Site icon Vistara News

Viral Video: ಐಷಾರಾಮಿ ಕಾರು ಬಿಟ್ಟು ಲೋಕಲ್‌ ರೈಲು ಏರಿದ್ದೇಕೆ ಕೋಟ್ಯಧಿಪತಿ ಉದ್ಯಮಿ?

train

train

ಮುಂಬೈ: ಭಾರತದಲ್ಲಿ ರೈಲು ಸಂಚಾರ ವ್ಯವಸ್ಥೆ ಅತ್ಯಂತ ಜನಪ್ರಿಯ. ಬಹುತೇಕ ಮಂದಿ ತಮ್ಮ ದೈನಂದಿನ ಸಂಚಾರಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಹೆಚ್ಚಿನ ಮಂದಿ ರೈಲಿನಲ್ಲೇ ಓಡಾಡುತ್ತಾರೆ. ಇದೀಗ ಮುಂಬೈಯ ಲೋಕಲ್‌ ರೈಲಿನಲ್ಲಿ ಕೋಟ್ಯಧಿಪತಿ ಉದ್ಯಮಿ ಸಂಚರಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ (Viral Video).

ಕಾರಣ ಏನು?

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ಹಿರಾನಂದಾನಿ ಗ್ರೂಪ್‌ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ, ಕೋಟ್ಯಧಿಪತಿ ಉದ್ಯಮಿ ನಿರಂಜನ್ ಹಿರಾನಂದಾನಿ (Niranjan Hiranandani) ಮುಂಬೈನಿಂದ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರ(Mumbai to Ulhasnagar)ಕ್ಕೆ ಲೋಕಲ್‌ ರೈಲಿನಲ್ಲಿ ಪ್ರಯಾಣಿಸಿ ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ರೈಲಿನ ಮೂಲಕ ಪ್ರಯಾಣಿಸಿದ್ದಾಗಿ 73 ವರ್ಷದ ನಿರಂಜನ್ ಹಿರಾನಂದಾನಿ ಹೇಳಿದ್ದಾರೆ. ಅವರು ಲೋಕಲ್‌ ರೈಲಿನ ಎಸಿ ಬೋಗಿಯಲ್ಲಿ ಸಂಚರಿಸಿದ್ದಾರೆ. ವಿಡಿಯೊದಲ್ಲಿ ಅವರು ಇತರ ಪ್ರಯಾಣಿಕರೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿರುವುದನ್ನು ಮತ್ತು ನಂತರ ಎಸಿ ಬೋಗಿಯನ್ನು ಹತ್ತುವುದು ಕಂಡು ಬಂದಿದೆ. ಸಹ ಪ್ರಯಾಣಿಕರ ಜತೆ ಅವರು ಬೆರೆತು ಚರ್ಚೆ ನಡೆಸುತ್ತ ಪ್ರಯಾಣಿಸಿದರು.

