ಲಕ್ನೋ: ವೈಜ್ಞಾನಿಕವಾಗಿ ನಮ್ಮ ದೇಶ ಸಾಕಷ್ಟು ಮುಂದುವರಿದಿದೆ. ಕೋಟ್ಯಂತರ ಕಿ.ಮೀ. ದೂರ ಇರುವ ಚಂದ್ರನಲ್ಲಿಗೆ ರಾಕೆಟ್ ಕಳಿಸುದ್ದೇವೆ. ಭೂ ಗರ್ಭದಲ್ಲಿ ಏನೇನಿದೆ ಎನ್ನುವುದನ್ನು ಶೋಧಿಸಿದ್ದೇವೆ. ಹಾಗಿದ್ದರೂ ಕೆಲವೆಡೆ ಇನ್ನೂ ಮೂಢ ನಂಬಿಕೆ ಎನ್ನುವುದು ತಾಂಡವವಾಡುತ್ತಿದೆ ಎನ್ನುವುದು ವಿಷಾಧನೀಯ. ನಂಬಿಕೆ ಮತ್ತು ಮೂಢ ನಂಬಿಕೆ ಎನ್ನುವುದರ ನಡುವಿನ ಗೆರೆ ತೀರಾ ತೆಳುವಾದುದು. ಯಾರದೋ ಮಾತು ನಂಬಿ, ಅಸಾಧ್ಯವಾದುದನ್ನು ಸಾಧ್ಯವೆಂದು ನಂಬಿ ಮೌಢ್ಯ ಆಚರಣೆಯಲ್ಲಿ ತೊಡಗಿರುವವರು ಈಗಲೂ ಇದ್ದಾರೆ. ಇಷ್ಟೆಲ್ಲ ಯಾಕೆ ಹೇಳುತ್ತಿದ್ದೇವೆ ಎಂದರೆ ಉತ್ತರ ಪ್ರದೇಶದಲ್ಲಿ ಹಾವು ಕಚ್ಚಿದ ಯುವಕ ಗುಣಮುಖನಾಗಲೆಂದು ಎರಡು ದಿನಗಳ ಕಾಲ ಗಂಗಾ ನದಿಯಲ್ಲಿ ಆತನನ್ನು ನೇತಾಡಿಸಲಾಗಿದೆ. ಶರೀರದಲ್ಲಿರುವ ವಿಷ ಇಳಿದು ಆತ ಜೀವಂತವಾಗಿ ಎದ್ದು ಬರುತ್ತಾನೆ ಎನ್ನುವ ಮೂಢ ನಂಬಿಕೆಯೇ ಇದಕ್ಕೆ ಕಾರಣ (Viral News).
20 वर्षीय मोहित कुमार को सांप ने काट लिया। अंधविश्वास में फैमिली वालों ने उसको 2 दिन तक गंगा में लटकाए रखा। उन्हें ऐसा बताया गया था कि गंगा के बहते जल में शरीर को रखने से जहर उतर जाता है। लेकिन मोहित जिंदा नहीं हुआ। जिसके बाद उसका अंतिम संस्कार किया गया।
— Sachin Gupta (@SachinGuptaUP) May 2, 2024
📍बुलंदशहर, उत्तर प्रदेश pic.twitter.com/JDY5XupSl1
ಘಟನೆ ಹಿನ್ನೆಲೆ
ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಜೈರಾಮ್‌ಪುರ ಕುಡೇನಾ ಗ್ರಾಮದ, 20 ವರ್ಷದ ಮೋಹಿತ್ ಕುಮಾರ್‌ಗೆ ವಿಷದ ಹಾವು ಕಚ್ಚಿತ್ತು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ಚಿಕಿತ್ಸೆ ಮುಂದುವರಿಸಿದರೂ ಆರೋಗ್ಯ ಸುಧಾರಿಸಿರಲಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇತ್ತು. ವೈದ್ಯರೂ ಕೈ ಚೆಲ್ಲಿದ್ದರು. ಕೊನೆಗೆ ಆತನ ಕುಟುಂಬ ಸ್ಥಳೀಯ ಚಿಕಿತ್ಸಕನ ಮೊರೆ ಹೋಯಿತು. ಆತ ಸೂಚಿಸಿದ ವಿಧಾನವೇ ಈ ಗಂಗಾ ಚಿಕಿತ್ಸೆ.
