Site icon Vistara News

Viral post | ಮೊದಲ ಬಾರಿಗೆ ವಿಮಾನ ಹತ್ತಲು ಬಂದ ಹಳ್ಳಿ ದಂಪತಿಗಳಿಗೇನಾಯ್ತು: ಒಂದು ಹೃದಯಸ್ಪರ್ಶಿ ಪೋಸ್ಟ್‌!

viral post

ಸಾಮಾನ್ಯರ ಪಾಲಿಗೆ ಯಾವಾಗಲೂ ವಿಮಾನವೆಂಬುದು ಗಗನ ಕುಸುಮ. ಹೆಚ್ಚಿರುವ ದರ, ಅದು ಬಿಚ್ಚಿಡುವ ಲಕಲಕ ಲೋಕ, ಅದು ತೆರೆದಿಡುವ ನಮ್ಮದಲ್ಲದ್ದು ಅನಿಸುವ ಲೋಕ, ಯಾರಿಗೆ ಯಾರೂ ಸಂಬಂಧವೇ ಇಲ್ಲ ಎನಿಸುವಂತ ವಾತಾವರಣ ಎಲ್ಲವೂ ನಮ್ಮೂರುಗಳ ಬಸ್ಸು, ರೈಲುಗಳಿಗಿಂತ ಬೇರೆಯೇ ಆಗಿಯೇ ಕಾಣಿಸುತ್ತದೆ. ರೈಲಿನಲ್ಲಿ ಹತ್ತಿ ಕೂತ ಕೂಡಲೇ ಈ ಮೊದಲು ಗುರುತು ಪರಿಚಯವೇ ಇರದಿದ್ದ ಪಕ್ಕದ ಸೀಟಿನವರ ಜೊತೆ ಪಕ್ಕದ ಮನೆಯವರಂತೆ ಆಪ್ತವಾಗಿ ಮಾತನಾಡಿಸಲು ಶುರು ಮಾಡಿಬಿಡುವಂತೆ ವಿಮಾನದಲ್ಲಿ ಸಾಧ್ಯವಾಗುವುದಿಲ್ಲ ಎಂಬ ಕಾರಣವೂ ಇರಬಹುದು, ಅಥವಾ, ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಭಾಷೆಯ ಸಮಸ್ಯೆಯೂ ಇರಬಹುದು, ಮೊದಲ ಬಾರಿಗೆ ವಿಮಾನ ಹತ್ತಲು ಬಂದ ಸಾಮಾನ್ಯರು ವಿಮಾನ ನಿಲ್ದಾಣದಲ್ಲಿ ಮೇಲೆ ಕೆಳಗೆ ನೋಡಬೇಕಾಗುವ ಪರಿಸ್ಥಿತಿ ಎದುರಾಗುವುದು ಸಾಮಾನ್ಯ.

