Site icon Vistara News

Viral Video: ʼ32ಜಿಬಿ ಫೋನ್‌ನಲ್ಲಿ 31.9ಜಿಬಿ ಡೇಟಾʼ-ಅರ್ಥವಾಗದಿದ್ದರೆ ಈ ಸ್ಕೂಟರ್‌ ನೋಡಿ !

Scooter Video

ಸೈಕಲ್‌-ಸ್ಕೂಟರ್‌ ಮೇಲೆ ಮಿತಿಮೀರಿ ಲಗೇಜ್‌ ಹೇರಿಕೊಂಡು ಹೋಗುವುದನ್ನು ನೀವು ಯಾವಾಗಲಾದರೂ ಒಮ್ಮೆ, ನಿಮ್ಮ ಸುತ್ತಮುತ್ತಲಿನ ರಸ್ತೆಯಲ್ಲಿ ನೋಡಿರುತ್ತೀರಿ. ಆದರೆ ಈಗ ವೈರಲ್‌ ಆಗಿರುವ ವಿಡಿಯೋದಲ್ಲಿ, ಸ್ಕೂಟರ್‌ ಮೇಲೆ ಹೇರಿರುವ ಸರಕಿನ ಪ್ರಮಾಣ ನೋಡಿದರೆ ಹುಬ್ಬೇರದೆ ಇರದು. ಅದೇನು ಸ್ಕೂಟರೋ ಅಥವಾ ಸರಕು ಸಾಗಣೆ ವಾಹನವೋ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅದೆಷ್ಟರ ಮಟ್ಟಿಗೆ ಗಂಟು-ಮೂಟೆ ಹೇರಲಾಗಿದೆಯೆಂದರೆ ಅದರ ಸವಾರ ಬೈಕ್‌ನ ಹಿಂಬದಿಯಲ್ಲಿ, ತುತ್ತತುದಿಯಲ್ಲಿ ಕುಳಿತಿದ್ದಾನೆ. ಅವನಿಗೆ ಕಾಲಿಡಲೂ ಜಾಗವಿಲ್ಲ. ಹಾಗೇ ಕಾಲು ಜೋತುಬಿಟ್ಟುಕೊಂಡೇ ಸ್ಕೂಟರ್‌ ಓಡಿಸುತ್ತಿದ್ದಾನೆ

ಸ್ಕೂಟರ್‌ನ ಮುಂಭಾಗದಲ್ಲಿ ಎರಡು ದೊಡ್ಡ ಮೂಟೆಗಳು ಇವೆ. ಮುಂದಿನ ಸೀಟುಗಳೆಲ್ಲ ಲಗೇಜ್‌ನಿಂತ ತುಂಬಿ ಹೋಗಿವೆ. ಆತನಿಗೆ ಗಾಡಿ ಓಡಿಸಲು ಸರಿಯಾಗಿ ಸಮತೋಲನ ಸಿಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಆತ ತನ್ನ ಕಾಲುಗಳು ನೆಲಕ್ಕೆ ತಾಗಬಾರದು ಎಂದು ಶತಪ್ರಯತ್ನಪಡುತ್ತಿದ್ದಾನೆ. ಇದು ನೋಡಲು ಎಷ್ಟು ಫನ್ನಿಯಾಗಿ ಕಾಣುತ್ತದೆಯೋ ಅಷ್ಟೇ ಭಯವನ್ನೂ ಹುಟ್ಟಿಸುತ್ತದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಈ ವಿಡಿಯೋ ಭರ್ಜರಿ ವೈರಲ್‌ ಆಗಿದೆ. ಅನೇಕರು ವಿಡಿಯೋ ಹಂಚಿಕೊಂಡು ತಮಾಷೆ ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಅದರಲ್ಲೊಬ್ಬರು ಸಾಗರ್‌ ಎಂಬುವರು ವಿಡಿಯೋ ಶೇರ್‌ ಮಾಡಿಕೊಂಡು ʼನನ್ನ 32ಜಿಬಿ ಸಾಮರ್ಥ್ಯದ ಫೋನ್‌, 31.9 ಜಿಬಿ ಡೇಟಾವನ್ನು ಹೊತ್ತುಕೊಂಡಿದೆʼ ಎಂದು ಮಾರ್ಮಿಕವಾಗಿ ಬರೆದಿದ್ದಾರೆ.

