Site icon Vistara News

Viral News: ಕದ್ದ 50 ಲಕ್ಷ ರೂ. ಬೆಲೆಯ ವಜ್ರದುಂಗುರ ಪೊಲೀಸರ ಭಯದಿಂದ ಕಮೋಡ್‌ಗೆ ಎಸೆದ ಕಳ್ಳಿ!

diamond ring

ತೆಲಂಗಾಣ: ಸುಮಾರು 50 ಲಕ್ಷ ರೂ. ಬೆಲೆಯ ವಜ್ರದುಂಗುರವನ್ನು (diamond ring) ಕದ್ದ ಮಹಿಳೆಯೊಬ್ಬಳು (theft case) ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಅದನ್ನು ಕಮೋಡ್‌ಗೆ ಎಸೆದ ಘಟನೆ ತೆಲಂಗಾಣದ ಜ್ಯುಬಿಲಿ ಹಿಲ್ಸ್‌ನಲ್ಲಿ ನಡೆದಿದೆ.

ಬಂಜಾರಾ ಹಿಲ್ಸ್‌ನ ನರೇಂದ್ರ ಕುಮಾರ್‌ ಅಗರ್‌ವಾಲ್‌ ಎಂಬವರ ಸೊಸೆ ಜ್ಯುಬಿಲಿ ಹಿಲ್ಸ್‌ನ ಎಫ್‌ಎಂಎಸ್‌ ಡೆಂಟರ್‌ ಕ್ಲಿನಿಕ್‌ಗೆ ಜೂನ್‌ 27ರಂದು ಆಗಮಿಸಿದ್ದರು. ಟ್ರೀಟ್‌ಮೆಂಟ್‌ ಸಮಯದಲ್ಲಿ ತಮ್ಮ ಕೈಯಲ್ಲಿದ್ದ ವಜ್ರದ ಉಂಗುರವನ್ನು ತೆಗೆದು ಪಕ್ಕದಲ್ಲಿದ್ದ ಟೇಬಲ್‌ ಮೇಲಿಟ್ಟಿದ್ದರು. ಟ್ರೀಟ್‌ಮೆಂಟ್‌ ಮುಗಿಸಿ ತೆರಳುವಾಗ ಅದನ್ನು ಮರಳಿ ತೆಗೆದುಕೊಳ್ಳಲು ಅವರಿಗೆ ಮರೆತುಹೋಗಿದೆ.

ಕೆಲವು ಕ್ಷಣಗಳ ಬಳಿಕ ಅಲ್ಲಿಗೆ ಬಂದ ಇನ್ನೊಬ್ಬ ಮಹಿಳೆ, ಇದನ್ನು ಗಮನಿಸಿ, ವಜ್ರದುಂಗರವನ್ನು ಪರ್ಸಿಗೆ ಇಳಿಬಿಟ್ಟುಕೊಂಡಿದ್ದಾಳೆ. ಆದರೆ ಇದು ಬಹಳ ದುಬಾರಿ ಉಂಗುರ ಎಂದು ಗೊತ್ತಾದ ಕೂಡಲೇ ಆಕೆಗೆ ಭಯ ಶುರುವಾಗಿದೆ. ಕೂಡಲೇ ವಾಷ್‌ರೂಮಿಗೆ ಹೋಗಿ ಅಲ್ಲಿದ್ದ ಕಮೋಡ್‌ನಲ್ಲಿ ಆ ಉಂಗುರವನ್ನು ಹಾಕಿ ಫ್ಲಶ್‌ ಮಾಡಿ ವಾಪಸ್‌ ಬಂದಿದ್ದಾಳೆ.

ಉಂಗುರ ಮರೆತ ಮಹಿಳೆ ಮನೆಗೆ ಹೋಗಿ ನೋಡಿದಾಗ ಉಂಗುರು ಕ್ಲಿನಿಕ್‌ನಲ್ಲೇ ಮರೆತು ಬಂದುದು ನೆನಪಾಗಿದೆ. ವಾಪಸ್‌ ಬಂದು ಹುಡುಕಿದಾಗ ಉಂಗುರವಿರಲಿಲ್ಲ. ಕೂಡಲೇ ಪೊಲೀಸ್‌ಗೆ ದೂರು ನೀಡಲಾಗಿದ್ದು, ಪೊಲೀಸರು ಸಿಸಿ ದೃಶ್ಯಗಳ ಆಧಾರದಿಂದ ಕದ್ದ ಮಹಿಳೆಯನ್ನು ಕರೆಸಿ ವಿಚಾರಿಸಿದ್ದಾರೆ. ಆಕೆ ಉಂಗುರವನ್ನು ಕಮೋಡ್‌ಗೆ ಎಸೆದ ವಿಚಾರ ತಿಳಿಸಿದ್ದಾಳೆ. ಪೊಲೀಸರು ಮೆಕ್ಯಾನಿಕ್‌ನನ್ನು ಕರೆಸಿ ಕಮೋಡ್‌ ಮತ್ತು ಪೈಪ್‌ಲೈನ್‌ ಇತ್ಯಾದಿಗಳನ್ನು ಬಿಚ್ಚಿಸಿ ಜಾಲಾಡಿ ಭಗೀರಥ ಪ್ರಯತ್ನದ ಬಳಿಕ ಉಂಗುರವನ್ನು ಪತ್ತೆ ಹಚ್ಚಲು ಸಫಲರಾಗಿದ್ದಾರೆ.

ಇದನ್ನೂ ಓದಿ: Viral News: ನವಜಾತ ಶಿಶುವಿನಲ್ಲಿ 60 ಎಂಎಲ್‌ ನಿಕೋಟಿನ್‌ ಅಂಶ; ತಾಯಿಯ ಚಟವೇ ಮಗುವಿಗೆ ಶತ್ರು

Exit mobile version