“ಸಮಯವನ್ನು ಉಳಿಸಲು ಮತ್ತು ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ರೈಲಿನ ಮೂಲಕ ಪ್ರಯಾಣಿಸಿದೆ. ಎಸಿ ಬೋಗಿಯ ಈ ಪ್ರಯಾಣ ಅದ್ಭುತ ಅನುಭವ ನೀಡಿದೆʼʼ ಎಂದು ನಿರಂಜನ್ ಹಿರಾನಂದಾನಿ ಬರೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಪೋಸ್ಟ್‌ ಮಾಡಲಾದ ಈ ವಿಡಿಯೊವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಈ ವಿಡಿಯೊಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸಾಮಾನ್ಯವಾಗಿ ಮಧ್ಯಮ ವರ್ಗದ ಜನರು ವಿಮಾನಗಳಲ್ಲಿ ಪ್ರಯಾಣಿಸುವಾಗ ತಮ್ಮ ಅನುಭವವನ್ನು ಹೇಗೆ ಚಿತ್ರೀಕರಿಸುತ್ತಾರೋ ಹಾಗೆಯೇ ಶ್ರೀಮಂತರು ತಮ್ಮ ರೈಲಿನಲ್ಲಿ ಪ್ರಯಾಣವನ್ನು ದಾಖಲಿಸುತ್ತಾರೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಹಿರಾನಂದಾನಿ ಅಂಬರ್ನಾಥ್ ಎಸಿ ರೈಲಿನಲ್ಲಿ ಸಂಚರಿಸಿದ್ದರು” ಎಂದು ಇನ್ನೊಬ್ಬರು ಊಹಿಸಿದ್ದಾರೆ. “ನಮ್ಮ ದೇಶಕ್ಕೆ ನಿಮ್ಮಂತಹ ನಾಯಕರು ಜನರು ಬೇಕು ಸರ್. ಒಂದು ದಿನ ನಿಮ್ಮನ್ನು ಭೇಟಿಯಾಗಬೇಕು ಎಂದುಕೊಂಡಿದ್ದೇನೆ” ಎಂದು ಮತ್ತೊಬ್ಬರು ಮನವಿ ಮಾಡಿದ್ದಾರೆ. “ರೈಲು ಪ್ರಯಾಣ ಈಗ ಅಗತ್ಯ ಮತ್ತು ಅನಿವಾರ್ಯ ಎನಿಸಿಕೊಂಡಿದೆ. ರಸ್ತೆಗಳಲ್ಲಿನ ಅವ್ಯವಸ್ಥೆ, ಕಳಪೆ ರಸ್ತೆಗಳು, ಸುರಕ್ಷತೆಯ ಕೊರತೆ, ಟ್ರಾಫಿಕ್‌ ತೊಂದರೆ ಮುಂತಾದ ಕಾರಣಗಳಿಂದ ಸ್ವಂತ ವಾಹನ ಓಡಿಸಲು ಕಷ್ಟವಾಗುತ್ತಿದೆʼʼ ಎಂದು ಮಗದೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ʼʼನಿಮ್ಮ ಈ ಕಾರ್ಯ ಇತರರಿಗೆ ಸ್ಫೂರ್ತಿ. ರೈಲು ಮುಂಬೈಗರ ಪರಿಣಾಮಕಾರಿ ಸಂಚಾರ ವ್ಯವಸ್ಥೆʼʼ ಎಂದು ನೆಟ್ಟಿಗರೊಬ್ಬರು ಶ್ಲಾಘಿಸಿದ್ದಾರೆ. ʼʼಹಿರಾನಂದಾನಿ ಸರಳ ವ್ಯಕ್ತಿ ಎನ್ನುವುದರಲ್ಲಿ ಸಂದೇಹವೇ ಇಲ್ಲʼʼ ಎಂಬ ಮೆಚ್ಚುಗೆಯ ಉದ್ಘಾರ ಮತ್ತೊಬ್ಬರದ್ದು.

ಹಲವರು ಹಿರಾನಂದಾನಿ ಅವರ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ. ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ ಸಮಸ್ಯೆಯನ್ನು ಕಡಿಮೆ ಮಾಡಲು ಸಾರ್ವಜನಿಕ ವಾಹನವನ್ನು ಬಳಸಬೇಕು ಎನ್ನುವ ತಜ್ಞರ ಸಲಹೆಯನ್ನು ಹಿರಾನಂದಾನಿ ಕಾರ್ಯ ರೂಪಕ್ಕೆ ತಂದಿದ್ದಾರೆ ಎಂದೂ ಹಲವರು ಹೊಗಳಿದ್ದಾರೆ.

ಇದನ್ನೂ ಓದಿ: Viral Video: ವಾರಾಣಸಿ ಬೀದಿಯಲ್ಲಿ ಕಚೋರಿ, ಜಿಲೇಬಿ ಸವಿದ ಜಪಾನ್ ರಾಯಭಾರಿ!

Exit mobile version