ಸಾಗರ್‌ ಶೇರ್‌ ಮಾಡಿಕೊಂಡ ಈ ವಿಡಿಯೋ ತೆಲಂಗಾಣ ಪೊಲೀಸರ ಗಮನಸೆಳೆದಿದ್ದು, ಅವರೂ ಕೂಡ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಎಚ್ಚರಿಕೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ʼಮೊಬೈಲ್‌ ಹಾಳಾದರೆ ಅದರಲ್ಲಿರುವ ಸಿಮ್‌ನ್ನು ಬೇರೆ ಮೊಬೈಲ್‌ಗೆ ಹಾಕಿದರೆ ಡೇಟಾ ರಕ್ಷಣೆಯಾಗುತ್ತದೆ. ಆದರೆ ಜೀವ ಹಾಗಲ್ಲ. ಇಂಥವುಗಳನ್ನೆಲ್ಲ ಮಾಡಿ ಜೀವಕ್ಕೇ ಅಪಾಯ ತಂದುಕೊಂಡರೆ ಅದು ಮತ್ತೆ ಸಿಗುವುದಿಲ್ಲ. ದಯವಿಟ್ಟು ನಿಮ್ಮ ಜೀವ ಮತ್ತು ಇತರರ ಜೀವವನ್ನು ರಿಸ್ಕ್‌ನಲ್ಲಿಡುವ ಸಾಹಸಕ್ಕೆ ಕೈಹಾಕಬೇಡಿʼ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ರಾಜಕಾರಣಕ್ಕೆ ತಳುಕು
ಈ ಯುವಕ ಸ್ಕೂಟರ್‌ನಲ್ಲಿ ಇಷ್ಟೆಲ್ಲ ಸರಕು-ಸರಂಜಾಮು ಹೊತ್ತು ಹೋಗುತ್ತಿರುವುದನ್ನು ನೆಟ್ಟಿಗರೊಬ್ಬರು ಮಹಾರಾಷ್ಟ್ರ ರಾಜಕಾರಣಕ್ಕೆ ತಳುಕು ಹಾಕಿದ್ದಾರೆ. ಅಲ್ಲಿ ಏಕನಾಥ್‌ ಶಿಂಧೆ ಮೊದಲು ತಮ್ಮ 12ಕ್ಕೂ ಹೆಚ್ಚು ಬೆಂಬಲಿಗ ಶಾಸಕರೊಂದಿಗೆ ಸೂರತ್‌ಗೆ ಹೋಗಿದ್ದರು. ಅದನ್ನೇ ನೆಟ್ಟಿಗರೊಬ್ಬರು ವಿಡಿಯೋಕ್ಕೆ ಕ್ಯಾಪ್ಷನ್‌ ರೂಪದಲ್ಲಿ ಬರೆದಿದ್ದಾರೆ. ಯುವಕನನ್ನು ಏಕನಾಥ್‌ ಶಿಂಧೆಗೆ ಹೋಲಿಸಿ, ಅದರಲ್ಲಿರುವ ಲಗೇಜ್‌ಗಳನ್ನೆಲ್ಲ ಬೆಂಬಲಿಗ ಶಾಸಕರಿಗೆ ಹೋಲಿಸಿ Eknath Shinde With MLAs going 2 surat (ಏಕನಾಥ್‌ ಶಿಂಧೆ ತಮ್ಮ ಬೆಂಬಲಿಗ ಶಾಸಕರೊಂದಿಗೆ ಸೂರತ್‌ಗೆ ಹೋಗುತ್ತಿರುವುದು) ಎಂದು ಬರೆದಿದ್ದಾರೆ. ಇನ್ನೂ ಹಲವರು ʼಏನಿದು? ಅಲ್ಲೆಲ್ಲೂ ಟ್ರಾಫಿಕ್‌ ಪೊಲೀಸ್‌ ಇರಲೇ ಇಲ್ಲವಾ?ʼ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Viral News | ಹಣ ಉಳಿಸಲು ಆ ಕಾಲೇಜು ವಿದ್ಯಾರ್ಥಿ ತಿಂದಿದ್ದು ಡಾಗ್‌ಫುಡ್‌!

Exit mobile version