Site icon Vistara News

ತನ್ನಂತೆ ಕೈಯಿಲ್ಲದ ಗೊಂಬೆ ತಯಾರು ಮಾಡಿರೆಂದು ಆಟಿಕೆ ಸಂಸ್ಥೆಗೆ ಪತ್ರ ಬರೆದ ಪುಟಾಣಿ!

barbie

ಖ್ಯಾತ ಆಟಿಕೆ ಸಂಸ್ಥೆ ಮ್ಯಾಟೆಲ್‌ ತನ್ನ ಬಾರ್ಬಿ ಗೊಂಬೆಗಳಲ್ಲಿ ವಿಟಿಲಿಗೋ ಗೊಂಬೆಗಳ ಸರಣಿಯನ್ನೂ ಆರಂಭಿಸಿದ್ದು ಗೊತ್ತೇ ಇದೆ. ಗೊಂಬೆಗಳೆಂದರೆ ಸೌಂದರ್ಯಕ್ಕೆ ಇನ್ನೊಂದು ಹೆಸರಿನಂತೆ ಇರಬೇಕು ಎಂಬ ಕಾಲ ಈಗ ನಿಧಾನವಾಗಿ ಮರೆಯಾಗುತ್ತಿದೆ. ಬಾಡಿ ಶೇಮಿಂಗ್‌ ಸೇರಿದಂತೆ ಹಲವು ವಿಚಾರಗಳು ಇತ್ತೀಚೆಗೆ ಹೆಚ್ಚು ಚರ್ಚಿತವಾಗುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ಮನಸ್ಸಿನಲ್ಲಿ ಎಳವೆಯಲ್ಲಿಯೇ, ಆಟಿಕೆಗಳ ಮೂಲಕ ಸೌಂದರ್ಯ ಪ್ರಜ್ಞೆಯನ್ನು ಹಾಗೂ ʻತಾವು ಹಾಗಿಲ್ಲವೇಕೆʼ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಹೀಗಾಗಿ, ಒಬ್ಬರಂತೆಯೇ ಮತ್ತೊಬ್ಬರಿಲ್ಲದ ಈ ಜಗತ್ತಿನಲ್ಲಿ, ಪ್ರತಿಯೊಬ್ಬರಲ್ಲಿಯೂ ಸೌಂದರ್ಯವಿದೆ ಎಂಬ ತತ್ವದ ಆಧಾರದಲ್ಲಿ, ಕೀಳರಿಮೆಗೆ ಜಾರುತ್ತಿದ್ದ, ತೊನ್ನು (ವಿಟಿಲಿಗೋ) ಏಂಬ ಚರ್ಮದ ಸಮಸ್ಯೆ ಇರುವ ಮಂದಿಯನ್ನೂ ಒಳಗೊಳ್ಳುವಂತೆ, ಬಾರ್ಬಿ ತನ್ನ ವಿಟಿಲಿಗೋ ಸರಣಿ ಬಿಡುಗಡೆ ಮಾಡಿತ್ತು. ಕಪ್ಪು, ಬಿಳಿ ಎಂಬ ವ್ಯತ್ಯಾಸವಿಲ್ಲದಂತೆ ಗೊಂಬೆಗಳನ್ನು ಮಾರುಕಟ್ಟೆಗೆ ಬಿಡಲಾರಂಭಿಸಿದೆ.

೨೦೧೫ರಲ್ಲೇ ʻಟಾಯ್‌ ಲೈಕ್‌ ಮಿʼ ಅಭಿಯಾನ ಶುರುವಾದಂದಿನಿಂದ ಸಾಕಷ್ಟು ಖ್ಯಾತ ಆಟಿಕೆ ಸಂಸ್ಥೆಗಳು, ಒಂದೇ ಬಗೆಯ ಆಟಿಕೆಗಳನ್ನು ಬಿಟ್ಟು, ಸಾಮಾನ್ಯರಿಗೆ ಹೆಚ್ಚು ತಾಳೆಯಾಗುವ ಗೊಂಬೆ, ಆಟಿಕೆಗಳನ್ನು ಮಾಡುವತ್ತ ಹೆಜ್ಜೆ ಇಟ್ಟಿವೆ. ಸಾಕಷ್ಟು ಪೋಷಕರು, ಮಕ್ಕಳು ಈ ಅಭಿಯಾನದಡಿ, ವಿಕಲಚೇತನ, ವಿಟಿಲಿಗೋ ಮತ್ತಿತರ ತೊಂದರೆಗಳಿರುವ ಮಂದಿಯನ್ನೂ ಆಟಿಕೆಗಳ ಜಗತ್ತಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದರು. ಈಗ ಈ ಅಭಿಯಾನದ ಮುಂದುವರಿದ ಭಾಗವಾಗಿ, ಒಂದು ಕೈಯಿಲ್ಲದ ಗೊಂಬೆ ಇದೀಗ ಲೆಗೋ ಆಟಿಕೆ ಸಂಸ್ಥೆಯಿಂದ ಹೊರಬಂದಿದೆ.

