Site icon Vistara News

Viral video: ಫುಟ್‌ರೆಸ್ಟ್‌ ಮೇಲೆ ಮಗು ನಿಲ್ಲಿಸಿಕೊಂಡು ಬೆಂಗಳೂರು ದಂಪತಿ ಬೈಕ್‌ ರೈಡ್‌! ಬೆಚ್ಚಿಬಿದ್ದ ನೆಟಿಜನ್ಸ್

viral video child on footrest

ಬೆಂಗಳೂರು: ಸಿಲಿಕಾನ್‌ ಸಿಟಿಯ (Silicon City) ಟ್ರಾಫಿಕ್‌ ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಿರುವ ನಡುವೆಯೇ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ (Careless driving) ಪ್ರಕರಣಗಳೂ ಹೆಚ್ಚುತ್ತಿವೆ. ಇದೀಗ, ಸ್ಕೂಟರ್‌ನ ಫುಟ್‌ರೆಸ್ಟ್‌ (Foot rest) ಮೇಲೆ ಪುಟ್ಟ ಮಗುವನ್ನು ನಿಲ್ಲಿಸಿಕೊಂಡು ಬೈಕ್‌ ಚಲಾಯಿಸುತ್ತಿರುವ (Bike riding) ದಂಪತಿಯ ವಿಡಿಯೋ ವೈರಲ್‌ (Viral video) ಆಗುತ್ತಿದ್ದು, ಇದನ್ನು ನೋಡಿ ಬೆಚ್ಚಿಬಿದ್ದ ನೆಟಿಜನ್ಸ್‌ (Netizens) “ಆರ್‌ ಯು ಸೀರಿಯಸ್?” ಎಂದು ಪ್ರಶ್ನಿಸಿದ್ದಾರೆ.

ಸ್ಕೂಟರ್ ಅಥವಾ ಬೈಕ್‌ನಲ್ಲಿ ಇಬ್ಬರು ಸವಾರರ ನಡುವೆ ಮಕ್ಕಳನ್ನು ಅಪ್ಪಚ್ಚಿಯಾಗುವಂತೆ ಕೂರಿಸುವುದು ಸಾಮಾನ್ಯ. ಆದರೆ ಈ ವಿಲಕ್ಷಣ ಸಾಹಸದ ವಿಡಿಯೋ ಮಾತ್ರ ಸೋಶಿಯಲ್‌ ಮೀಡಿಯಾ ಬಳಕೆದಾರರಲ್ಲಿ ಆತಂಕ ಮೂಡಿಸಿದೆ. ಈ ದಂಪತಿಯ ʼಮೂರ್ಖತನ’ದ ಬಗ್ಗೆ ಆಕ್ರೋಶ ವ್ಯಕ್ತಡಿಸಿದ್ದಾರೆ.

ಬಹುಶಃ ಹಿಂದಿನ ವಾಹನದಲ್ಲಿದ್ದ ಯಾರೋ ಇದನ್ನು ವಿಡಿಯೋ ಮಾಡಿಕೊಂಡಿದ್ದು ಸೋಶಿಯಲ್‌ ಮೀಡಿಯಾ ʼXʼನಲ್ಲಿ ಹಾಕಿದ್ದಾರೆ. ಒಬ್ಬ ವ್ಯಕ್ತಿ ಸ್ಕೂಟರ್‌ ಚಲಾಯಿಸುತ್ತಿದ್ದು ಆತನ ಹಿಂದೆ ಮಹಿಳೆ ಕುಳಿತಿದ್ದಾಳೆ. ಪಕ್ಕದಲ್ಲಿರುವ ಫುಟ್‌ರೆಸ್ಟ್‌ನಲ್ಲಿ ಮಗುವನ್ನು ನಿಲ್ಲಿಸಲಾಗಿದೆ. ರಾತ್ರಿ ಬೆಂಗಳೂರಿನ ಬೀದಿಯಲ್ಲಿ ಟ್ರಾಫಿಕ್ ಮೂಲಕ ಸ್ಕೂಟರ್ ಸವಾರಿ ಮಾಡುವುದು ವಿಡಿಯೋದಲ್ಲಿದೆ. ಜನನಿಬಿಡ ರಸ್ತೆಯಲ್ಲಿ ಸಂಚರಿಸುವಾಗ ಮಹಿಳೆ ಮಗುವನ್ನು ಒಂದು ಕೈಯಿಂದ ಹಿಡಿದುಕೊಂಡಿದ್ದಾಳೆ.

ಇದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ವೀಡಿಯೊಗೆ ಟೀಕೆಗಳ ಸುರಿಮಳೆ ಬಂದಿದೆ. ಕ್ರಮ ಕೈಗೊಳ್ಳುವಂತೆ ಟ್ರಾಫಿಕ್‌ ಪೊಲೀಸರನ್ನು ಒತ್ತಾಯಿಸಲಾಗಿದೆ. “ಇದು ಸಂಪೂರ್ಣ ಹಾಸ್ಯಾಸ್ಪದ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, “ಮಗುವಿನ ತಾಯಿ ಮತ್ತು ತಂದೆಯ ಮೇಲೆ ಕೇಸು ಹಾಕಿ ಇಬ್ಬರನ್ನೂ ಒಂದು ತಿಂಗಳು ಜೈಲಿನಲ್ಲಿಡಬೇಕು” ಎಂದು ಮತ್ತೊಬ್ಬರು ಆಕ್ರೋಶಿಸಿದ್ದಾರೆ. “ಕೇವಲ ಒಂದು ರಸ್ತೆ ಗುಂಡಿ ಅಥವಾ ಒಂದು ಸಣ್ಣ ಇಂಬ್ಯಾಲೆನ್ಸ್‌ ಕೂಡ ಈ ಆರಾಮದ ಸವಾರಿಯನ್ನು ನಾಶ ಮಾಡಬಹುದು” ಎಂದಿದ್ದಾರೆ ಮತ್ತೊಬ್ಬರು.

ಈ ಘಟನೆಯು ಸುರಕ್ಷತೆಗಿಂತ ಮನರಂಜನೆಗೆ ಆದ್ಯತೆ ನೀಡುತ್ತಿರುವ ಜನರ ಪ್ರವೃತ್ತಿಗೆ ಉದಾಹರಣೆಯಾಗಿದೆ. ಇತ್ತೀಚಿನ ಮತ್ತೊಂದು ಘಟನೆಯಲ್ಲಿ, ವ್ಯಕ್ತಿಯೊಬ್ಬರು ಮೊಬೈಲ್ ಗೇಮ್ ಆಡುತ್ತಾ ಮೋಟಾರ್ ಸೈಕಲ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮತ್ತೊಬ್ಬ ವ್ಯಕ್ತಿ ಬೈಕ್‌ ಚಲಾಯಿಸುತ್ತಾ ಲ್ಯಾಪ್‌ಟಾಪ್‌ನಲ್ಲಿ ಕಾನ್ಫರೆನ್ಸ್‌ ಕಾಲ್‌ ಅನ್ನು ಅಟೆಂಡ್‌ ಮಾಡುತ್ತಿದ್ದುದೂ ವೈರಲ್‌ ಆಗಿತ್ತು. ಈ ಘಟನೆಗಳು ಸುರಕ್ಷತೆಯ ಬಗ್ಗೆ ನಮ್ಮ ಆದ್ಯತೆ ಇಲ್ಲದಿರುವುದನ್ನು ಸೂಚಿಸಿದ್ದು, ಮನರಂಜನೆ ಮತ್ತು ಥ್ರಿಲ್‌ಗಾಗಿ ನಮ್ಮ ಮತ್ತು ಇತರರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುದನ್ನು ಕಾಣಿಸಿದೆ.

ಇದನ್ನೂ ಓದಿ: Viral Video: ಮೆರವಣಿಗೆಯಲ್ಲಿ ಸಾಗಿ 200 ಕೋಟಿ ರೂ. ಜನರ ಮೇಲೆ ಸುರಿದ ಜೈನ ದಂಪತಿ; ವಿಡಿಯೊ ವೈರಲ್​

Exit mobile version