ಬಹುಶಃ ದೋಸೆಯ ಮೇಲೆ ನಡೆದಷ್ಟು ಚಿತ್ರವಿಚಿತ್ರ ಪ್ರಯೋಗಗಳು ಯಾವ ಆಹಾರದ ಮೇಲೂ ಆಗಿರಲಿಕ್ಕಿಲ್ಲವೇನೋ. ದಕ್ಷಿಣ ಭಾರತೀಯರ ಸಾಂಪ್ರದಾಯಿಕ ದೋಸೆ ನಾನಾ ಬಗೆಯಲ್ಲಿ ರೂಪಾಂತರಗೊಂಡು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದೆ. ಆಗಾಗ ಹೊಸ ಹೊಸ ರೂಪಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಲೇ ಇರುವ ದೋಸೆ ಕೆಲವೊಮ್ಮೆ ಸಾಂಪ್ರದಾಯಿಕ ದೋಸೆಯನ್ನು ಇಷ್ಟಪಡುವವರ ಕೆಂಗಣ್ಣಿಗೆ ಗುರಿಯಾಗುತ್ತಲೂ ಇರುತ್ತದೆ. ಈ ಬಾರಿಯ ಈ ಹೊಸ ರೂಪಾಂತರವೂ ಹಲವರ ಕೋಪಕ್ಕೆ ಕಾರಣವಾಗಿದೆ. ಈ ಬಾರಿ ಹಸಿರು ಬಣ್ಣದ ಪಾನ್ (ವೀಳ್ಯದೆಲೆ) ದೋಸೆ (paan dosa) ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಸಿರು ಬಣ್ಣದ ಹಿಟ್ಟನ್ನು ಬಿಸಿ ಬಿಸಿ ತವಾದ ಮೇಲೆ ಸುರಿದು, ದೋಸೆ ಹೊಯ್ದ ಮೇಲೆ ಕತ್ತರಿಸಿದ ವೀಳ್ಯದೆಲೆ, ಚೆರ್ರಿ, ಒಣ ದ್ರಾಕ್ಸಿ, ಆಪ್ರಿಕಾಟ್, ಖರ್ಜೂರ, ಅಂಜೂರ, ಟೂಟಿ ಫ್ರೂಟಿ ಹಾಗೂ ಇನ್ನೂ ಅನೇಕ ಬಗೆಯ ಒಣಹಣ್ಣುಗಳ ಮಿಶ್ರಣವನ್ನು ಮಸಾಲೆ ಇಡುವಂತೆ ದೋಸೆಯ ಮೇಲೆ ಇಟ್ಟು, ಸಾಕಷ್ಟು ಬೆಣ್ಣೆಯನ್ನೂ ಈ ದೋಸೆಗೆ ಸುರಿದು, ವೀಳ್ಯದೆಲೆ ಸಿರಪ್ಪನ್ನೂ ಇದರ ಮೇಲೆ ಸುರಿಯುವ ಮೂಲಕ ಸ್ವೀಟ್ ಪಾನ್ ಮಾದರಿಯಲ್ಲಿ ಪಾನ್ ದೋಸೆ ಮಾಡುವ ಬಗೆಯನ್ನು ಸಾಮಾಜಿಕ ಜಾಲತಾಣದಲ್ಲಿ (viral post) ಹರಿಬಿಡಲಾಗಿದೆ. ಹ್ಯಾಪಿ ಎಂಬ ಟ್ವಿಟರ್ ಬಳಕೆದಾರರೊಬ್ಬರು ಇದನ್ನು ಹಂಚಿಕೊಂಡಿದ್ದು ಇದು ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
ಬಹಳಷ್ಟು ಮಂದಿ ಈ ದೋಸೆ ನೋಡಿ ಶಾಕ್ ಆಗಿದ್ದು, ಇಂತಹ ವಿಚಿತ್ರವಾದ ದೋಸೆಯನ್ನು ಮಾಡಿರುವುದಕ್ಕೆ ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ. ಈ ದೋಸೆ, ಯಾವುದೋ ದೋಸೆ ಅಂಗಡಿಯಲ್ಲಿ ದೊರೆಯುವ ದೋಸೆಯ ವಿಧವಾಗಿದ್ದು ಈ ದೋಸೆ ಎಲ್ಲಿ ದೊರೆಯುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.