ಇದಕ್ಕೆ ಕಾರಣ ಇಂಗ್ಲೆಂಡ್‌ನ ಎಂಟು ವರ್ಷದ ಸೋಫಿಯಾ. ಸೋಫಿಯಾಗೆ ಹುಟ್ಟುತ್ತಲೇ ಎಡಗೈ ಇಲ್ಲ. ಆಕೆ ತನ್ನದೇ ಕೈಬರಹದಲ್ಲಿ ತನ್ನ ಇಷ್ಟದ ಆಟಿಕೆ ಸಂಸ್ಥೆಗಳಲ್ಲೊಂದಾದ ಲೆಗೋ ಸಂಸ್ಥೆಗೆ ಪತ್ರ ಬರೆದಿದ್ದು, ಆಟಿಕೆಯ ಕಲೆಕ್ಷನ್‌ನಲ್ಲಿ ಇನ್ನಷ್ಟು ವಿವಿಧತೆ ಬೇಕೆಂದು ಕೇಳಿದ್ದಾಳೆ. ʻತನ್ನಂತೆ ಕೈಯಿಲ್ಲದ ಗೊಂಬೆಯೂ ತನ್ನ ಆಟಿಕೆಗಳ ಜೊತೆಯಲ್ಲಿದ್ದರೆ ಎಷ್ಟು ಚೆನ್ನ. ಈ ಆಟಿಕೆಯಲ್ಲಿ ನನ್ನಂತೆ ಯಾರೂ ಇಲ್ಲʼ ಎಂದು ಪತ್ರದಲ್ಲಿ ಬರೆದಿದ್ದಳು. ಪುಟಾಣಿ ಸೋಫಿಯಾಳ ಪತ್ರದಿಂದ ಸ್ಪೂರ್ತಿಗೊಂಡಿರುವ ಲೆಗೋ ಸಂಸ್ಥೆ ತನ್ನ ಬಿಲ್ಡಿಂಗ್‌ ಬ್ಲಾಕ್ಸ್‌ ಹೊಸ ಸರಣಿಯಲ್ಲಿ ಹೊಸ ಬಗೆಯ ಗೊಂಬೆಗಳನ್ನು ಸೇರ್ಪಡೆಗೊಳಿಸಿದೆ. ಇವುಗಳಲ್ಲಿ ಸೋಫಿಯಾಳಂತೆಯೇ ಒಂದು ಕೈ ಇಲ್ಲದ ಗೊಂಬೆಯೂ ಸೇರಿಕೊಂಡಿದೆ.