ಇಲ್ಲೊಬ್ಬ ಇಂಥ ಸಾಮಾನ್ಯರಿಗೆ ಅಸಾಮಾನ್ಯವಾಗಿ ಸಹಾಯ ಮಾಡಿದ್ದಾನೆ. ಅಮಿತಾಬ್‌ ಶಾ ಎಂಬವರು ಮಾಡಿದ ಹೃದಯಸ್ಪರ್ಶಿ ಘಟನೆಯ ಈ ಪೋಸ್ಟ್‌ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಅಮಿತಾಬ್‌ ಅವರು ಕಾನ್‌ಪುರದಿಂದ ದೆಹಲಿಗೆ ವಿಮಾನಕ್ಕೆ ಕಾಯುತ್ತಿದ್ದಾಗ ದಂಪತಿಗಳು ವಿಮಾನ ನಿಲ್ದಾಣದಲ್ಲಿ ಏನೂ ಅರಿಯದವರಂತೆ ದೂರದಲ್ಲಿ ನಿಂತಿದ್ದು ಕಾಣಿಸಿತು. ಅಮಿತಾಬ್‌ ಅವರು ಹೇಳುವಂತೆ, “ನಾನು ವಿಮಾನ ನಿಲ್ದಾಣದಲ್ಲಿ ದೂರದಲ್ಲಿ ಈ ದಂಪತಿಗಳನ್ನು ನೋಡಿದೆ. ಬಹಳ ಸುಸ್ತಾದವರಂತೆ ಕಂಡ ಅವರು, ವಿಮಾನದಲ್ಲಿ ಮೊದಲ ಬಾರಿಗೆ ಪಯಣಿಸಲು ಬಂದವರಂತೆ ಕಂಡರು. ಏನೂ ಅರ್ಥವಾಗದವರಂತೆ ಗೊಂದಲದಲ್ಲಿದ್ದರು. ಅವರಿಗೆ ಇಂಗ್ಲೀಷ್‌ ಬರುತ್ತಿರಲಿಲ್ಲವಾದ್ದರಿಂದ ಅಲ್ಲಿ ಎಲ್ಲಿ ಏನು ಕೇಳಬೇಕು, ಎಲ್ಲಿಗೆ ಹೋಗಬೇಕು ಎಂದು ಅವರಿಗೆ ಅರಿವಿರಲಿಲ್ಲ. ನಾನು ಅವರ ಬಳಿ ಹೋಗಿ, ನನ್ನನ್ನು ಹಿಂಬಾಲಿಸಿ ಎಂದೆ. ಅವರು ಬಹುಶಃ ನಾನು ವಿಮಾನದ ಸಿಬ್ಬಂದಿ ಎಂದುಕೊಂಡು ನನ್ನ ಜೊತೆಗೇ ಬಂದರು. ನನ್ನ ಸೀಟಿನ ಮುಂಭಾಗದಲ್ಲಿ ಅವರ ಸೀಟು ಇತ್ತು. ಬಹಳ ಬಳಲಿದ್ದರು. ಉತ್ತರ ಪ್ರದೇಶದ ಯಾವುದೋ ಹಳ್ಳಿಯಿಂದ ಎಂಟು ಗಂಟೆಗಳ ಕಾಲ ಬಸ್ಸಿನಲ್ಲಿ ಪ್ರಯಾಣ ಮಾಡಿ ಬಂದಿದ್ದರು.

ಹತ್ತಿದ ಮೇಲೆ ಅವರು ನನ್ನ ಬಳಿ ಒಂದು ಫೋಟೋ ತೆಗೆಯುವಿರಾ ಎಂದರು. ಫೋಟೋ ತೆಗೆದು ಮಗಳಿಗೆ ವಾಟ್ಸಾಪ್‌ ಮಾಡಿದರೆ, ನಾವು ಸೇಫ್‌ ಆಗಿ ವಿಮಾನ ಹತ್ತಿರುವುದು ಮಗಳಿಗೆ ತಿಳಿಯುತ್ತದೆ ಎಂದರು. ಅವರಿಗೆ ಈ ಫೋಟೋ ತೆಗೆದು ಕೊಟ್ಟೆ.

ಇದನ್ನೂ ಓದಿ | Viral video | ಕೆಸರಿನಲ್ಲಿ ಹೂತುಹೋದ ಆನೆಮರಿಯನ್ನು ರಕ್ಷಿಸಿದ ಹುಡುಗಿ!

ಅಷ್ಟರಲ್ಲಿ ವಿಮಾನದಲ್ಲಿ ತಿಂಡಿ ಬಂತು. ಅವರು ಬೇಡ ಎಂದರು. ಎಂಟು ಗಂಟೆಗಳ ಪ್ರಯಾಣದಿಂದ ಅವರು ಬಹಳ ಬಳಲಿದ್ದರು ಹಾಗೂ ಹಸಿವಾದಂತೆ ಅವರು ಕಾಣುತ್ತಿದ್ದರು. ಆದರೂ ಬೇಡ ಎಂದು ಅವರು ಗೊಂದಲದಲ್ಲಿ ಕೂತಿದ್ದರು. ನಾನು ಪರಿಚಾರಕಿಯನ್ನು ಕರೆದು ಆ ಇಬ್ಬರಿಗೆ ಪನೀರ್‌ ಸ್ಯಾಂಡ್‌ವಿಚ್‌ ಹಾಗೂ ಜ್ಯೂಸ್‌ ನೀಡಲು ಹೇಳಿದೆ. ಹಾಗೂ ʼನಾನು ಕೊಡಿಸಿದ್ದೆಂದು ಹೇಳಬೇಡಿ, ಇದು ನಿಮಗೆ ನಮ್ಮ ಕಡೆಯಿಂದ ಉಡುಗೊರೆ ಎಂದಷ್ಟೇ ಹೇಳಿʼ ಎಂದೆ. ಅವರು ಸಂತೋಷದಿಂದ ತಿಂದರು.

