Site icon Vistara News

Viral Video: ರೈಲ್ವೆ ನಿಲ್ದಾಣದಲ್ಲಿ ತುಂಬು ಗರ್ಭಿಣಿಯ ಪ್ರಾಣ ಕಾಪಾಡಿದ ಪೊಲೀಸ್‌ ಕಾನ್‌ಸ್ಟೆಬಲ್‌

Viral News

ಝಾನ್ಸಿ: ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವವರು ಮೈಯನ್ನೆಲ್ಲ ಕಣ್ಣಾಗಿಸಿಕೊಂಡಿರಬೇಕು ಎಂಬುದಕ್ಕೆ ಪೂರಕವಾಗಿರುವ ಸನ್ನಿವೇಶ ಆಗಾಗ ಎದುರಾಗುತ್ತಿರುತ್ತದೆ. ರೈಲು ಹತ್ತುವ ಅವಸರದಲ್ಲಿ ಅದೆಷ್ಟೋ ಪ್ರಯಾಣಿಕರು ಅಪಾಯ ಮೈಮೇಲೆ ಎಳೆದುಕೊಳ್ಳುತ್ತಾರೆ. ಅವರನ್ನು ರಕ್ಷಿಸುವ ಸಲುವಾಗಿ ಈ ರಕ್ಷಣಾ ಸಿಬ್ಬಂದಿಯೂ ತಮ್ಮ ಜೀವದ ಆಸೆ ಬಿಟ್ಟು ಪ್ರಯತ್ನ ಮಾಡುತ್ತಾರೆ. ಇಂಥ ಘಟನೆಗಳು ನಡೆದ ಹಲವು ವಿಡಿಯೋಗಳನ್ನು ನೀವು ಸೋಷಿಯಲ್‌ ಮೀಡಿಯಾಗಳಲ್ಲಿ ಆಗಾಗ ನೋಡಬಹುದು.

ಅದೇ ತರಹದ ಒಂದು ಘಟನೆ ಉತ್ತರ ಪ್ರದೇಶದ ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ ಸ್ಟೇಶನ್‌ನಲ್ಲಿ ನಡೆದಿದ್ದು ಅದರ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿ ಆಯತಪ್ಪಿದ ಗರ್ಭಿಣಿಯನ್ನು ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಕಾಪಾಡಿದ್ದಾರೆ. ಇದು ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ರೈಲ್ವೆ ಸಚಿವಾಲಯ ಶೇರ್‌ ಮಾಡಿಕೊಂಡಿದ್ದಾರೆ.

ರೈಲ್ವೆ ರಕ್ಷಣಾ ಪಡೆಯ ಪೊಲೀಸ್‌ ಕಾನ್‌ಸ್ಟೆಬಲ್‌ ನರ್ಪಾಲ್‌ ಸಿಂಗ್‌ ಶನಿವಾರ ಸಂಜೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಬರೌನಿ-ಗ್ವಾಲಿಯರ್‌ ರೈಲು ನಿಲ್ದಾಣವನ್ನು ಪ್ರವೇಶಿಸಿ ಕೆಲ ಕಾಲ ನಿಂತು ಅಲ್ಲಿಂದ ಹೊರಟಿತು. ಹೀಗೆ ರೈಲು ಚಲನೆ ಪ್ರಾರಂಭಿಸಿದ ತಕ್ಷಣ ತುಂಬು ಗರ್ಭಿಣಿಯೊಬ್ಬರು ಓಡುತ್ತ ಬಂದರು. ರೈಲು ತಪ್ಪಿ ಹೋದರೆ ಎಂಬ ಆತಂಕದಲ್ಲಿ ಓಡಿ ಬಂದು ಇನ್ನೇನು ಹತ್ತಬೇಕು ಎನ್ನುವಷ್ಟರಲ್ಲಿ ಅವರ ಕಾಲು ಎಡವಿ ಆಯತಪ್ಪಿದ್ದಾರೆ. ಅಷ್ಟರಲ್ಲಿ ನರ್ಪಾಲ್‌ ಸಿಂಗ್‌ ಓಡಿಬಂದು ಆಕೆಯನ್ನು ಹಿಡಿದುಕೊಂಡಿದ್ದಾರೆ. ಮಹಿಳೆ ಪಕ್ಕದಲ್ಲಿ, ಮಗುವನ್ನು ಎತ್ತಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬ ಕೂಡ ಆಕೆಯನ್ನು ಹಿಡಿದು ಎಳೆದಿದ್ದಾರೆ. ಗರ್ಭಿಣಿ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸ್‌ ಕಾನ್‌ಸ್ಟೆಬಲ್‌ ಸ್ವಲ್ಪವೇ ತಡ ಮಾಡಿದ್ದರೂ ಆಕೆಯ ಜೀವವೇ ಹೋಗುವ ಸಾಧ್ಯತೆ ಇತ್ತು. ಅಥವಾ ಗಂಭೀರ ಗಾಯಗೊಂಡು ಹೊಟ್ಟೆಯಲ್ಲಿರುವ ಮಗುವಿಗೂ ಅಪಾಯ ಎದುರಾಗುತ್ತಿತ್ತು. ವಿಡಿಯೋ ನೋಡಿದ ಜನರು ಆರ್‌ಪಿಎಫ್‌ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Video: ಮೈ ಜುಂ ಎನ್ನುವ ದೃಶ್ಯ; ಹಳಿ ಮೇಲೆ ಬಿದ್ದ ವೃದ್ಧನ ರಕ್ಷಣೆಗೆ ಜೀವ ಪಣಕ್ಕಿಟ್ಟ ರೈಲ್ವೆ ಉದ್ಯೋಗಿ

Exit mobile version