ವಿಮಾನ ಪರಿಚಾರಿಕೆಯರ ಜೊತೆಗೆ ಕೆಟ್ಟದಾಗಿ, ಅಗೌರವದಿಂದ, ದರ್ಪದಿಂದ ನಡೆದುಕೊಳ್ಳುವ ಪಯಣಿಗರು ಇದ್ದೇ ಇರುತ್ತಾರೆ. ಸಣ್ಣದೊಂದು ವಿಚಾರವನ್ನು ಹಿಡಿದು ಜಗಳಕ್ಕೆ ನಿಲ್ಲುವ ಮಂದಿಗೇನೂ ಕಡಿಮೆಯಿಲ್ಲ. ಬಹಳಷ್ಟು ಸಾರಿ ವಿನಯವಂತಿಕೆ, ಇನ್ನೊಬ್ಬರ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳುವುದು ಮಾತನಾಡುವುದು ಹೇಗೆ ಎಂಬ ಕನಿಷ್ಟ ಸೌಜನ್ಯವೂ ಇರುವುದಿಲ್ಲ. ಪ್ರತಿಯೊಬ್ಬರ ಕೆಲಸಕ್ಕೂ ಒಂದು ಘನತೆ ಇದೆ ಎಂಬುದನ್ನು ಮರೆಯುವ ಸಂದರ್ಭಗಳೇ ಹೆಚ್ಚು.
ವಿನಯ, ಗೌರವಯುತ ನಡೆನುಡಿಗಳನ್ನು ಮನುಷ್ಯನನ್ನು ಯಾವತ್ತಿಗೂ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇಂಥದ್ದೇ ಒಂದು ಅಪರೂಪದ ಪ್ರಸಂಗ ಇತ್ತೀಚೆಗೆ ನಡೆದಿದೆ. ೫೦ ಸೆಕೆಂಡುಗಳ ಚಂದದ ವಿಡಿಯೋ ಒಂದು ಕೇವಲ ಈ ವಿಡಿಯೋದಲ್ಲಿರುವ ಇಬ್ಬರಿಗೆ ಮಾತ್ರವಲ್ಲ, ವೀಕ್ಷಿಸಿದ ಅಷ್ಟೂ ಮಂದಿಯಲ್ಲಿ ಖುಷಿಯನ್ನು ಹಂಚಿದೆ.
ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದವರಲ್ಲಿ ಒಬ್ಬಾತನ ಬಳಿಗೆ ವಿಮಾನ ಪರಿಚಾರಿಕೆಯೊಬ್ಬಳು, ಎಲ್ಲರಿಗೂ ಆಹಾರ ನೀಡುವಂತೆ ಈತನಿಗೂ ನೀಡುತ್ತಾಳೆ. ಪೆನ್ಸಿಲ್ ಹಾಗೂ ಪೇಪರ್ ಹಿಡಿದು ತನ್ನ ಬಳಿಗೆ ಬಂದ ಆ ಪರಿಚಾರಿಕೆಯ ಚಿತ್ರ ಬಿಡಿಸಲು ಹೊರಟದ್ದು ಆಕೆಯ ಅರಿವಿಗೆ ಬಂದಿರುವುದಿಲ್ಲ. ಸ್ವಲ್ಪ ಹೊತ್ತಿನಲ್ಲಿ ಚಿತ್ರ ಬರೆದು ಮುಗಿಸಿ ಆತ, ವಿಮಾನದ ಆಹಾರ ವಸ್ತುಗಳನ್ನು ಜೋಡಿಸಿಟ್ಟಿರುವ ಪ್ಯಾಂಟ್ರಿಯ ಕಡೆಗೆ ಹೋಗಿ ಆಕೆಯನ್ನು ಕರೆದು ತಾನು ಬಿಡಿಸಿದ ಚಿತ್ರ ಆಕೆಗೆ ಉಡುಗೊರೆಯಾಗಿ ನೀಡುತ್ತಾನೆ. ನಿರೀಕ್ಷಿಸದೇ ಇದ್ದ ಉಡುಗೊರೆಯನ್ನು ಕಂಡ ಆಕೆಗೆ ಸಂತೋಷವೂ ಆಶ್ಚರ್ಯವೂ ಜೊತೆಜೊತೆಗೇ ಆಗುತ್ತದೆ. ಮುಖಕ್ಕೆ ಮಾಸ್ಕ್ ಹಾಕಿದ್ದ ಆಕೆಯ ಚಿತ್ವವನ್ನು ಯಥಾವತ್ ಹಾಗೆಯೇ ಮಾಸ್ಕ್ ಹಾಕಿಯೇ ಚಿತ್ರಿಸಿದ ಆತನ ಈ ಚಿತ್ರಗೆ ಇಷ್ಟವಾಗಿ, ಇದು ನನಗೆಯೇ? ನಾನು ಇಟ್ಟುಕೊಳ್ಳಬಹುದೇ? ಎಂದು ಕೇಳುತ್ತಾಳೆ. ಆತ, ಖಂಡಿತ, ನಿಮಗಾಗಿಯೇ ಎಂದು ಆಕೆಗೆ ಕೊಡುತ್ತಾನೆ.
