಿದ್ದರಿಂದ ಸಂಭವಿಸಬಹುದಾದ ಬಹು ದೊಡ್ಡ ಆಪತ್ತಿನಿಂದ ಮಹಿಳೆಯನ್ನು ಪಾರು ಮಾಡಿದರುʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
சென்னை திருவேற்காட்டில் இருந்து, வள்ளலார் நகர் செல்லும் தடம் எண் 59 பேருந்தில், இருக்கையில் அமர்ந்திருந்த சகோதரி ஒருவர், இருக்கையின் கீழ் இருந்த பலகை உடைந்து, ஓடிக்கொண்டிருந்த பேருந்தில் இருந்து கீழே விழுந்து, அதிர்ஷ்டவசமாக உயிர் தப்பியுள்ளார். தமிழகத்தில் திமுக அரசு நிர்வாகம்… pic.twitter.com/pRgmqyZzEY
— K.Annamalai (@annamalai_k) February 6, 2024
ತನಿಖೆ ಕೈಗೆತ್ತಿಕೊಂಡ ಅಧಿಕಾರಿಗಳು
ಈ ವಿಷಯ ತಿಳಿದ ಕೂಡಲೇ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಘಟನೆಯ ಕೂಲಂಕುಷ ತನಿಖೆಗೆ ಸೂಚಿಸಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಬೇರೆ ಬಸ್ ತರಿಸಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಸದ್ಯ ಘಟನೆಯ ಬಗ್ಗೆ ಹಲವರು ಶಾಕ್ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಿಂದ ವಾಗ್ದಾಳಿ
ಈ ಬಗ್ಗೆ ತಮಿಳುನಾಡು ಬಿಜೆಪಿ ಘಟಕ ರಾಜ್ಯ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಡಿಎಂಕೆ ರಾಜ್ಯದಲ್ಲಿ ಯಾವ ರೀತಿ ಕೆಟ್ಟ ಆಡಳಿತ ನಡೆಸುತ್ತಿದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video : ಕಂಡಕ್ಟರ್ ಸಾಹಸಕ್ಕೆ ಕ್ಷಣಾರ್ಧದಲ್ಲೇ ಉಳಿಯಿತು ಯುವತಿಯ ಪ್ರಾಣ; ಇಲ್ಲಿದೆ ವಿಡಿಯೊ
ʼʼಕೆಟ್ಟ ಆಡಳಿತದಿಂದ ರಾಜ್ಯದಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಸರ್ಕಾರಿ ಬಸ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸಮಸ್ಯೆ ಉದ್ಘವಿಸಿದೆ. ಮಳೆಗಾಲದಲ್ಲಿ ಬಸ್‌ನಲ್ಲಿ ಸೋರಿಕೆ ಕಂಡು ಬರುತ್ತಿದೆ, ಸೀಟ್‌ಗಳು ಹರಿದಿವೆ. ಅಲ್ಲದೆ ಇದೀಗ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವುದು ಅಪಾಯಕಾರಿ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ. ಸಾರಿಗೆ ಇಲಾಖೆ ಮಾತ್ರವಲ್ಲ, ತಮಿಳುನಾಡು ಸರ್ಕಾರದ ಪ್ರತಿಯೊಂದು ಇಲಾಖೆಯೂ ಇದೇ ರೀತಿಯ ದುಸ್ಥಿತಿಯಲ್ಲಿದೆ. ಜನರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಾರಿಗೆ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಾಡಬಹುದಾದ ಮಾರ್ಗಗಳ ಬಗ್ಗೆ ಯೋಚಿಸುವ ಸಚಿವರು ಸರ್ಕಾರಿ ಬಸ್‌ಗಳ ನಿರ್ವಹಣೆಯ ಬಗ್ಗೆಯೂ ಗಮನ ಹರಿಸಬೇಕುʼʼ ಎಂದು ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಬಸ್‌ನ ವಿಡಿಯೊವನ್ನೂ ಶೇರ್ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