Site icon Vistara News

Viral Video: ಮೆಕ್ಕಾದಲ್ಲಿ ಬುರ್ಖಾಧಾರಿ ಮಹಿಳೆಯ ಡ್ಯಾನ್ಸ್! ಮುಸ್ಲಿಂ ಸಮುದಾಯದ ಆಕ್ರೋಶ

Viral Video

ದೆಹಲಿ: ಎಲ್ಲಾ ಧರ್ಮದವರಿಗೂ ಅವರವರ ಧರ್ಮವನ್ನು ಆಚರಿಸುವ ಸ್ಥಳ ತುಂಬಾ ಪವಿತ್ರವಾಗಿರುತ್ತದೆ. ಮುಸ್ಲಿಂ ಧರ್ಮದವರಿಗೆ ಮೆಕ್ಕಾ (Mecca) ಒಂದು ಪವಿತ್ರ ಸ್ಥಳವಾಗಿದೆ. ಪ್ರತಿವರ್ಷ ಸಾವಿರಾರು ಮಂದಿ ಮುಸ್ಲಿಂರು ಎಷ್ಟೇ ಕಠಿಣ ಪರಿಸ್ಥಿತಿಯಲ್ಲೂ ಈ ಸ್ಥಳಕ್ಕೆ ಯಾತ್ರೆಗೆ ಹೋಗುತ್ತಾರೆ. ಮೆಕ್ಕಾವೆಂದರೆ ಮುಸ್ಲಿಂರಿಗೆ ತುಂಬಾನೇ ಗೌರವ. ಇಂತಹ ಪವಿತ್ರ ಸ್ಥಳದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಮೈಮರೆತು ನೃತ್ಯ (Dance) ಮಾಡಿದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದ್ದು, ಈ ಘಟನೆಗೆ ಮುಸ್ಲಿಂ ಸಮುದಾಯದವರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ..

ಮೆಕ್ಕಾದಲ್ಲಿರುವ ಕಾಬಾದ ಮುಂದೆ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯೊಬ್ಬಳು ನೃತ್ಯ ಮಾಡಿದ್ದಾಳೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಮುಸ್ಲಿಂ ಸಮೂಹದವರು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಮಹಿಳೆಯ ನೃತ್ಯಕ್ಕೆ ಸಿಟ್ಟಾದ ಮುಸ್ಲಿಂ ಸಮುದಾಯ!

ಹಜ್ 2024ರ ಸೀಸನ್ ಪ್ರಾರಂಭವಾಗಿದೆ. ಈ ಸಮಯದಲ್ಲಿ ಪ್ರಪಂಚದಾದ್ಯಂತ ಮುಸ್ಲಿಂರು ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕೆಂದು ಪ್ರವಾದಿ ಮುಹಮ್ಮದ್ ಅವರು ತಿಳಿಸಿದ್ದರು. ಹಾಗಾಗಿ ಮುಸ್ಲಿಂರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ವೇಳೆ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯೊಬ್ಬಳು ಎಲ್ಲಾ ಯಾತ್ರಿಕರ ಮುಂದೆ ನೃತ್ಯ ಮಾಡಿದ್ದಾಳೆ. ಈ ಸ್ಥಳದಲ್ಲಿ ಭಕ್ತಿ ಭಾವದಲ್ಲಿರಬೇಕಾದ ಮಹಿಳೆ  ಈ ರೀತಿ ಮೈಮರೆತು ಡ್ಯಾನ್ಸ್ ಮಾಡಿದ್ದಕ್ಕೆ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮಹಿಳೆಯ ಈ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ವಿಡಿಯೋದಲ್ಲಿರುವ ಮಹಿಳೆ ಬುರ್ಖಾ ಧರಿಸಿದ ಕಾರಣ ಆಕೆ ಯಾರು ಎಂಬುದು ತಿಳಿದುಬಂದಿಲ್ಲ.

ಯೊರುಬಾ ಬುಡಕಟ್ಟಿನ ಮಹಿಳೆ!

