Site icon Vistara News

Viral post | ಬೆಂಗಳೂರು ಆಟೋ ಡ್ರೈವರ್‌ ಟೆಕ್‌ ಜ್ಞಾನಕ್ಕೆ ಸಾಫ್ಟ್‌ವೇರ್‌ ಮಂದಿ ಫಿದಾ!

auto driver

ಬೆಂಗಳೂರು ಹೇಳಿ ಕೇಳಿ ಐಟಿ ಸಿಟಿ. ಇಲ್ಲಿರುವ ಹಲವಾರು ಐಟಿ ಕಂಪೆನಿಗಳಿಂದಾಗಿ, ಸಾಫ್ಟ್‌ವೇರ್‌ ಜಗತ್ತಿನಿಂದಾಗಿ ಬೆಂಗಳೂರಿಗರೂ ಯಾವಾಗಲೂ ಟೆಕ್ನಾಲಜಿಯಲ್ಲೂ ಮುಂದು. ಇಂಥ ಟೆಕ್‌ ಸಿಟಿಯಲ್ಲೊಂದು ನಡೆದ ಘಟನೆಯೊಂದು ಇದೀಗ ಎಲ್ಲರ ಗಮನ ಸೆಳೆದಿದೆ. ಬೆಂಗಳೂರಿನ ಆಟೋವಾಲಾಗಳ ಬಗೆಗೆ ಯಾವಾಗಲೂ ಇರುವ ದೂರುಗಳಿಗೆ ವೈರುಧ್ಯದ ಕಥೆ ಇದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಟೋ ಡ್ರೈವರ್‌ ಬಗೆಗೆ ಮೆಚ್ಚುಗೆಯ ನುಡಿಗಳು ಕೇಳಿ ಬರುತ್ತಿವೆ. ಜೊತೆಗೆ ಆಟೋ ಡ್ರೈವರುಗಳು ಇಂದು ಹೆಚ್ಚು ಹೆಚ್ಚು ಟೆಕ್ನಾಲಜಿಯ ಬಳಕೆಯ ಬಗ್ಗೆ ಅರಿವು ಹೊಂದುತ್ತಿರುವುದಕ್ಕೆ ಇದೊಂದು ಉದಾಹರಣೆಯಾಗಿಯೂ ನಿಂತಿದೆ.

ಶಿದಿಕಾ ಎಂಬ ಐಟಿ ಉದ್ಯೋಗಿ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಘಟನೆಯೊಂದರ ವಿವರವನ್ನು ಪೋಸ್ಟ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆಕೆಯ ಪೋಸ್ಟ್‌ ಪ್ರಕಾರ, ʻಆಟೋನಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಾನು ನನ್ನ ಏರ್‌ಪಾಡ್‌ಗಳನ್ನು ಕಳೆದುಕೊಂಡೆ. ಅರ್ಧ ಗಂಟೆ ಬಳಿಕ ನನ್ನನ್ನು ಎಲ್ಲಿ ಬಿಟ್ಟಿದ್ದನೋ ಅಲ್ಲಿಗೆ ಬಂದ ನಾನು ಪ್ರಯಾಣಿಸಿದ ಆಟೋ ಡ್ರೈವರ್‌ ನನ್ನ ದುಬಾರಿ ಬೆಲೆಯ ಆಪಲ್‌ ಕಂಪನಿಯ ಏರ್‌ಪಾಡ್‌ಗಳನ್ನು ವಾಪಾಸ್‌ ಕೊಟ್ಟು ಹೋಗಿದ್ದಾನೆʼ ಎಂದು ಖುಷಿಯಿಂದ ತನ್ನ ಅನುಭವ ಹಂಚಿಕೊಂಡಿದ್ದಾರೆ.

ʻನಾನು ಕಚೇರಿ ತಲುಪಿ ಅರ್ಧ ಗಂಟೆ ಕಳೆದ ಮೇಲೆ ನನಗೆ ಸೆಕ್ಯೂರಿಟಿಯಿಂದ ಕರೆ ಬಂತು. ಏನೆಂದು ನೋಡಲು ಹೋದರೆ ನನಗೇ ಆಶ್ಚರ್ಯವಾಯ್ತು. ಯಾಕೆಂದರೆ ಆಟೋ ಡ್ರೈವರ್‌ ನಾನು ಕಳೆದುಕೊಂಡ ಏರ್‌ಪಾಡ್‌ ಕೊಟ್ಟು ಹೋಗಲು ಬಂದಿದ್ದರು. ನಿಜಕ್ಕೂ ಇದು ನನ್ನ ಬೆಂಗಳೂರು ದಿನಗಳ ಅತ್ಯಂತ ಖುಷಿಯ ದಿನಗಳುʼ ಎಂದಾಕೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Viral Video | ಬಾಲಿಯಲ್ಲಿ ಸಾಂಪ್ರದಾಯಿಕ ಸಂಗೀತ ಸಾಧನ ಬಾರಿಸಿದ ಮೋದಿ, ಇಲ್ಲಿದೆ ವಿಡಿಯೊ