ಇಳಿಯುವ ಸಮಯ ಬಂದಾಗ ದಂಪತಿಗಳು ನನ್ನತ್ತ ನೋಡಿ ಮುಗುಳ್ನಕ್ಕರು. ನಾನೂ ಪ್ರತಿಯಾಗಿ ಮುಗುಳ್ನಕ್ಕೆ. ಒಂದು ಚಂದದ ಗುರುವಾರ ಹೀಗೆ ಕಳೆಯಿತು. ಪುಟ್ಟ ಪುಟ್ಟ ಖುಷಿಗಳನ್ನು ಹಂಚಲು ಅವಕಾಶ ಸಿಕ್ಕಾಗ ನಮ್ಮ ಸುತ್ತಲ ಪ್ರಪಂಚವೂ ನಮಗೆ ಖುಷಿಯನ್ನು ಹಂಚುತ್ತದೆ, ಅಲ್ಲವೇ!” ಎಂದು ಅವರು ಬರೆದುಕೊಂಡಿದ್ದಾರೆ.

ಈ ಅನುಭವವನ್ನು ಬರೆದ ಅಮಿತಾಬ್‌ ಅವರ ಪೋಸ್ಟ್‌ಗೆ ಹಲವಾರು ಕಾಮೆಂಟುಗಳು ಬಂದಿದ್ದು, ಒಬ್ಬರು, ಒಂದೊಳ್ಳೆ ಕೆಲಸ ಮಾಡಿದ್ದೀರಿ. ಜನರ ಮುಖದಲ್ಲಿ ಸಂತೋಷ ಹಂಚುವುದು ಖುಷಿಯ ಕೆಲ. ಹಾಗೂ, ವಿಮಾನ ಪ್ರಯಾಣ ಎಲ್ಲರಿಗೂ ಸಿಗುತ್ತಿದೆ ಹಾಗೂ ಈ ಅನುಭವಕ್ಕೆ ಹೊಸದಾಗಿ ತೆರೆದುಕೊಳ್ಳುವವರಿಗೆ ಸಹಾಯ ಮಾಡುವುದನ್ನು ಈ ಪೋಸ್ಟ್‌ ಮೂಲಕ ಇತರರಿಗೂ ತಿಳಿಸಿಕೊಟ್ಟದ್ದು ಒಳ್ಳೆಯ ನಡೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಇನ್ನೊಬ್ಬರು, ಇದೊಂದು ಹೃದಯಸ್ಪರ್ಶಿ ನಡೆ. ಎಲ್ಲ ಭಾರತೀಯರೂ ಭಾರತದಲ್ಲಿ ಸಹಜವಾಗಿ ಯಾವುದೇ ಆತಂಕವಿಲ್ಲದೆ ಓಡಾಡುವಂತಾಗಬೇಕು. ಅಂಥ ಪರಿಸ್ಥಿತಿ ನಿರ್ಮಾಣವಾಗಬೇಕಿದ್ದರೆ, ಒಬ್ಬರಿಗೊಬ್ಬರು ಹೀಗೆ ಸಹಾಯ ಮಾಡಬೇಕು. ವಿಮಾನದಲ್ಲಿ ಸಾಮಾನ್ಯರಿಗೆ ತಾವು ಪರಕೀಯರೆಂಬ ಭಾವನೆ ಬರುವಂತೆ ಪರಿಸ್ಥಿತಿ ಇರಬಾರದುʼ ಎಂದಿದ್ದಾರೆ.

ಇದನ್ನೂ ಓದಿ | Viral post | ವಿಮಾನದಲ್ಲಿ ಆತ ಆಕೆಯ ಚಿತ್ರ ಬಿಡಿಸಿದ, ಮುಂದೆ ನಡೆದದ್ದೇನು!

Exit mobile version