ಮುಂಬೈ: ಹೆಣ್ಣು ಮಕ್ಕಳ ಮೇಲಿನ ಶೋಷಣೆ ಈಗಲೂ ಎಷ್ಟೋ ಕಡೆಗಳಲ್ಲಿ ನಡೆಯುತ್ತಿದೆ. ಕೌಟುಂಬಿಕ ಹಲ್ಲೆಗಳೂ ವರದಿಯಾಗುತ್ತಿರುತ್ತವೆ. ಅದೇ ರೀತಿ ಇದೀಗ ಮಹಾರಾಷ್ಟ್ರದ ಪುಣೆಯಲ್ಲಿ 27 ವರ್ಷದ ಮಹಿಳೆಯೊಬ್ಬಳು ತನ್ನ ಪತಿ ಮತ್ತು ಅತ್ತೆ ಮಾವನ ವಿರುದ್ಧ ದೈಹಿಕ, ಮಾನಸಿಕ ಹಿಂಸೆಯ ದೂರು ದಾಖಲಿಸಿದ್ದಾರೆ. ತಮ್ಮ ಋತುಸ್ರಾವದ ರಕ್ತವನ್ನು ಮಾರಾಟ ಮಾಡಲು ಕೊಡುವಂತೆ ಅವರು ಹಿಂಸೆ ನೀಡಿದ್ದಾಗಿ ಮಹಿಳೆ (Viral News) ಹೇಳಿದ್ದಾರೆ.
ಇದನ್ನೂ ಓದಿ: Viral News: ವ್ಯಕ್ತಿಯ ಹೊಟ್ಟೆಯಿಂದ ವೋಡ್ಕಾ ಬಾಟಲಿ ತೆಗೆದ ವೈದ್ಯರು, ಬಾಟಲಿ ಹೊಟ್ಟೆ ಸೇರಿದ್ದೇ ರೋಚಕ ಕತೆ
ಮಹಾರಾಷ್ಟ್ರದ ಬೀಡ್ ಜಿಲ್ಲೆಯವರಾಗಿರುವ ಮಹಿಳೆಗೆ 2019ರಿಂದಲೂ ಪತಿ ಮತ್ತು ಅತ್ತೆ ಮಾವ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರಂತೆ. 2022ರ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಆಕೆ ಋತುಸ್ರಾವದಿಂದ ಬಳಲುತ್ತಿದ್ದರು. ಆ ವೇಳೆ ಪತಿ ಮತ್ತು ಅತ್ತೆ ಮಾವ ಮಾಟ ಮಂತ್ರದ ಪೂಜೆಗೆಂದು ಋತುಸ್ರಾವದ ರಕ್ತವನ್ನು ಕೊಡುವಂತೆ ಆಕೆಯನ್ನು ಪೀಡಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಇಷ್ಟು ದಿನ ಪತಿಯ ಮನೆಯಲ್ಲಿದ್ದ ಮಹಿಳೆ ಇತ್ತೀಚೆಗೆ ಪುಣೆಯಲ್ಲಿರುವ ತಾಯಿ ಮನೆಗೆ ಬಂದಿದ್ದು, ಅಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ಬೀಡ್ ಜಿಲ್ಲೆಗೆ ಹಸ್ತಾಂತರಿಸಲಾಗಿರುವುದಾಗಿಯೂ ತಿಳಿಸಲಾಗಿದೆ.
ಈ ಪ್ರಕರಣದ ಬಗ್ಗೆ ಮಹಾರಾಷ್ಟ್ರದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಖಂಡನೆ ವ್ಯಕ್ತಪಡಿಸಿದ್ದಾರೆ. “ಆರೋಪಿಗಳು ಅಘೋರಿ ಪೂಜೆಗೆಂದು ರಕ್ತವನ್ನು ತೆಗೆದುಕೊಂಡು ಅದನ್ನು 50,000 ರೂ.ಗೆ ಮಾರಾಟ ಮಾಡಿದ್ದಾರೆ. ಇದು ಮಾನವೀಯತೆಗೆ ಮಸಿ ಬಳಿಯುವ ಘಟನೆ. ಪುಣೆಯಂತಹ ಪ್ರಗತಿಪರ ನಗರಗಳಲ್ಲಿ ಮಹಿಳೆಯರು ಇನ್ನೂ ಇಂತಹ ಅಪರಾಧಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿಯಾಗಿದೆ. ಇಂತಹ ಅಪರಾಧಗಳಿಂದ ಮಹಿಳೆಯರನ್ನು ರಕ್ಷಿಸಲು ಮತ್ತು ಸಮಾಜದಲ್ಲಿ ಅವರನ್ನು ಮತ್ತಷ್ಟು ಬಲಪಡಿಸಲು ಇನ್ನೂ ಎಷ್ಟು ಹೋರಾಟದ ಅಗತ್ಯವಿದೆ ಎಂಬ ಪ್ರಶ್ನೆಯಿದೆ. ರಾಜ್ಯ ಮಹಿಳಾ ಆಯೋಗವು ಈ ಘಟನೆಯನ್ನು ಗಮನಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video : ಮಾರುದ್ದದ ವಿಷಕಾರಿ ಹಾವನ್ನು ಕೈನಲ್ಲಿ ಹಿಡಿದು ವಿಡಿಯೊ ಮಾಡಿದ ವ್ಯಕ್ತಿ; ಇಲ್ಲಿದೆ ನೋಡಿ ವೈರಲ್ ವಿಡಿಯೊ
ಈ ರೀತಿ ಅಘೋರಿ ಪೂಜೆ ಪ್ರಕರಣ ವರದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2022ರಲ್ಲಿ ಮಹಿಳೆಯೊಬ್ಬಳಿಗೆ ಆಕೆಯ ಪತಿ ಮತ್ತು ಅತ್ತೆ ಮಾವ ಮನುಷ್ಯನ ಮಾಂಸ ಮತ್ತು ಮೂಳೆಯನ್ನು ತಿನ್ನುವಂತೆ ಒತ್ತಾಯಿಸಿದ್ದ ಘಟನೆ ವರದಿಯಾಗಿತ್ತು. ಮಗು ಪಡೆಯುವುದಕ್ಕಾಗಿ ಆ ಪೂಜೆ ಮಾಡಿದ್ದಾಗಿ ಹೇಳಲಾಗಿತ್ತು.