ಭಾರತದಲ್ಲಿ ಸಂಬಂಧದ ಪೈಕಿ ಅಳಿಯನಿಗೆ ವಿಶೇಷ ಸ್ಥಾನ. ಹಬ್ಬಹರಿದಿನಗಳಲ್ಲಿ ಅಳಿಯನನ್ನು ಮನೆಗೆ ಕರೆದು ಳಗಮಿಗೀ ಅಳಿಯನಿಗೂ ವಿಶೇಷ ಮರ್ಯಾದೆಯಿಂದ ಊಟ ಹಾಕುವುದೂ ಬಹುತೇಕ ಎಲ್ಲ ಜಾತಿ ಧರ್ಮಗಳಲ್ಲೂ ಇರುವ ಸಂಪ್ರದಾಯ. ಸಿಹಿ ಖಾರ ಸೇರಿದಂತೆ ಹಬ್ಬದಡುಗೆ ಮಾಡಿ ಬಡಿಸಿ ಸಂಭ್ರಮಿಸಿ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸುವುದು ಈ ಸಂಪ್ರದಾಯದ ಹೈಲೈಟು. ಹೀಗೆ ಅಳಿಯನಿಗೂ ಮಾವನಮನೆಗೂ ಇರುವ ಸಂಬಂಧದ ಝಲಕ್ ಸಾಹಿತ್ಯದಲ್ಲೂ ಸಾಕಷ್ಟು ಬಂದುಹೋಗಿವೆ. ಕೆ ಎಸ್ ನರಸಿಂಹಸ್ವಾಮಿಯವರ ರಾಯರು ಬಂದರು ಮಾವನ ಮನೆಗೆ ಕವಿತೆಯೂ ಕೂಡಾ ಇದಕ್ಕೆ ಒಂದು ಉದಾಹರಣೆ.
ಗಂಡುಮಕ್ಕಳ ಮನಸ್ಸನ್ನು ಗೆಲ್ಲಬೇಕಾದರೆ ಅವರ ಹೊಟ್ಟೆಯ ಮೂಲಕವಾಗಿ ಸಾಗಬೇಕು ಎಂಬ ಪುರಾತನ ನಾಣ್ಣುಡಿಯಿದೆ. ಆದರೆ ಇಲ್ಲಿ ಈ ನಾಣ್ಣುಡಿಯನ್ನು ಮಾವನ ಮನೆಯವರು ಗಂಭೀರವಾಗಿ ಪರಿಗಣಿಸಿದಂತಿದೆ. ಇದೀಗ ಮಾವನಮನೆಯ ಆತಿಥ್ಯ ಪಡೆಯುವ ಅಳಿಯಂದಿರ ಪೈಕಿ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಈ ಅಳಿಯನಷ್ಟು ಅದೃಷ್ಟಶಾಲಿ ಇನ್ನೊಬ್ಬರಿಲ್ಲ ಎಂಬ ಫೋಟೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾಕೆಂದರೆ ಈ ಬಾರಿಯ ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಮಾವನ ಮನೆಗೆ ವಿಶೇಷ ಆಹ್ವಾನಿತನಾಗಿ ಹೋದರೆ ಆತನ ಎದುರು ಹಾಸಿದ ಎಲೆಯಲ್ಲಿದ್ದುದ್ದು ಬರೋಬ್ಬರಿ ೩೭೯ ಭಕ್ಷ್ಯಗಳು. ಯಾರಿಗುಂಟು ಯಾರಿಗಿಲ್ಲ ಈ ಯೋಗ ಅಂತೀರಾ!
೩೭೯ ಬಗೆಬಗೆಯ ಅಡುಗೆಗಳಿದ್ದ ಭಾರೀ ಭೂರೀ ಭೋಜನದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದು ಅಳಿಯನಿಗೆ ಮಾವನ ಮನೆ ನೀಡಿದ ದಾಖಲೆಯ ಸಂಕ್ರಾಂತಿ ಮೃಷ್ಟಾನ್ನ ಭೋಜನವಾಗಿದ್ದು, ಈ ಹಿಂದೆ ಈ ದಾಖಲೆ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರಂನ ಒಂದು ಕುಟುಂಬ ಹೊಂದಿತ್ತು. ಅವರು ೩೬೫ ಬಗೆಯ ಅಡುಗೆಗಳನ್ನು ಸಂಕ್ರಾಂತಿಗಾಗಿ ತಮ್ಮ ಅಳಿಯನಿಗೆ ಮಾಡುವ ಮೂಲಕ ದಾಖಲೆ ಬರೆದಿದ್ದರು. ಈಗ ಅದಕ್ಕಿಂತಲೂ ಹೆಚ್ಚು ಅಂದರೆ ೩೬೯ ಬಗೆಯ ಭಕ್ಷ್ಯಗಳನ್ನು ತಯಾರು ಮಾಡುವ ಮೂಲಕ ಸಂಕ್ರಾಂತಿಯಂದು ಈ ಕುಟುಂಬ ಹಳೆ ದಾಖಲೆಯನ್ನು ಮುರಿದಿದೆ.
