ಇತರರಿಗೆ ಗೌರದ ಹಾಗೂ ಪ್ರೀತಿ ಕೊಡುವುದು ಯಾವತ್ತಿಗೂ ಬಹಳ ಒಳ್ಳೆಯ ಮಾನವೀಯ ಗುಣ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಪರಸ್ಪರ ಪ್ರೀತ್ಯಾದರಗಳು ವ್ಯಕ್ತಿಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ನೆರವಾಗುತ್ತದೆ. ಆದರೂ ವೃತ್ತಿಯೆಂಬುದು ಬಹಳ ಸಲ, ಗೌರವ, ಪ್ರೀತಿ ನಂಬಿಕೆಗಳ ಮಧ್ಯೆ ಗೋಡೆಗಳನ್ನಿರಿಸುತ್ತದೆ. ಯಾರ ವೃತ್ತಿ ಏನೇ ಇರಲಿ ಪರಸ್ಪರ ಪ್ರೀತಿ ಗೌರವಗಳು ಅತೀ ಮುಖ್ಯ ಎಂದು ಎಷ್ಟೇ ಹೇಳಿದರೂ ಅವು ಪುಸ್ತಕದ ಬದನೆಕಾಯಿಯಾಗಿಯೇ ಉಳಿಯುತ್ತದೆ. ಈ ನಿಟ್ಟಿನಲ್ಲಿ ಇಂಗ್ಲೆಂಡ್‌ನ ಚಹಾದಂಗಡಿಯೊಂದು ವಿನೂತನ ಹೆಜ್ಜೆಯಿರಿಸಿದೆ. ಜನರಲ್ಲಿ ಪರಸ್ಪರ ಪ್ರೀತಿ ಗೌರವಗಳನ್ನು ಹೆಚ್ಚಿಸಲು ಆ ಬಗ್ಗೆ ಅರಿವು ಮೂಡಿಸಲು ಸಣ್ಣ ಕಾಣಿಕೆಯೊಂದನ್ನು ನೀಡಲು ಮುಂದಾಗಿದೆ. ಇದು ಜನರನ್ನು ತಮ್ಮ ವ್ಯಕ್ತಿತ್ವದೆಡೆಗೊಮ್ಮೆ ತಿರುಗಿ ನೋಡುವಂತೆ ಮಾಡುವ ಕಣ್ತೆರೆಸುವ ವಿಧಾನವಾಗಿ ಕಾಣುತ್ತಿದ್ದು ಬಹುತೇಕರ ಮೆಚ್ಚುಗೆಗೆ (viral photo) ಪಾತ್ರವಾಗಿದೆ.
ಇಂಗ್ಲೆಂಡ್‌ನ ಪ್ರಿಸ್ಟನ್ ಎಂಬಲ್ಲಿನ ಚಹಾದಂಗಡಿ ತನ್ನ ಅಂಗಡಿಯಲ್ಲಿ ಹೊಸತೊಂದು ನಿಯಮವನ್ನು ಜಾರಿಗೆ ತಂದಿದೆ. ಇದು ಗ್ರಾಹಕರು ತನ್ನ ಬಳಿ ಗೌರವದಿಂದ ಮಾತನಾಡಿಸಿದರೆ ಬಿಲ್‌ನಲ್ಲಿ ಡಿಸ್ಕೌಂಟ್ ಕೊಡುವುದಾಗಿ ಘೋಷಿಸಿದೆ. ಆ ಮೂಲಕ ಇತರರನ್ನು ನೀವು ಗೌರವಿಸುವ ಮೂಲಕ ಗೌರವ ಪಡೆಯಿರಿ ಎಂಬ ನಾಣ್ಣುಡಿಯನ್ನು ನಿಜಾರ್ಥದಲ್ಲಿ ಅಳವಡಿಸಿಕೊಂಡಿದೆ.
