Site icon Vistara News

Viral Video: ಉ.ಪ್ರ ಪೊಲೀಸರ ʼಟ್ರೀಟ್‌‌ಮೆಂಟ್ʼ ಹೇಗಿತ್ತು ನೋಡಿ! ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಪುಂಡರು

Viral Video

ಮುಜಾಫರ್‌ನಗರ: ಕೋಚಿಂಗ್ ಸೆಂಟರ್‌ನ (coaching institute) ಹೊರಗೆ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ದುಷ್ಕರ್ಮಿಗಳಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಳಿಸಿದ ಘಟನೆ ಉತ್ತರ ಪ್ರದೇಶದ (uttarpradesh) ಮುಜಾಫರ್‌ನಗರದಲ್ಲಿ (Muzaffarnagar) ನಡೆದಿದೆ. ಕೋಚಿಂಗ್ ಸೆಂಟರ್ ನ ಹೊರಗೆ ಮೂವರು ದುಷ್ಕರ್ಮಿಗಳು ಹುಡುಗಿಯರಿಗೆ ಕಿರುಕುಳ ನೀಡುತ್ತಿರುವುದು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮುಜಾಫರ್‌ನಗರದ ಗಾಂಧಿ ಕಾಲೋನಿಯಲ್ಲಿ ಕೋಚಿಂಗ್ ಸೆಂಟರ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದು ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಪೊಲೀಸರು ಸುತ್ತುಮುತ್ತ ಗಸ್ತು ತಿರುಗುತ್ತಾರೆ. ಕಳೆದ ಕೆಲ ದಿನಗಳಿಂದ ಕನ್ವರ್ ಯಾತ್ರೆಯಲ್ಲಿ ಪೊಲೀಸರು ನಿರತರಾಗಿದ್ದರು. ಈ ಪರಿಸ್ಥಿತಿಯ ಲಾಭ ಪಡೆದ ಕೆಲವು ದುಷ್ಕರ್ಮಿಗಳು ಕೋಚಿಂಗ್ ಸೆಂಟರ್ ಹೊರಗೆ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಗಾಂಧಿ ಕಾಲೋನಿಯಲ್ಲಿ ಮೂವರು ಮುಸುಕುಧಾರಿಗಳು ಬೈಕ್‌ನಲ್ಲಿ ಆಗಮಿಸಿ ಮೋಹನ್ ಭಾಟಿಯಾ ಎಂಬವರ ಕೋಚಿಂಗ್ ಸೆಂಟರ್‌ನ ಹೊರಗೆ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದರು. ದುಷ್ಕರ್ಮಿಯೊಬ್ಬನನ್ನು ವಿದ್ಯಾರ್ಥಿನಿ ಅವಮಾನಿಸಿದ್ದಾಳೆ ಎಂದು ಆರೋಪಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಲೇ ಇದ್ದರು. ಅವರನ್ನು ಅವಮಾನಿಸುವಂಥ ಯಾವುದೇ ಕೆಲಸ ಮಾಡಿಲ್ಲ ಎಂದು ವಿದ್ಯಾರ್ಥಿನಿ ಮತ್ತೆ ಮತ್ತೆ ಹೇಳಿದ್ದಳು.

ಕ್ಷಮೆ ಕೇಳದಿದ್ದರೆ ಗುಂಡು ಹಾರಿಸುವುದಾಗಿಯೂ ಪುಂಡರು ಬೆದರಿಕೆ ಹಾಕಿದ್ದರು. ಈ ದಾರಿಯಲ್ಲಿ ಸಾಕಷ್ಟು ಮಂದಿ ಹಾದುಹೋಗುತ್ತಿದ್ದರೂ ಯಾರೂ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗಳನ್ನು ತಡೆಯಲಿಲ್ಲ. ಕೊನೆಗೆ ವಿದ್ಯಾರ್ಥಿನಿ ಕ್ಷಮೆ ಕೇಳಿದ್ದರಿಂದ ದುಷ್ಕರ್ಮಿಗಳು ಸ್ಥಳದಿಂದ ಹೋಗಿದ್ದರು. ಇಡೀ ಘಟನೆ ಕೋಚಿಂಗ್ ಸೆಂಟರ್‌ನ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿತ್ತು. ವಿದ್ಯಾರ್ಥಿನಿ ತನ್ನ ತಂದೆ ಮತ್ತು ಸಹೋದರನನ್ನು ಕರೆಸಿ ಘಟನೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಿದ್ದಳು.


ಇದನ್ನೂ ಓದಿ: Abu Salem: ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂನನ್ನು ಮನ್ಮಾಡ್‌ಗೆ ರೈಲಿನಲ್ಲಿ ಕರೆತಂದ ಪೊಲೀಸರು

ಅವರು ದುಷ್ಕರ್ಮಿಗಳನ್ನು ಹುಡುಕಲು ಪ್ರಾರಂಭಿಸಿದರು ಮತ್ತು ಗಾಂಧಿ ಕಾಲೋನಿಯಲ್ಲಿ ಪತ್ತೆ ಹಚ್ಚಿ ಅವರನ್ನು ಹಿಡಿಯಲು ಹೋದಾಗ ಅವರು ಬೈಕ್‌ ಬಿಟ್ಟು ಪರಾರಿಯಾಗಿದ್ದರು. ಬಳಿಕ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೈಕ್ ವಶಪಡಿಸಿಕೊಂಡು ಬೈಕ್ ವಿವರ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಶೋಭಿತ್ ಶರ್ಮಾ ಮತ್ತು ಉಜ್ವಲ್ ಕುಮಾರ್ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಇಬ್ಬರು ಆರೋಪಿಗಳಿಗೆ ಪೊಲೀಸರು ಸ್ಟೇಷನ್‌ನಲ್ಲಿ ಸಖತ್‌ ʼಉಪಚಾರʼ ಮಾಡಿದ್ದಾರೆ. ಪೊಲೀಸ್‌ ಟ್ರೀಟ್‌ಮೆಂಟ್‌ಗೆ ಒಳಗಾಗಿರುವ ಆರೋಪಿಗಳು ಈಗ ನಡೆಯಲಾರದ ಸ್ಥಿತಿಯಲ್ಲಿ ಗೋಳಿಡುತ್ತಿದ್ದಾರೆ!

Exit mobile version