ಜೈಪುರ: ಮದುವೆ ಎಂದರೆ ಅಲ್ಲಿ ಉಡುಗೊರೆ ಇದ್ದೇ ಇರುತ್ತದೆ. ಎಷ್ಟೋ ಮದುವೆಗಳಲ್ಲಿ ಲಕ್ಷಗಟ್ಟಲೆ ಹಣ ಉಡುಗೊರೆ ರೂಪದಲ್ಲಿ ಬರುವುದೂ ಉಂಟು. ಆದರೆ ರಾಜಸ್ಥಾನದಲ್ಲಿ ವಧು ಒಬ್ಬಳಿಗೆ ಆಕೆಯ ಚಿಕ್ಕಪ್ಪಂದಿರೇ ಬರೋಬ್ಬರಿ 3 ಕೋಟಿಗೂ ಅಧಿಕ ರೂಪಾಯಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ರೀತಿ ಭಾರಿ ಪ್ರಮಾಣದ ಉಡುಗೊರೆ ಕೊಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ. ಈ ಬಗ್ಗೆ ಪರ ಮತ್ತು ವಿರೋಧದ ಭಾರಿ ಚರ್ಚೆಯೂ ನಡೆಯುತ್ತಿದೆ.
ಇದನ್ನೂ ಓದಿ: Viral Video: ವಿಶ್ವದಲ್ಲೇ ಉದ್ದದ ನಾಲಗೆ ಈತನದ್ದು; ಗಿನ್ನಿಸ್ ದಾಖಲೆಗೆ ಭಾಜನ
ರಾಜಸ್ಥಾನದ ಬುರ್ಡಿ ಗ್ರಾಮದ ಭನ್ವರ್‌ಲಾಲ್ ಗರ್ವಾ ಅವರಿಗೆ ಹರೇಂದ್ರ, ರಾಜೇಂದ್ರ, ರಾಮೇಶ್ವರ ಮತ್ತು ಭನ್ವರ್‌ಲಾಲ್ ಪೊಟಾಲಿಯಾ ಹೆಸರಿನ ನಾಲ್ವರು ಜನ ಗಂಡು ಮಕ್ಕಳಿದ್ದಾರೆ. ಅದರಲ್ಲಿ ಭನ್ವರ್‌ಲಾಲ್ ಪೊಟಾಲಿಯಾ ಮತ್ತು ಘೇವರಿ ದೇವಿ ದಂಪತಿಗೆ ಅನುಷ್ಕಾ ಹೆಸರಿನ ಹೆಣ್ಣು ಮಕ್ಕಳಿದ್ದಾರೆ. ಆಕೆಯ ಮದುವೆ ಮಾರ್ಚ್ 15ರಂದು ಅದ್ಧೂರಿಯಾಗಿ ಜರುಗಿದೆ. ಆ ಕಾರ್ಯಕ್ರಮದಲ್ಲಿ ಆಕೆಯ ಮೂರು ಜನ ಚಿಕ್ಕಪ್ಪಂದಿರು ಅನುಷ್ಕಾಳಿಗೆ ಮೂರು ಕೋಟಿಗೂ ಅಧಿಕ ರೂ. ನಗದು ಕೊಟ್ಟಿದ್ದಾರೆ. ಅದಷ್ಟೇ ಅಲ್ಲದೆ ಪ್ಲಾಟ್ ಪೇಪರ್, ಒಂದು ಟ್ರ್ಯಾಕ್ಟರ್, ಚಿನ್ನಾಭರಣಗಳನ್ನೂ ಆಕೆಗೆ ಉಡುಗೊರೆಯಾಗಿ ಕೊಡಲಾಗಿದೆ. ಈ ರೀತಿ ವಧುವಿಗೆ ಆಕೆಯ ಕುಟುಂಬದವರು ಉಡುಗೊರೆ ನೀಡುವುದು ರಾಜಸ್ಥಾನದ ಮೈರಾ ಸಂಪ್ರದಾಯವಾಗಿದೆ.
ಅನುಷ್ಕಾಳ ಚಿಕ್ಕಪ್ಪಂದಿರು ಚೀಲದಲ್ಲಿ ತಂದಿದ್ದ ಹಣವನ್ನು ತಟ್ಟೆಗೆ ಜೋಡಿಸುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. “ಈ ಮೈರಾಗೂ ವರದಕ್ಷಿಣೆಗೂ ಏನು ವ್ಯತ್ಯಾಸವಿದೆ? ಹಣ ಕೊಡುವ ರೀತಿ ಬೇರೆ ಇರಬಹುದು ಅಷ್ಟೇ” ಎಂದು ವಿಡಿಯೊದೊಂದಿಗೆ ಬರೆಯಲಾಗಿದೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರಿ ವೈರಲ್ ಆಗಿದೆ. ಅನೇಕರು ಮೈರಾ ಮತ್ತು ವರದಕ್ಷಿಣೆ ನಡುವೆ ಇರುವ ವ್ಯತ್ಯಾಸವನ್ನು ಹೇಳಲಾರಂಭಿಸಿದ್ದಾರೆ. “ವರದಕ್ಷಿಣೆಯನ್ನು ವರನ ಕುಟುಂಬವೇ ಕೇಳಿ, ಒತ್ತಾಯಿಸಿ ಪಡೆದುಕೊಳ್ಳುತ್ತದೆ. ಆದರೆ ಮೈರಾ ಹಾಗಲ್ಲ. ವಧುವಿನ ಕುಟುಂಬ ತಮ್ಮ ಮಗಳಿಗೆ ಪ್ರೀತಿಯಿಂದ ಕೊಡುವ ಉಡುಗೊರೆಯದು” ಎಂದು ಜನರು ಹೇಳಿದ್ದಾರೆ. ಇನ್ನೂ ಕೆಲವರು ಈ ಪ್ರಮಾಣದಲ್ಲಿ ಹಣ ಕೊಟ್ಟಿರುವ ಬಗ್ಗೆ ಆಕ್ಷೇಪವನ್ನೂ ಹೊರಹಾಕಿದ್ದಾರೆ.
ಅಂದ ಹಾಗೆ ಈ ಪ್ರಮಾಣದಲ್ಲಿ ಹಣ ಕೊಟ್ಟಿದ್ದಕ್ಕೆ ಕಾರಣವನ್ನೂ ಕುಟುಂಬ ನೀಡಿದೆ. ನಾಲ್ವರು ಅಣ್ಣ ತಮ್ಮಂದಿರ ಕುಟುಂಬದಲ್ಲಿ ಹುಟ್ಟಿರುವ ಏಕೈಕ ಹೆಣ್ಣು ಮಗಳು ಅನುಷ್ಕಾ. ಅನುಷ್ಕಾಳಿಗೆ ಬಿಟ್ಟು ಬೇರಿನ್ನಾರಿಗೂ ತಾವು ಮೈರಾ ಕೊಡಲು ಸಾಧ್ಯವಿಲ್ಲವಾದ್ದರಿಂದ ಎಲ್ಲರೂ ಆಕೆಗೇ ಭಾರಿ ಉಡುಗೊರೆ ಕೊಟ್ಟಿರುವುದಾಗಿ ಕುಟುಂಬ ಹೇಳಿಕೊಂಡಿದೆ.