29ರ ಹರೆಯದ ಉಸ್ಮಾನ್ ಹುಸೇನ್ ಎಂಬವರು ಇತ್ತೀಚೆಗೆ ಆರಂಭಿಸಿದ ಚಾಯ್ ಸ್ಟಾಪ್ ಎಂಬ ಚಹಾದಂಗಡಿಯೇ ಹೀಗೆ ತನ್ನ ವಿಶೇಷ ಐಡಿಯಾದಿಂದ ಸುದ್ದಿಯಾದ ಅಂಗಡಿ. ಈತ ತನ್ನ ಅಂಗಡಿಯ ನೋಟೀಸ್ ಬೋರ್ಡಿನಲ್ಲಿ ಹೀಗೊಂದು ಫಲಕ ತೂಗುಹಾಕಿದ್ದಾರೆ. ಅದರ ಪ್ರಕಾರ, “ದೇಸೀ ಚಾಯ್- 5 ಯೂರೋ, ದೇಸೀ ಚಾಯ್ ಪ್ಲೀಸ್- 3 ಯೂರೋ, ಹೆಲೋ, ದೇಸೀ ಚಾಯ್ ಪ್ಲೀಸ್- 1.90 ಯೂರೋ” ಎಂದು ಬೆಲೆಯನ್ನು ನಿಗದಿ ಮಾಡಲಾಗಿದೆ.
ಕೇವಲ ದೇಸೀ ಚಾಯ್ ಎಂದು ಆರ್ಡರ್ ಕೊಟ್ಟು ಕನಿಷ್ಟ ಮರ್ಯಾದೆಯನ್ನೂ ಕೊಡದೆ, ತಂದು ಕೊಡುವವನೆಡೆಗೊಂದು ಕನಿಷ್ಟ ಮುಗುಳ್ನಗೆಯನ್ನೂ ಬೀರದೆ ಚಹಾ ಕುಡಿವವನ ಸೊಕ್ಕಿಗೆ ೫ ಯೂರೋ ನಿಗದಿ ಮಾಡಿದ್ದರೆ, ʻದೇಸೀ ಚಾಯ್ ಪ್ಲೀಸ್ʼ ಎಂದು ಸಾಧಾರಣವಾಗಿ ಮಾತಾಡಿಸುವ ಗ್ರಾಹಕನಿಗೆ ೩ ಯೂರೋ ಹಾಗೂ, ಬಹಳ ಚಂದಕ್ಕೆ, ʻಹಲೋʼ ಹೇಳಿ, ಆಮೇಲೆ ʻದೇಸೀ ಚಾಯ್ ಪ್ಲೀಸ್ʼ ಎನ್ನುವ ಪ್ರೀತ್ಯಾದರಗಳನ್ನು ತೋರುವ ಮಂದಿಗೆ ೧.೯೦ ಯೂರೋ ಎಂಬುದೇ ಇಲ್ಲಿ ತೂಗುಹಾಕಲಾದ ಒಕ್ಕಣೆ. ಆ ಮೂಲಕ ನಾವು ಹೇಗೆ ಮಾತಾಡಬೇಕು, ಸಾಮಾಜಿಕವಾಗಿ ಎಲ್ಲರನ್ನೂ ಹೇಗೆ ಪ್ರೀತಿ ವಿಶ್ವಾಸ ಗೌರವದಿಂದ ಕಾಣಬೇಕು ಎಂಬ ಸಂದೇಶವನ್ನು ಇದು ಮೌನವಾಗಿಯೇ ದಾಟಿಸುತ್ತಿದೆ.
ವಿಶೇಷವೆಂದರೆ, ಈ ಬೋರ್ಡು ನೋಡಿಯೋ ಏನೋ, ಈವರೆಗೆ ಈ ಚಹಾದಂಗಡಿಗೆ ದರ್ಪದಿಂದ ಚಹಾ ಆರ್ಡರು ಮಾಡಿ ಕೂತಿಲ್ಲ. ಎಲ್ಲರೂ ಚಹಾದಂಗಡಿ ಮಾಲಿಕ ಬಯಸುವಂತೆಯೇ, ʻಹಲೋ, ದೇಸೀ ಚಾಯ್ ಪ್ಲೀಸ್ʼ ಎಂದು ಚಂದಕ್ಕೇ ಮಾತನಾಡಿಸಿದ್ದಾರೆ. ಕೇವಲ ಧನಾತ್ಮಕ ಪರಿಸರ ಮಾತ್ರ ನಾವಿಲ್ಲಿ ಬಯಸುತ್ತೇವೆ ಎನ್ನುವ ಈ ಅಂಗಡಿ ಮಾಲಿಕ, ತನ್ನ ನಿಲುವನ್ನು, ಸಮಾಜದಲ್ಲಿ ಎಲ್ಲರೂ ಪ್ರತಿಯೊಬ್ಬರ ವೃತ್ತಿಗೆ ಗೌರವ ಕೊಟ್ಟು ಗೌರವ ಪಡೆಯಬೇಕೆನ್ನುವ ಗುಣವನ್ನು ತಣ್ಣಗೆ ಹೇಳಿದ್ದಾರೆ.