ಈ ಕಥೆ ಇಲ್ಲಿಗೇ ನಿಲ್ಲುವುದಿಲ್ಲ. ಆತನಿಂದ ಚಿತ್ರದ ಗಿಫ್ಟ್ ಪಡೆದ ಆಕೆ, ಆತ ವಿಮಾನ ಪ್ರಯಾಣ ಮುಗಿಸಿ ಹೊರಡುವ ಸಂದರ್ಭ ಆತನಿಗೊಂದು ಧನ್ಯವಾದದ ಕಾರ್ಡ್ ನೀಡುತ್ತಾಳೆ! ಕಾರ್ಡ್ ಬಿಡಿಸಿ ನೋಡಿದರೆ, ಹುಡುಗನೊಬ್ಬನ ಚಿತ್ರ ಆಕೆಯೂ ಗೀಚಿದ್ದು, ಧನ್ಯವಾದ ಎಂದು ಬರೆದಿರುತ್ತಾಳೆ. ಜೊತೆಗೆ ಚಂದನೆಯ ಒಂದು ಗಿಫ್ಟ್ ಪೊಟ್ಟಣವನ್ನೂ ಈದರ ಜೊತೆಗಿಟ್ಟು ಆಕೆ ಆತನಿಗೆ ಕೊಟ್ಟಿದ್ದಾಳೆ.
ಇದನ್ನೂ ಓದಿ | Viral Video | ತಂಗಿಗೆ ತಲೆಗೆ ಹೋಗದ ಗಣಿತ; ಕಲಿಸಿ ಸುಸ್ತಾಗಿ ಹತಾಶೆಯಿಂದ ದೊಡ್ಡದಾಗಿ ಅಳಲು ಶುರು ಮಾಡಿದ ಅಣ್ಣ!
ಜಪಾನ್ ಏರ್‌ಲೈನ್ಸ್‌ನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಟೋಕಿಯೋದಿಂದ ಡಲ್ಲಾಸ್‌ಗೆ ಹೋಗುವ ವಿಮಾನದಲ್ಲಿ ಈ ಘಟನೆ ನಡೆದಿದೆ.
ʻಆತ ಕೊಟ್ಟ ಚಿತ್ರಕ್ಕೆ ಆಕೆ ತಿರುಗಿ ಕೊಟ್ಟಳು!ʼ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದ್ದ ಈ ಪುಟಾಣಿ ೫೫ ಸೆಕೆಂಡುಗಳ ವಿಡಿಯೋ ಎಲ್ಲರ ಮನಗೆದ್ದಿದೆ. ಎಷ್ಟೊಂದು ಚೆಂದನೆಯ ವಿಡಿಯೋವಿದು. ವಿಮಾನದಲ್ಲಿ ಗಲಾಟೆ, ಕೆಟ್ಟದಾಗಿ ವರ್ತಿಸುವುದು ಇತ್ಯಾದಿಗಳನ್ನೇ ಹೆಚ್ಚು ನೋಡಿದ ನಮಗೆ ಇಂಥ ವಿಡಿಯೋ ನೋಡಿದಾಗ ಖುಷಿಯಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ʻಇಂತಹ ಪ್ರೀತಿ ತುಂಬಿದ ಶಕ್ತಿಗಳು ನಮ್ಮ ನಡುವೆ ಬೆಳೆಯಬೇಕು, ಇಂತಹ ನಡತೆಗಳು ಸಮಾಜದಲ್ಲಿ ದುಪ್ಪಟ್ಟಾಗಲಿ. ಇದೊಂದು ಚಂದನೆಯ ಜಗತ್ತು ಎಂಬ ಬಗ್ಗೆ ವಿಶ್ವಾಸ ಹೆಚ್ಚುತ್ತಿದೆʼ ಎಂದಿದ್ದಾರೆ.
ಚಿಕ್ಕ ಘಟನೆಯಾದರೂ, ಇದು ನೀಡುವ ಸಂದೇಶ ದೊಡ್ಡದು. ಜಗಳ, ದ್ವೇಷ, ತಾಳ್ಮೆಯಿಲ್ಲದ ನಡವಳಿಕೆಗಳಿಗಿಂತ ಇಂತಹ ಪ್ರೀತಿ ಹಂಚುವ ನಡತೆಗಳು ಸುತ್ತಲಿನವರಿಗೆ ಪಾಸಿಟಿವಿಟಿಯನ್ನಷ್ಟೇ ಹಂಚುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
ಇದನ್ನೂ ಓದಿ | Viral post | ಬೆಂಗಳೂರಿನ ಈ ಆಟೋನಲ್ಲಿ ಪಯಣಿಸುವ ಮಂದಿಗೆ ತಿನಿಸು, ಫಸ್ಟ್‌ಏಡ್ ಸೇವೆ!