Site icon Vistara News

Viral Video: ಶಾಲೆಗೆ ಕುಡಿದು ಬಂದ ಶಿಕ್ಷಕನಿಗೆ ʼಪಾಠʼ ಕಲಿಸಿದ ವಿದ್ಯಾರ್ಥಿಗಳು; ಹೇಗೆಂದು ನೀವೇ ನೋಡಿ

viral video

viral video

ಛತ್ತೀಸ್‌ಗಢ: ಈಗಿನ ವಿದ್ಯಾರ್ಥಿಗಳು ಎಲ್ಲದಕ್ಕೂ ಬಹುಬೇಗ ಪ್ರತಿಕ್ರಿಯಿಸುವ ಗುಣಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ನೆಗಟಿವ್‌ ಇರಲಿ ಪಾಸಿಟಿವ್‌ ಇರಲಿ ತುರ್ತಾಗಿ ಸ್ಪಂದಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ. ಮದ್ಯ ಸೇವಿಸಿಕೊಂಡೇ ಶಾಲೆಗೆ ಬಂದ ಶಿಕ್ಷಕನಿಗೆ ವಿದ್ಯಾರ್ಥಿಗಳೇ ತಕ್ಕ ಪಾಠ ಕಲಿಸಿದ್ದಾರೆ. ಆತನಿಗೆ ಚಪ್ಪಲಿ ಎಸೆದು ವಿದ್ಯಾರ್ಥಿಗಳು ಓಡಿಸಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಘಟನೆಯ ವಿವರ

ಛತ್ತೀಸ್‌ಗಢದ ಬಸ್ತಾರ್‌ನ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಕುಡಿದ ಅಮಲಿನಲ್ಲಿ ಶಾಲಾ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಬಾಲಕರು ಮತ್ತು ಬಾಲಕಿಯರು ಗುಂಪುಗೂಡಿ ಆತನತ್ತ ಚಪ್ಪಲಿಗಳನ್ನು ಎಸೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಶಿಕ್ಷಕನು ಅಂತಿಮವಾಗಿ ತನ್ನ ಬೈಕ್‌ ಹತ್ತಿ ಶಾಲೆ ಆವರಣದಿಂದ ಹೊರಟು ಹೋಗುತ್ತಾನೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. “ಬಸ್ತಾರ್‌ನ ಶಾಲೆಯೊಂದಕ್ಕೆ ಶಿಕ್ಷಕ ಕುಡಿದು ಬಂದಾಗ ವಿದ್ಯಾರ್ಥಿಗಳು ತಕ್ಕ ಪಾಠ ಕಲಿಸಿದರು. ಆತ ವಿದ್ಯಾರ್ಥಿಗಳಿಗೆ ಕಲಿಸುವ ಬದಲು ಅವರನ್ನು ನಿಂದಿಸುತ್ತಿದ್ದ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಶಿಕ್ಷಕನತ್ತ ಚಪ್ಪಲಿಗಳನ್ನು ಎಸೆದು ಆತನನ್ನು ಸ್ಥಳದಿಂದ ಓಡಿಸಿದರು. ಈ ಘಟನೆಯು ವಿಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದೆʼʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಸದ್ಯ ಈ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ಕಾರಣವೇನು?

ʼʼಈ ಶಿಕ್ಷಕ ಪ್ರತೀ ದಿನ ಮದ್ಯದ ಅಮಲಿನಲ್ಲಿ ಶಾಲೆಗೆ ಬರುತ್ತಿದ್ದು, ಅವಾಚ್ಯ ಶಬ್ದಗಳಿಂದ ವಿದ್ಯಾರ್ಥಿಗಳನ್ನು ಬೈಯುತ್ತಿದ್ದ. ಶಿಕ್ಷಕನ ಈ ವರ್ತನೆಯಿಂದ ಬೇಸತ್ತಿದ್ದ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಆತನಿಗೆ ಪಾಠ ಕಲಿಸಲು ತೀರ್ಮಾನಿಸಿದ್ದರು. ಅದರಂತೆ ಎಂದಿನಂತೆ ಆತ ಕುಡಿದು ಶಾಲೆ ಆವರಣಕ್ಕೆ ಬರುತ್ತಿದ್ದಂತೆ ಕ್ರಮ ಕೈಗೊಂಡಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.

ನೆಟ್ಟಿಗರಿಂದ ಮೆಚ್ಚುಗೆ

ವಿದ್ಯಾರ್ಥಿಗಳ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಕುಡುಕ ಶಿಕ್ಷಕನಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ತಿಳಿಸಿದ್ದಾರೆ. ʼʼಛತ್ತೀಸ್‌ಗಢದಲ್ಲಿ ಪ್ರತಿ ದಿನ ಇಂತಹ ಘಟನೆ ನಡೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಸರ್ಕಾರ ಶಾಲೆಗಳ ಉಸ್ತುವಾರಿಯನ್ನು ಖಾಸಗಿ ಕಂಪೆನಿಗಳಿಗೆ ವಹಿಸುತ್ತಿದೆʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼಮೊದಲೇ ಬಸ್ತಾರ್‌ನಲ್ಲಿ ಶಿಕ್ಷಕರ ಕೊರತೆ ಇದೆ. ಇನ್ನು ಇದ್ದ ಕೆಲವರ ಸ್ಥಿತಿ ಇಂತಹದ್ದು. ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎನ್ನುವ ವಿಶ್ವಾಸವಿದೆʼʼ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನು ಹಲವು ನೆಟ್ಟಿಗರು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: Ticket to lovebirds: ಸಾರಿಗೆ ಬಸ್ಸಲ್ಲಿ ಅಜ್ಜಿ-ಮೊಮ್ಮಗಳಿಗೆ ಉಚಿತ ಪ್ರಯಾಣ; 4 ಲವ್ ಬರ್ಡ್ಸ್‌ಗೆ 444 ರೂ. ಟಿಕೆಟ್!

ಹಿಂದೆಯೂ ನಡೆದಿತ್ತು

ಮದ್ಯ ಸೇವಿಸಿ ಶಿಕ್ಷಕರು ಶಾಲೆಗೆ ಬರುತ್ತಿರುವ ಘಟನೆ ಹಿಂದೆಯೂ ವರದಿಯಾಗಿತ್ತು. ಕಳೆದ ತಿಂಗಳು ಇದೇ ಬಸ್ತಾರ್‌ ಜಿಲ್ಲೆಯ ಸರ್ಕಾರಿ ಶಾಲೆಯೊಂದಕ್ಕೆ ಕುಡುಕ ಶಿಕ್ಷಕನೊಬ್ಬ ಮದ್ಯದ ಬಾಟಲಿ ತೆಗೆದುಕೊಂಡೇ ಬಂದಿದ್ದ. ಈ ವಿಡಿಯೊ ಕೂಡ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಜತೆಗೆ ಕೆಲವು ದಿನಗಳ ಹಿಂದೆ ಮಧ್ಯ ಪ್ರದೇಶದ ಜಬಲ್‌ಪುರದ ಶಾಲೆಯೊಂದಕ್ಕೆ ಶಿಕ್ಷಕನೊಬ್ಬ ತೂರಾಡಿಕೊಂಡೆ ಬಂದಿದ್ದ. ಬಳಿಕ ಆತನನ್ನು ಅಮಾನತುಗೊಳಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version