ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಿರುವ ಫೋಟೊಗಳು ವೈರಲ್ (Viral News) ಆಗಿವೆ.
ಕಳೆದ ಎರಡು ದಿನಗಳಿಂದ ಅನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವರು ಇಲಾಖೆಯ ಯಾವುದೇ ಕಾರ್ಯಕ್ರಮ, ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಶುಕ್ರವಾರ ವೈದ್ಯರ ಸಲಹೆ ಪಡೆದು ಇಲಾಖೆಗೆ ಸಂಬಂಧಿಸಿದ ಹಲವು ಯೋಜನೆಗಳ ಪ್ರಗತಿ ಬಗ್ಗೆ ಅಧಿಕಾರಿಗಳ ಜೊತೆಗೆ ವೀಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.
ಈ ವಿಷಯವನ್ನು ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳೊಂದಿಗೆ ಹಂಚಿಕೊಂಡಿದ್ದು, ಅನೇಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೂರಾರು ಜನರು ಮೆಚ್ಚುಗೆಯೊಂದಿಗೆ ಇದನ್ನು ಶೇರ್ ಮಾಡಿದ್ದಾರೆ.
ಇಲಾಖೆಯ ಅಧಿಕಾರಿಗಳ ಜೊತೆಗೆ ಸಚಿವರು ಸಂವಾದ ನಡೆಸಿದ ಸಂದರ್ಭದಲ್ಲಿ “ವಿನಯ ಸಾಮರಸ್ಯ ಯೋಜನೆʼʼ, ದೀನದಯಾಳ್ ಉಪಾಧ್ಯಾಯ ವಿದ್ಯಾರ್ಥಿ ನಿಲಯಗಳ ಪ್ರಾರಂಭ, ಗಂಗಾ ಕಲ್ಯಾಣ ಡಿಬಿಟಿ ಅನುಷ್ಠಾನ, ವಿದ್ಯಾರ್ಥಿ ವೇತನ ಮಂಜೂರಾತಿ ಸಹಿತ ವಿವಿಧ ವಿಷಯ ಕುರಿತು ಚರ್ಚಿಸಿ, ಸಲಹೆ ನೀಡಿದ್ದಾರೆ.
ನಿಮ್ಮ ಈ ಕೆಲಸ ರಾಜ್ಯದ ಇತರ ಸಚಿವರಿಗೆ ಮಾದರಿ ಎಂದು ಕೆಲವರು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ಬೆನ್ನುತಟ್ಟಿದ್ದರೆ, ಇನ್ನು ಕೆಲವರು ವಿಶ್ರಾಂತಿ ಪಡೆಯಿರಿ, ಆರೋಗ್ಯದ ಕಡೆ ಗಮನ ನೀಡಿ ಎಂದು ಕಾಮೆಂಟ್‌ಗಳಲ್ಲಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ | Election 2023 | ಸಿಎಂ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಪೈಪೋಟಿ; ಡಜನ್ ಮೀರಿದ ಅರ್ಜಿ !