ಸುಮಾರು ಒಂದುವರೆ ಲಕ್ಷ ಜನರು ಈ ವಿಡಿಯೋ ನೋಡಿದ್ದು, ʻಪಾನ್ ದೋಸೆ, ಈ ಗ್ರಹವನ್ನು ಬಿಡುವ ಸಮಯ ಬಂದಿದೆʼ ಎಂಬ ಶೀರ್ಷಿಕೆಯನ್ನೂ ಹೊತ್ತಿದೆ. ಕೆಲವರು, ʻಈ ದೋಸೆ ವಿಡಿಯೋನ ಎರಡನೇ ಭಾಗವನ್ನೂ ನಮಗೆ ವೀಕ್ಷಿಸಲು ನೀಡಿದರೆ, ನೆಮ್ಮದಿಯಿಂದ ಟ್ವಿಟರ್‌ನಿಂದ ನಿರ್ಗಮಿಸುತ್ತೇವೆʼ ಎಂದು ತಮಾಷೆಯಾಗಿ ಕಾಮೆಟ್ ಮಾಡಿದ್ದಾರೆ.
ಇನ್ನೂ ಕೆಲವರು, ʻಈ ಗ್ರಹದ ಮೇಲೆ ಇನ್ನೂ ಯಾವೆಲ್ಲ ದೋಸೆಯನ್ನು ನೋಡುವುದಕ್ಕಿದೆಯೋ, ದೇವರೇʼ ಎಂದು ತಲೆ ಮೇಲೆ ಕೈಹೊತ್ತು ಕೂತಿದ್ದಾರಂತೆ. ಇನ್ನೂ ಒಬ್ಬರು ಇದರಲ್ಲಿ ಶೇಕಡಾ ಒಂದರಷ್ಟು ಮಾತ್ರ ಪಾನ್ ಕಾಣಿಸುತ್ತಿದ್ದು, ಉಳಿದದ್ದೆಲ್ಲವೂ ಬಣ್ಣ ಹಾಕಿದಂತೆ ಕಾಣುತ್ತಿದೆ ಎಂದಿದ್ದಾರೆ. ಮತ್ತೊಬ್ಬರು, ಮೆಯೋನೀಸ್, ಕೆಚಪ್ ಪಾನ್ ದೋಸೆಗಾಗಿ ಕಾಯುತ್ತಿದ್ದೇವೆ ಎಂದು ನಗೆಯಾಡಿದ್ದಾರೆ.
ಇದು ಪಾನ್ ದೋಸೆಯಾ ಅಥವಾ ರೇಡಿಯೋ ಆಕ್ಟಿವ್ ದೋಸೆಯಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಉತ್ತರ ಭಾರತೀಯ ಬೀದಿಬದಿಯ ದೋಸೆ ಅಂಗಡಿಯ ಮಂದಿ ನಿಜಕ್ಕೂ ದೋಸೆಯನ್ನು ಕೆಡಿಸುತ್ತಿದ್ದಾರೆ. ಎಲ್ಲದಕ್ಕೂ ಚೀಸ್ ಬಳಸುವ ಮೂಲಕ ದೋಸೆಯ ಮೇಲೂ ಹುಚ್ಚುತನದ ಪ್ರಯೋಗ ಮಾಡುತ್ತಿದ್ದಾರೆ ಎಂದೂ ಕಿಡಿ ಕಾರಿದ್ದಾರೆ.
ಒಟ್ಟಾರೆಯಾಗಿ, ಎಲ್ಲ ದೋಸೆ ಪ್ರಿಯರಿಗೂ ಈ ಹಸಿರು ಪಾನ್ ದೋಸೆಯನ್ನು ನೋಡಿ ಎದೆ ಧಸಕ್ಕೆಂದಿದೆ! ಇನ್ನೂ ಎಷ್ಟು ದಿನ ಹೀಗೆ ನಮ್ಮ ಕಣ್ಣಿನಿಂದ ದೋಸೆಯ ಮೇಲಾಗುವ ಅನ್ಯಾಯವನ್ನು ನೋಡಬೇಕು ಎಂಬುದು ಇಲ್ಲಿ ಹಲವರ ಪ್ರಶ್ನೆ.
ಇದನ್ನೂ ಓದಿ: Viral Video: ಪಾಕ್ ಪ್ರಧಾನಿಗೆ ಹಗ್ ಮಾಡಲು ಒಪ್ಪದ ಟರ್ಕಿ ಅಧ್ಯಕ್ಷ! ಪಾಕ್ ಪಿಎಂಗೆ ನೆಟ್ಟಿಗರಿಂದ ಮಂಗಳಾರತಿ