ಇದನ್ನೂ ಓದಿ: Viral video: ಪ್ರವಾಸಿಗರ ವಾಹನ ಅಡ್ಡಗಟ್ಟಿ ನಿಂತ ಆನೆ; ಗಣಪತಿ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟನಾ ಗಜರಾಜ!
ಆರಂಭದಲ್ಲಿ ಬಹಳ ಕೆಟ್ಟದಾಗಿ ವರ್ತಿಸುವ ಗ್ರಾಹಕರು ಅಂಗಡಿಗೆ ಬರುತ್ತಿದ್ದರು. ಇದರಿಂದ ಕೆಲಸ ಮಾಡಲು ಚೈತನ್ಯ ಸಿಗುವುದಿಲ್ಲ. ಕೆಲಸ ಮಾಡುವಲ್ಲಿ ಉತ್ತಮ ವಾತಾವರಣವಿದ್ದರೆ ಮಾತ್ರ ಪ್ರತಿಯೊಬ್ಬರಿಗೂ ಕೆಲಸದಲ್ಲಿ ಶ್ರದ್ಧೆ ಪ್ರೀತಿ ಬರುತ್ತದೆ. ಪ್ರೀತಿ ಗೌರವದಿಂದ ಮಾತಾಡಿ ಎಂದು ಬಾಯಿ ಮಾತಲ್ಲಿ ಹೇಳಿದರೆ ಜಗಳವಾಗುತ್ತಿತ್ತು. ಇಂಥ ವಾತಾವರಣ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೇ ಈ ಐಡಿಯಾ ಮಾಡಿದ್ದೇನೆ. ಇದಾದ ಮೇಲೆ ಒಬ್ಬರೂ ಕೆಟ್ಟದಾಗಿ ಇಲ್ಲಿ ವರ್ತಿಸಿಲ್ಲ. ಪ್ರೀತಿ, ಗೌರವ ಕೊಟ್ಟು ತೆಗೆದುಕೊಳ್ಳಬೇಕು ಎಂಬುದಷ್ಟೇ ಸತ್ಯ. ಅದನ್ನು ಈ ಮೂಲಕ ವಿನೂತನವಾಗಿ ಹೇಳಿದ್ದೇನೆ ಅಷ್ಟೇ ಎಂದವರು ಹೇಳಿದ್ದಾರೆ.
ಹೀಗೆ ಮಾಡುವುದಕ್ಕೆ ಅಮೆರಿಕದ ಕೆಫೆಯೊಂದು ಮಾಡಿದ್ದ ಫೇಸ್‌ಬುಕ್ ಪೋಸ್ಟ್ ಕಾರಣ ಎಂದು ವಿವರಿಸಿರುವ ಅವರು. ಬಹಳ ಕಾಲ ಅದನ್ನು ಸೇವ್ ಮಾಡಿ ಇಟ್ಟಿದ್ದೆ. ಕೊನೆಗೂ ಪ್ರಯೋಗ ಮಾಡಲು ನಿರ್ಧರಿಸಿದೆ. ನಿರ್ಧಾರ ಉತ್ತಮ ಫಲ ಕೊಟ್ಟಿದೆ ಎಂದವರು ವಿವರಿಸಿದ್ದಾರೆ.
ಇದನ್ನೂ ಓದಿ: Viral Video : ಮದುಮಗಳಿಂದ ಸಾಮಿ ಸಾಮಿ ಡ್ಯಾನ್ಸ್; ವೈರಲ್ ಆಯ್ತು ವಿಡಿಯೊ