ಯುವಕನ ಶರೀರವನ್ನು ಹಗ್ಗದಲ್ಲಿ ಕಟ್ಟಿ ಗಂಗಾ ನದಿಯಲ್ಲಿ ನೇತಾಡಿಸುವಂತೆ ಸ್ಥಳೀಯ ಚಿಕಿತ್ಸಕ ಸಲಹೆ ನೀಡಿದ್ದ. ಇದರಿಂದ ಯುವಕನ ಶರೀರದೊಳಕ್ಕೆ ಸೇರಿದ್ದ ವಿಷವೆಲ್ಲ ಇಳಿದು ಹೋಗಿ ಆತ ಮೊದಲಿನಂತಾಗುತ್ತಾನೆ ಎಂದು ತಿಳಿಸಿದ್ದ. ಅದರಂತೆ ಕುಟುಂಬಸ್ಥರು ಹರಿಯುವ ನದಿಯಲ್ಲಿ ಮೋಹಿತ್ ಕುಮಾರ್‌ನ ಶರೀರವನ್ನು ಅರ್ಧ ಮುಳುಗುವಂತೆ ನೇತಾಡಿಸಿದ್ದರು. ಸುಮಾರು ಎರಡು ದಿನಗಳ ಕಾಲ ಈ ʼಚಿಕಿತ್ಸೆʼ ಮುಂದುವರಿದಿತ್ತು. ಸದ್ಯ ಆತ ಮೃತಪಟ್ಟಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿದೆ.
ನೆಟ್ಟಿಗರು ಹೇಳಿದ್ದೇನು?
ವಿಡಿಯೊ ನೋಡಿದ ನೆಟ್ಟಿಗರಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅನೇಕರು ಈ ಶಾಕ್‌ನಿಂದ ಇನ್ನೂ ಹೊರ ಬಂದಿಲ್ಲ. ಈ ಆಚರಣೆಯ ಹಿಂದಿನ ವೈಜ್ಞಾನಿಕತೆಯನ್ನು ಹಲವರು ಪ್ರಶ್ನಿಸಿದ್ದಾರೆ. ʼʼವಿಜ್ಞಾನಮುಕ್ತ ಭಾರತಕ್ಕೆ ಸ್ವಾಗತʼʼ ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ʼʼಹಾವಿನ ವಿಷ ಹೇಗೆ ಶರೀರಕ್ಕೆ ಸೇರಿಕೊಳ್ಳುತ್ತದೆ ಮತ್ತು ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಶಾಲೆಗಳ ಪಠ್ಯದಲ್ಲಿ ಸೇರಿಸಬೇಕು. ಇದರಿಂದ ಇಂತಹ ಅನಾಚಾರಗಳನ್ನು ನಿಯಂತ್ರಿಸಬಹುದುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಅತ್ಯಂತ ನಾಚೆಕೆಗೇಡಿನ ಸಂಗತಿ. ಇದನ್ನು ಸೂಚಿಸಿದ ಸ್ಥಳೀಯ ಚಿಕಿತ್ಸಿಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ತೊಲಗಲಿ ಎಂದು ಮಗನನ್ನು ಗಂಗಾ ನದಿಯಲ್ಲಿ ಮುಳುಗಿಸಿದ ತಾಯಿ, ಬಾಲಕ ಸಾವು; Video ಇದೆ
ಕೆಲವು ದಿನಗಳ ಹಿಂದೆಯೂ ಇಂತಹದ್ದೆ ಘಟನೆ ನಡೆದಿತ್ತು. ಮಹಿಳೆಯೊಬ್ಬಳು ತನ್ನ ಕ್ಯಾನ್ಸರ್ ಪೀಡಿತ 4 ವರ್ಷದ ಮಗ ಗುಣಮುಖನಾಗಲೆಂದು ಗಂಗಾ ನದಿಯಲ್ಲಿ ಮುಳುಗಿಸಿದ್ದಳು. ಈ ವೇಳೆ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದ.