Viral News: ಗಿಳಿಗಳೆಂದರೇ ಮುದ್ದು. ಅವುಗಳ ಮೈಬಣ್ಣ, ಕೊಕ್ಕು ಎಲ್ಲವೂ ಮೋಹಕ. ಅದೆಲ್ಲಕ್ಕಿಂತ ಮುಖ್ಯವಾಗಿ ಗಿಳಿಗಳಿಗೆ ಮಾತನಾಡುವ ಸಾಮರ್ಥ್ಯವಿರುತ್ತದೆ. ಅಂದರೆ ಮನುಷ್ಯರಂತೆ ಸ್ಪಷ್ಟವಾಗಿ ಮಾತಾಡುತ್ತವೆ ಎಂದಲ್ಲ, ನಾವು ಹೇಳಿದ್ದನ್ನೇ ತುಂಬ ಮುದ್ದಾದ ಭಾಷೆಯಲ್ಲಿ ಅನುಕರಣೆ ಮಾಡುತ್ತವೆ. ಹೇಳಿಕೊಟ್ಟಿದ್ದನ್ನು ತಿರುಗಿ ಹೇಳುವ ಪ್ರಯತ್ನವನ್ನೂ ಮಾಡುತ್ತವೆ. ಅದೇನೇ ಇರಲಿ ಗಿಳಿಗಳ ಮಾತು ಆಕರ್ಷಿಸುತ್ತದೆ. ಅಂಥ ವಿಡಿಯೋಗಳನ್ನು ನೀವು ಈಗಾಗಲೇ ನೋಡಿರಬಹುದು. ಅದೇ ರೀತಿ ಈಗೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲೊಂದು ಕೆಂಪಾದ ಗಿಳಿ ʼಮಮ್ಮೀ…ʼ ಎಂದು ಕೂಗುವುದನ್ನು ಕೇಳಬಹುದು. ಒಂದು ಪುಟ್ಟ ಮಗು ತನ್ನ ಅಮ್ಮನನ್ನು ಕರೆದಂತೆ ತಾನೂ ತನ್ನ ಸಾಕಿದವಳನ್ನು ಕರೆವ ಗಿಳಿಯನ್ನು ನೋಡಿ ನೆಟ್ಟಿಗರು ಸೂಪರ್ ಎಂದಿದ್ದಾರೆ. ಗಿಳಿ ಮಾತನಾಡುವ ಎರಡು ನಿಮಿಷದ ವಿಡಿಯೋ ನೋಡಿದರೆ ನಿಮಗೂ ಆ ಪುಟ್ಟ ಪಕ್ಷಿಯ ಮೇಲೆ ಮುದ್ದು ಉಕ್ಕಿಬರದಿದ್ದರೆ ಹೇಳಿ !
ಇದು ಎಲ್ಲಿ ನಡೆದಿದ್ದು ಎಂದು ಗೊತ್ತಿಲ್ಲ. ಮನೆಯೊಂದರ ಹಜಾರದ ಮೇಲೆ ಮರದ ಒಂದು ಪುಟ್ಟ ಮೇಜಿನ ಮೇಲೆ ಕೆಂಪು-ಹಸಿರು ಮಿಶ್ರಿತ ಬಣ್ಣ ಗಿಳಿಯೊಂದು ಕುಳಿತಿದೆ. ಅದು ಅಡುಗೆ ಮನೆಯಲ್ಲಿದ್ದ ತನ್ನನ್ನು ಸಾಕಿದ ಮಹಿಳೆ ( ಆ ಮನೆಯ ಒಡತಿ)ಯನ್ನು ಕರೆಯುತ್ತಿದೆ. ʼಅತ್ಯಂತ ಸುಂದರವಾಗಿ ಕೀಳು ಸ್ವರದಲ್ಲಿ ಮಮ್ಮಿ..ಮಮ್ಮಿ ಎಂದು ಕೂಗುತ್ತದೆ. ಪುಟ್ಟ ಮಕ್ಕಳು ಅಮ್ಮಾ..ಬಾ ಎಂದು ರಚ್ಚೆ ಹಿಡಿದಂತೆ ಕೂಗುತ್ತದೆ. ಅದನ್ನು ಕೇಳಿದ ಮಹಿಳೆ, ಬರುತ್ತೇನೆ ಮಗೂ, ಚಹಾ ಮಾಡುತ್ತಿದ್ದೇನೆ ಎನ್ನುತ್ತಾರೆ. ಅದಕ್ಕೆ ಮತ್ತೆ ಪ್ರತಿಕ್ರಿಯೆ ನೀಡುವ ಗಿಳಿ..ʼಚಹಾʼ ಎನ್ನುತ್ತದೆ. ಹೀಗೆ ಮಹಿಳೆ ಮತ್ತು ಗಿಳಿಯ ನಡುವಿನ ಸಂಭಾಷಣೆ ಮುಂದುವರಿಯುತ್ತದೆ ಮತ್ತು ಅದು ನಮಗೆ ಕೇಳುವವರಿಗೆ ಪುಟಾಣಿ ಮಗು ಮತ್ತು ತಾಯಿಯ ನಡುವಿನ ಮಾತುಕತೆಯಂತೆಯೇ ಕೇಳುತ್ತದೆ. ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಎಂಬುವರು ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೇ, ಈ ವಿಡಿಯೋದಲ್ಲಿ ಕಾಣುತ್ತಿರುವುದು ಚಾಟರಿಂಗ್ ಲಾರಿ ಎಂಬ ತಳಿಯ ಗಿಣಿಯಾಗಿದ್ದು, ಇಂಡೋನೇಷ್ಯಾದ ಉತ್ತರ ಮಲುಕು ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿವೆ.
ಇದನ್ನೂ ಓದಿ: Viral Video: ಸೆಲ್ಫಿ ವಿಡಿಯೋ ಮಾಡ್ತಿದ್ದ ಹುಡುಗಿಯ ಸ್ಕರ್ಟ್ ಎತ್ತಿ ನೋಡಿದ ಪೋಲಿ ಕಪಿ !