ಸೋಫಿಯಾಳ ಅಮ್ಮ ಜೆಸ್ಸಿಕಾ ಹೇಳುವ ಪ್ರಕಾರ, ʻನಾವು ಯಾವಾಗಲೂ ವಿವಿಧತೆಯ ಬಗ್ಗೆ ಮಾತಾಡುತ್ತೇವೆ. ಪ್ರತಿಯೊಬ್ಬರ ದೇಹವೂ ಭಿನ್ನ. ಭಿನ್ನ ಚರ್ಮ, ಭಿನ್ನ ಬಣ್ಣ, ಭಿನ್ನ ರೂಪ, ಭಿನ್ನ ಆಕಾರ ಹೀಗೆ. ಎಲ್ಲದರಲ್ಲೂ ಭಿನ್ನತೆಯಿರುವಾಗ, ಆಟಿಕೆಗಳಲ್ಲೇಕೆ ಇಷ್ಟೊಂದು ಭಿನ್ನತೆಯಿಲ್ಲ. ಅಲ್ಲಿರುವ ಗೊಂಬೆಗಳೇಕೆ ಒಂದೇ ಬಗೆಯವು? ನಮಗೇಗೆ ನಮ್ಮಲ್ಲಿರುವ ಭಿನ್ನತೆಯನ್ನು ಅಷ್ಟೇ ಸಹಜವಾಗಿ ಆಟಿಕೆಗಳಲ್ಲೂ ತರಲಾಗುತ್ತಿಲ್ಲ? ಆ ಮೂಲಕ ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲಿ ಈ ಭಿನ್ನತೆ ಸಹಜ ಎಂಬ ಮನೋಭಾವ ಹುಟ್ಟಿಸಲು ಯಾಕೆ ಹಿಂದೆ ಬೀಳುತ್ತೇವೆ?ʼ ಎಂದು ಪ್ರಶ್ನಿಸುತ್ತಾರೆ.

ಇದನ್ನೂ ಓದಿ | Petrol Pump Robbery | ಪೆಟ್ರೋಲ್ ಪಂಪ್ ದರೋಡೆಗೆ ಬಂದು ಹೆಣವಾದ! ವಿಡಿಯೋ ವೈರಲ್

ಈ ಹಿನ್ನೆಲೆಯಲ್ಲಿ, ಪ್ರಪಂಚದ ಮೂಲೆ ಮೂಲೆಗಳಿಂದ ಹಲವಾರು ಮಕ್ಕಳು ತಮಗೆ ಭಿನ್ನ ಸಂಸ್ಕೃತಿ, ಭಿನ್ನ ವೇಷಭೂಷಣ, ಭಿನ್ನ ರೂಪ, ಭಿನ್ನ ಚರ್ಮದ ಬಣ್ಣಗಳಿರುವ ಆಟಿಕೆಗಳನ್ನೂ ತಯಾರು ಮಾಡಬೇಕು ಎಂದು ಆಟಿಕೆ ಸಂಸ್ಥೆಗಳ ಗಮನಕ್ಕೆ ತರಲು ಪ್ರಯತ್ನಿಸಿದ್ದವು. ಇದೂ ಅಂಥದ್ದೊಂದು ಚಳುವಳಿಯ ಭಾಗವಾಗಿ, ಸೋಫಿಯಾಳ ಇಚ್ಛೆಗೆ ಅನುಗುಣವಾಗಿ ಲೆಗೋ ಈ ಹಿನ್ನೆಲೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ.

ಈಗ ನಾವು ನಿಜವಾದ ಜಗತ್ತನ್ನು ಮಕ್ಕಳ ಮುಂದೆ ಇರಿಸುತ್ತಿದ್ದೇವೆ. ಮಕ್ಕಳ ಪತ್ರಗಳು ನಮಗೆ ಈ ಹೆಜ್ಜೆ ಇಡಲು ಸ್ಪೂರ್ತಿ ನೀಡಿವೆ. ಹಾಗಾಗಿ ಹೊಸ ಬಗೆಯ ಆಟಿಕೆಗಳು ನಮ್ಮ ವಿನ್ಯಾಸ ತಂಡದ ಮೂಲಕ ಹೊರಬರಲಿದೆ ಎಂದು ಲೆಗೋ ಆಟಿಕೆ ಸಂಸ್ಥೆ ಹೇಳಿದೆ.  ೨೦೧೫ರಲ್ಲಿ ಆರಂಭವಾದ ʻಟಾಯ್‌ ಲೈಕ್‌ ಮಿʼ ಅಭಿಯಾನದ ಸಂದರ್ಭದಲ್ಲೇ ಲೆಗೋ ಸಂಸ್ಥೆ ಪ್ರಪಂಚದಲ್ಲಿ ಮೊದಲ ಬಾರಿಗೆ ವೀಲ್‌ಚಯರ್‌ ಗೊಂಬೆಯನ್ನು ಹೊರತರುವ ಮೂಲಕ ಇದಕ್ಕೆ ಕೈಜೋಡಿಸಿತ್ತು.

Exit mobile version