ಈ ವಿಡಿಯೊ ಬಗ್ಗೆ ಸೋಷಿಯಲ್ ಮೀಡಿಯಾದ ಬಳಕೆದಾರರು ಕಾಮೆಂಟ್ ಮಾಡಿದ್ದು, ಅದರಲ್ಲಿ ಒಬ್ಬರು ಮಹಿಳೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಹಿಳೆ ನೈರುತ್ಯ ನೈಜೀರಿಯಾದ ಯೊರುಬಾ ಬುಡಕಟ್ಟಿನವರು, ನೃತ್ಯವು ಅವರ ಸಂಸ್ಕೃತಿಯಲ್ಲಿ ಬಹಳ ಮುಖ್ಯವಾದುದು. ಹಾಗಾಗಿ ಆಕೆ ಹಾಗೇ ಮಾಡಿರಬಹುದು ಎಂದು ತಿಳಿಸಿದ್ದಾರೆ. ಹಾಗೇ ಮತ್ತೊಬ್ಬ ಬಳಕೆದಾರರು, ಹಜ್ 2024ರ ಸೀಸನ್ ಸಮೀಪಿಸುತ್ತಿರುವಾಗ ಕೆಲವು ದೃಶ್ಯಗಳು ಈ ತಿಂಗಳ ಪವಿತ್ರತೆಯನ್ನು ಉಲ್ಲಂಘಿಸಲು ಪ್ರಾರಂಭಿಸಿದ್ದಾವೆ ಮತ್ತು ಇದು ಲಕ್ಷಾಂತರ ಮುಸ್ಲಿಂರ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2024ರ ಹಜ್ ಗೆ ಮುಂಚಿತವಾಗಿ ಸುಮಾರು 13 ಮಿಲಿಯನ್ ಮುಸ್ಲಿಂರು ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಇನ್ನೂ ಅನೇಕ ಮಂದಿ ಮುಸ್ಲಿಂ ಯಾತ್ರಿಕರು ಪವಿತ್ರ ಆಚರಣೆಗಾಗಿ ಇಲ್ಲಿಗೆ ಆಗಮಿಸುವ ನಿರೀಕ್ಷೆಗಳಿವೆ ಎನ್ನಲಾಗಿದೆ. ಹಾಗಾಗಿ ಅಧಿಕಾರಿಗಳು ನಿಷೇಧಿಸಿರುವ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಯಾತ್ರಿಕರಿಗೆ ಸೌದಿ ಸರ್ಕಾರ ಒತ್ತಾಯಿಸಿದೆ. ನಿಯಮ ಉಲ್ಲಂಘಿಸಿದವರಿಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ:Viral Video: ಹೋಟೆಲ್‌ನೊಳಗೆ ಪಿಜ್ಜಾ ತಿನ್ನುತ್ತಿರುವಾಗಲೇ ಮಹಿಳೆಯ ಸರ ಅಪಹರಣ!

ಈ ಬಗ್ಗೆ ಹಜ್ ಸಚಿವರು ಮಾತನಾಡಿ, “ಹಜ್ ಕೇವಲ ಪೂಜೆಗಾಗಿಯೇ ಹೊರತು ರಾಜಕೀಯ ಫೋಷಣೆಗಳಿಗಾಗಿ ಅಲ್ಲ. ಪ್ಯಾಲೆಸ್ಟೀನಿಯಾದವರಿಗೆ, ವಿಶೇಷವಾಗಿ ಗಾಜಾದಲ್ಲಿರುವ ನಮ್ಮ ಸಹೋದರರಿಗೆ ದುವಾ ಮಾಡುವುದನ್ನು ನಿಷೇಧಿಸಲಾಗಿಲ್ಲ. ಇದು ಸಂಪೂರ್ಣವಾಗಿ ಸುಳ್ಳು. ಯಾವುದೇ ದೇಶದ ರಾಜಕೀಯ ಫೋಷಣೆಗಳನ್ನು ಕೂಗುವುದನ್ನು ನಿಷೇಧಿಸಲಾಗಿದೆ” ಎಂದು ತಿಳಿಸಿದ್ದಾರೆ.

Exit mobile version