ಇದನ್ನೂ ಓದಿ | Viral Video: ಲಂಡನ್ ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ಬಾವುಟ ಪ್ರದರ್ಶಿಸಿದ ಬೀದರ್ ಹುಡುಗ; ಕನ್ನಡಿಗರು ಫುಲ್ ಖುಷ್
ಕುಸುಮ್ ರಾವ್ ಹಾಗೂ ಬುದ್ಧ ಮುರಳೀಧರ್ ನವ ದಂಪತಿಗಳಿಗಾಗಿ ಮಾಡಿದ ಸಂಕ್ರಾಂತಿಯ ವಿಶೇಷ ಅಡುಗೆ ಇದಾಗಿದ್ದು, ಅಳಿಯ ಮುರಳೀಧರ್ ಈ ಇಷ್ಟು ಬಗೆಯ ಅಡುಗೆಯನ್ನು ನೋಡಿ ಥ್ರಿಲ್ಲಾಗಿದ್ದಾರೆ. ಮುರಳೀಧರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ʻನಮ್ಮ ಮೊದಲ ಸಂಕ್ರಾಂತಿಗೆ ಮಾವನ ಮನೆಯಲ್ಲಿ ಭರ್ಜರಿ ಭೋಜನ ಉಂಡು ಬಂದೆ. ಒಟ್ಟು ೩೭೯ ಬಗೆಯ ಭಕ್ಷ್ಯಗಳು ಇದ್ದ ಈ ಸಂಕ್ರಾಂತಿ ಹಬ್ಬ ಅದ್ಭುತವಾಗಿತ್ತು. ಇದರಲ್ಲಿ ೪೦ ಬಗೆಯ ಪಲಾವು ಹಾಗೂ ರೈಸ್‌ಬಾತ್‌ಗಳು, ೨೦ ಬಗೆಯ ಚಟ್ನಿಗಳು, ೪೦ ಬಗೆಯ ಕರಿಗಳು, ೪೦ ಕರಿದ ತಿಂಡಿಗಳು, ೯೦ರಿಂದ ೧೦೦ ಬಗೆಯ ಸಿಹಿತಿಂಡಿಗಳು, ೭೦ ಬಿಸಿಬಿಸಿ ಪದಾರ್ಥಗಳು, ಜ್ಯೂಸುಗಳು ಹಾಗೂ ಪೇಯಗಳು ಇದರಲ್ಲಿತ್ತು. ನನ್ನ ಸುತ್ತ ಇಂತಹ ಅದ್ಭುತ ಜನರನ್ನು ಪಡೆಯಲು ನನ್ನಷ್ಟು ಅದೃಷ್ಟಶಾಲಿ ಇನ್ನೊಬ್ಬರಿಲ್ಲʼ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮುರಳೀಧರ್ ಅವರ ಮಾವನ ಮನೆಯವರು ಈ ಭಾರೀ ಮೃಷ್ಟಾನ್ನ ಭೋಜನ ತಯಾರಿಗೆ ಸುಮಾರು ೧೦ ದಿನಗಳ ಕಾಲ ತೆಗೆದುಕೊಂಡಿದ್ದರೆನ್ನಲಾಗಿದ್ದು, ಎಲ್ಲ ಅಡುಗೆಯನ್ನೂ ಈ ಅವಧಿಯಲ್ಲೇ ಮಾಡಲಾಗಿದೆ. ತಮ್ಮ ಅಳಿಯ ಎಲ್ಲ ೩೭೯ ಬಗೆಯನ್ನೂ ತಿಂದು ರುಚಿ ನೋಡಿದ್ದು, ಇದರಿಂದ ಸಂತುಷ್ಟರಾಗಿದ್ದೇವೆ. ಆತನಿಗೆ ಆಹಾರದ ಬಗೆಗೆ ಒಳ್ಳೆಯ ಅಭಿರುಚಿ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | Viral news: ಹಳೆಪ್ರೇಮಿಯ ಮೇಲೆ ಸಿಟ್ಟಾ? ಹಾಗಿದ್ದರೆ ಕೆನಡಾದ ಜಿರಳೆಗೆ ಪ್ರೇಮಿಯ ಹೆಸರಿಡಿ!