ಕೇವಲ ಇಷ್ಟೇ ಆಗಿದ್ದರೆ, ಆಟೋ ಡ್ರೈವರ್‌ನ ಪ್ರಾಮಾಣಿಕತೆಯಷ್ಟೆ ಇಲ್ಲಿ ಮುಖ್ಯವಾಗಿ ಕಾಣುತ್ತಿತ್ತು. ಆದರೆ, ಪ್ರಾಮಾಣಿಕತೆಯ ಜೊತೆಗೆ ಆತ ಆಕೆಯ ಏರ್‌ಪಾಡ್‌ ಯಾರದ್ದೆಂದು ಕಂಡುಹಿಡಿಯಲು ಅನುಸರಿಸಿದ ತಂತ್ರ ಎಲ್ಲರನ್ನೂ ಸೆಳೆದಿದೆ. ಯಾಕೆಂದರೆ, ಆತನಿಗೂ ಈ ಏರ್‌ಪಾಡ್‌ ಯಾರದ್ದೆಂದು ಕಂಡುಹಿಡಿಯುವುದು ಸುಲಭವಾಗಿರಲಿಲ್ಲ. ಆತ ಇದನ್ನು ತನ್ನ ಫೋನ್‌ಗೆ ಕನೆಕ್ಟ್‌ ಮಾಡಿಕೊಂಡು ಹೆಸರಿನ ವಿವರ ತಿಳಿದುಕೊಂಡು, ತನ್ನ ಫೋನ್‌ಪೇ ವ್ಯವಹಾರಗಳ ಮೂಲಕ ಈಕೆಯ ಬಗೆಗೆ ತಿಳಿದುಕೊಂಡು ಕೊನೆಗೆ ಆಕೆಯ ಕಚೇರಿಗೆ ಬಂದು ಕೊಟ್ಟು ಹೋಗಿದ್ದಾರೆ ಎಂದು ಆಕೆ ವಿವರಿಸಿದ್ದಾರೆ.

ಸಂತೋಷದ ಕಣ್ಣೀರಿನ ಇಮೋಜಿ ಹಾಕಿಕೊಂಡು ಆಕೆ ಈ ವಿಚಾರವನ್ನು ಶೇರ್‌ ಮಾಡಿದ್ದು ಆಟೋ ರಿಕ್ಷಾ ಡ್ರೈವರ್‌ನ ಈ ನಡತೆಯಿಂದ ತನಗೆ ಹೃದಯ ತುಂಬಿ ಬಂದಿದೆ ಎಂದು ಹೇಳಿಕೊಂಡಿದ್ದಾಳೆ.

ಈಕೆಯ ಪೋಸ್ಟ್‌ಗೆ ಸಾವಿರಾರು ಮಂದಿ ಲೈಕ್‌ ಮಾಡಿದ್ದು ಕಾಮೆಂಟ್‌ ಕೂಡಾ ಮಾಡಿದ್ದಾರೆ. ಬಹಳಷ್ಟು ಮಂದಿ ಆಟೋ ರಿಕ್ಷಾ ಡ್ರೈವರನ ಟೆಕ್ನಾಲಜಿ ಬಳಕೆಯ ಜ್ಞಾನಕ್ಕೆ ಫಿದಾ ಆಗಿದ್ದಾರೆ. ಆತ ಇದು ಯಾರದ್ದು ಎಂದು ಕಂಡು ಹಿಡಿಯಲು ಮಾಡಿದ ತಂತ್ರಕ್ಕೆ ಮನಸೋತಿದ್ದಾರೆ. ಆಟೋ ಡ್ರೈವರ್‌ ಬಹಳ ಸ್ಮಾರ್ಟ್‌ ಎಂದು ಅನೇಕರು ಪ್ರತಿಕ್ರಿಯಿಸಿದ್ದು, ಕೆಲವರು ಬೆಂಗಳೂರಿನಲ್ಲಿ ಎಂಜಿನಿಯರ್‌ಗಳೂ ಟೆಕ್ನಾಲಜಿ ಪ್ರಿಯರೋ, ಅಥವಾ ಆಟೋವಾಲಾಗಳೋ ಎಂದಿದ್ದಾರೆ. ಇನ್ನೂ ಒಬ್ಬರು, ಬಹಳ ಸಾರಿ ನಮಗಿಂತ ಬೆಂಗಳೂರಿನ ಆಟೋವಾಲಾಗಳೇ ಟೆಕ್ನಾಲಜಿಯ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿದ್ದಾರೆ ಎಂದಿದ್ದಾರೆ. ಪ್ರಾಮಾಣಿಕತೆಯೊಂದಿಗೆ ಕಾಲಕ್ಕೆ ತಕ್ಕಂತೆ ಸ್ಮಾರ್ಟ್‌ ಆಗಿರುವ ಕಾರಣದಿಂದ ಬಹುಬೇಗನೆ ಕಳೆದ ವಸ್ತುವೂ ಮರಳಿ ಸಿಕ್ಕಿರುವುದು ಇಲ್ಲಿನ ವಿಶೇಷ.

ಬೆಂಗಳೂರಿನ ಆಟೋ ಡ್ರೈವರುಗಳ ಇಂಥ ಟೆಕ್‌ ಜ್ಞಾನ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಾ ಜನಮನ ಸೆಳೆಯುತ್ತಿರವುದು ವಿಶೇಷ.

ಇದನ್ನೂ ಓದಿ | Viral video | ಚಿಕಾಗೋನಲ್ಲಿ ಭಾರತೀಯನ ಮದುವೆಗೆ ಸೀರೆಯುಟ್ಟು ಬಿಂದಿಯಿಟ್ಟು ಬಂದ ಗೆಳೆಯರು!

Exit mobile version